ಸಕಲ ಸರಕಾರಿ ಗೌರವಗಳೊಂದಿಗೆ ‘ಅಜಾತಶತ್ರು’ ವಾಜಪೇಯಿ ಅಂತ್ಯಕ್ರಿಯೆ

Update: 2018-08-17 17:35 GMT

# ಹಾಮಿದ್ ಕರ್ಝಾಯಿ, ಭೂತಾನ್ ದೊರೆ ಜಿಗ್ಮಾ ಭಾಗಿ

ಹೊಸದಿಲ್ಲಿ, ಆ.17: ಗುರುವಾರದಂದು ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವ ಹಾಗೂ ವಿಧಿವಿಧಾನಗಳೊಂದಿಗೆ ಶುಕ್ರವಾರ ದಿಲ್ಲಿಯ ಯಮುನಾ ನದಿ ದಡದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನೆರವೇರಿಸಲಾಯಿತು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಎಚ್.ಡಿ. ದೇವೇಗೌಡ, ವಿದೇಶಿ ಗಣ್ಯರಾದ ಭೂತಾನ್‌ನ ದೊರೆ ಜಿಗ್ಮೆ ಕೇಸರ್ ನಮ್ಗೆಲ್ ವಾಂಗ್ಚುಕ್, ಅಪ್ಘಾನಿಸ್ತಾನದ ಹಮೀದ್ ಕರ್ಝಾಯಿ, ಬಾಂಗ್ಲಾದೇಶ ವಿದೇಶಾಂಗ ಸಚಿವ ಅಬುಲ್ ಹಸನ್ ಮಹಮೂದ್ ಅಲಿ ಹಾಗೂ ಪಾಕಿಸ್ತಾನದ ಕಾನೂನು ಸಚಿವ ಅಲಿ ಝಫರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಜನರು ವಾಜಪೇಯಿಯವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.

ಗುರುವಾರ ವಾಜಪೇಯಿಯವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ ದಿಲ್ಲಿಯ ಕೃಷ್ಣ ಮೆನನ್ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು. ಅಲ್ಲಿಂದ ಸೇನಾ ಗೌರವಗಳೊಂದಿಗೆ ದೀನ ದಯಾಳ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಸಾಗಿಸಿ ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮೃತದೇಹವನ್ನು ಹೂವಿನಿಂದ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಯಮುನಾ ನದಿ ದಡದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಸ್ಮೃತಿ ಸ್ಥಳದ ಸಮೀಪವೇ ಮಹಾತ್ಮಾ ಗಾಂಧಿ, ಮಾಜಿ ಪ್ರಧಾನಿಗಳಾದ ಜವಾಹರ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯ ಸ್ಮಾರಕಗಳಿವೆ. ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ಜನರು ಕಿಕ್ಕಿರಿದು ನಿಂತಿದ್ದು ಮೃತದೇಹ ಇರಿಸಲಾಗಿದ್ದ ವಾಹನದ ಮೇಲೆ ಹೂದಳಗಳನ್ನು ಎಸೆದು ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಬಿಜೆಪಿ ಕಚೇರಿಯಿಂದ ಸ್ಮತಿ ಸ್ಥಳಕ್ಕಿರುವ ನಾಲ್ಕು ಕಿ.ಮೀ ದೂರವನ್ನು ನಡೆದುಕೊಂಡೇ ಕ್ರಮಿಸಿದರು. ಅಂತ್ಯಕ್ರಿಯೆಗೂ ಮುನ್ನ ಅಗಲಿದ ನಾಯಕನಿಗೆ ಸಕಲ ಸರಕಾರಿ ಗೌರವನ್ನು ನೀಡಲಾಯಿತು. ಸಮವಸ್ತ್ರ ಧರಿಸಿದ ಯೋಧರು ಕುಶಾಲತೋಪು ಹಾರಿಸಿ ಗೌರವ ಸೂಚಿಸಿದರು. ವಾಜಪೇಯಿಯವರ ದತ್ತುಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ತಂದೆಯ ದೇಹಕ್ಕೆ ಬೆಂಕಿಸ್ಪರ್ಶ ಮಾಡಿದರು. ಮೃತದೇಹದ ಮೇಲೆ ಹಾಸಲಾಗಿದ್ದ ತ್ರಿವರ್ಣ ಧ್ವಜವನ್ನು ವಾಜಪೇಯಿಯವರ ಮೊಮ್ಮಗಳು ನಿಹಾರಿಕಾ ಅವರಿಗೆ ಹಸ್ತಾಂತರಿಸಲಾಯಿತು. ಮೂರು ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದ ಕವಿ ಹೃದಯದ ಅಟಲ್ ಬಿಹಾರಿ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿದ್ದರು ಮತ್ತು ಕೃಷ್ಣ ಮೆನನ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಸೀಮಿತವಾಗಿಬಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News