ಇಂದು ಜಕಾರ್ತಾದಲ್ಲಿ ಏಶ್ಯನ್ ಗೇಮ್ಸ್ ಗೆ ಚಾಲನೆ

Update: 2018-08-17 18:29 GMT

 ಜಕಾರ್ತಾ, ಆ.17:ಹದಿನೆಂಟನೇ ಆವೃತ್ತಿಯ ಏಶ್ಯನ್ ಗೇಮ್ಸ್ ಇಂಡೋನೇಷ್ಯಾದಲ್ಲಿ ಶನಿವಾರ ಆರಂಭಗೊಳ್ಳಲಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನ ಬಳಿಕ ಮತ್ತೊಮ್ಮೆ ಭಾರತದ ಅಥ್ಲೀಟ್‌ಗಳಿಂದ ಪದಕದ ಬೇಟೆ ನಡೆಯಲಿದೆ.

 ಸೆ.2ರ ತನಕ ನಡೆಯಲಿರುವ ಏಶ್ಯನ್ ಗೇಮ್ಸ್‌ಗೆ ಭಾರತದಿಂದ 804 ಮಂದಿಯ ನಿಯೋಗ ತೆರಳಿದ್ದು, ಈ ಪೈಕಿ 572 ಮಂದಿ ಅಥ್ಲೀಟ್‌ಗಳು. 36 ಕ್ರೀಡೆಗಳಲ್ಲಿ 312 ಪುರುಷ ಮತ್ತು 260 ಮಹಿಳಾ ಅಥ್ಲೀಟ್‌ಗಳು ಪದಕದ ಬೇಟೆ ನಡೆಸಲಿದ್ದಾರೆ.

2014ರ ಆವೃತ್ತಿಯಲ್ಲಿ 28 ಕ್ರೀಡೆಗಳಲ್ಲಿ 541 ಅಥ್ಲೀಟ್‌ಗಳು ಭಾಗವಹಿಸಿದ್ದರು. 11 ಚಿನ್ನ, 9 ಬೆಳ್ಳಿ ಮತ್ತು 37 ಕಂಚು ಸೇರಿದಂತೆ 57 ಪದಕಗಳನ್ನು ಭಾರತ ಬಾಚಿಕೊಂಡಿತ್ತು. ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು.

  ಟ್ರಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಭಾರತದ ಅಥ್ಲೀಟ್‌ಗಳು ಈ ವರೆಗೆ 282 ಪದಕಗಳನ್ನು ಪಡೆದಿದ್ದಾರೆ. ಇದರಲ್ಲಿ ಚಿನ್ನ 74. ಏಶ್ಯನ್ ಗೇಮ್ಸ್‌ನ ವಿವಿಧ ಸ್ಪರ್ಧೆಗಳಲ್ಲಿ ಈ ವರೆಗೆ ಭಾರತ 139 ಚಿನ್ನ, 178 ಬೆಳ್ಳಿ ಮತ್ತು 299 ಕಂಚು ಸೇರಿದಂತೆ 616 ಪದಕಗಳನ್ನು ಪಡೆದಿದೆ.

ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ಸೇರಿದಂತೆ 66 ಪದಕ ಪಡೆದು ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಆದರೆ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಏಶ್ಯದ ವಿವಿಧ ದೇಶಗಳ ಬಲಿಷ್ಠ ಅಥ್ಲೀಟ್‌ಗಳ ಸವಾಲು ಎದುರಿಸಬೇಕಾಗಿದೆ. ಚೀನಾ, ಜಪಾನ್ ಮತ್ತು ಕೊರಿಯಾದ ಅಥ್ಲೀಟ್‌ಗಳು ಭಾರತದ ಅಥ್ಲೀಟ್‌ಗಳಿಗೆ ಸವಾಲೊಡ್ಡಲಿದ್ದಾರೆ.

ಭಾರತದ ಪರ ಈ ಬಾರಿ ಹಲವು ಮಂದಿ ಯುವ ಅಥ್ಲೀಟ್‌ಗಳು ಪದಕದ ಭರವಸೆ ಮೂಡಿಸಿದ್ದಾರೆ.

 ಹರ್ಯಾಣದ ಶಾಲಾ ಬಾಲಕಿ 16ರ ಹರೆಯದ ಮನು ಭಾಕರ್ ಶೂಟಿಂಗ್‌ನಲ್ಲಿ , ಜಾವೆಲಿನ್‌ನಲ್ಲಿ ನೀರಜ್ ಚೋಪ್ರಾ, ಓಟಗಾರ್ತಿ ಹಿಮಾ ದಾಸ್ ಪದಕದ ಭರವಸೆ ಮೂಡಿಸಿದ್ದಾರೆ.

 ವಿಶ್ವ ಚಾಂಪಿಯನ್‌ಶಿಪ್‌ನ ಅಂಡರ್-20 ಸ್ಪರ್ಧೆಯಲ್ಲಿ ಹಿಮಾ ದಾಸ್ ಚಿನ್ನ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದರು. ಅಸ್ಸಾಂನ ರೈತನ ಮಗಳು ಹಿಮಾ ದಾಸ್ ಜಕಾರ್ತಾದಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ.

   ಬ್ಯಾಡ್ಮಿಂಟನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಪದಕದ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ವನಿತೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪಡೆದಿದ್ದರು. ಏಶ್ಯನ್ ಗೇಮ್ಸ್ ನಲ್ಲಿ ಮತ್ತೆ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿರುವ ಸಿಂಧು ಅವರು ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲಿದ್ದಾರೆ. ಅವರು ಫೈನಲ್ ತಲುಪುವ ಸಾಧ್ಯತೆ ಇದೆ. ಜಪಾನ್‌ನ ನೊರೊಮಿ ಒಕುಹರಾ ಮತ್ತು ಅಕಾನೆ ಯಮಗುಚಿ , ತೈವಾನ್‌ನ ವರ್ಲ್ಡ್ ನಂ.1 ತೈ ಝು ಯಿಂಗ್ ಮತ್ತು ಸೈನಾ ನೆಹ್ವಾಲ್ ಅವರಿಂದ ಸಿಂಧು ಸವಾಲು ಎದುರಿಸಬೇಕಾಗಿದೆ.

  ಏಶ್ಯನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಸಿಂಗಲ್ಸ್‌ನಲ್ಲಿ ಚೊಚ್ಚಲ ಪದಕ ಜಯಿಸಲು ಎದುರು ನೋಡುತ್ತಿದ್ದಾರೆ. 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸಿದ ಬಳಿಕ ಬಿಡಬ್ಲುಎಫ್ ಟೂರ್ನಮೆಂಟ್‌ನಲ್ಲಿ ಸೈನಾ ಒಂದು ಪದಕವನ್ನು ಜಯಿಸಿಲ್ಲ. 28ರ ಹರೆಯದ ಸೈನಾಗೆ ಈ ಬಾರಿ ಪದಕ ಗೆಲ್ಲುವ ಉತ್ತಮ ಅವಕಾಶ ಇದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಈ ವರೆಗೆ ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. 2014ರಲ್ಲಿ ಭಾರತ ಬರಿಗೈಯಲ್ಲಿ ವಾಪಸಾಗಿತ್ತು.

    ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಶ್ರೀಕಾಂತ್ ಕಳೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಜಯಿಸಿದ್ದರು. ಚೀನಾ, ಮಲೇಷ್ಯಾ ಮತ್ತು ಜಪಾನ್‌ನ ಬ್ಯಾಡ್ಮಿಂಟನ್ ಆಟಗಾರರನ್ನು ಮಣಿಸಲು ಶಕ್ತರಾದರೆ ಅವರಿಗೆ ಪದಕ ಖಚಿತ. ಈ ತನಕ ಏಶ್ಯನ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಭಾರತ 8 ಪದಕಗಳನ್ನು ಜಯಿಸಿದೆ. ಈ ಪೈಕಿ ಪುರುಷರ ತಂಡದ ಕೊಡುಗೆ 3 ಪದಕಗಳು. ಪುರುಷರ ಬ್ಯಾಡ್ಮಿಂಟನ್ ಟೀಮ್ 8 ಪದಕಗಳನ್ನು ಜಯಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ ದುರ್ಬಲವಾಗಿದೆ. ಎಸ್.ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಚೆನ್ನಾಗಿ ಆಡಿದರೆ ಪದಕ ಗೆಲ್ಲಲು ಸಾಧ್ಯ. ಶ್ರೀಕಾಂತ್, ಪ್ರಣಯ್ ಮತ್ತು ಸಾಯಿ ಪ್ರಣೀತ್ ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಪದಕ ದೊರೆಯಬಹುದು. ಪುರುಷರ ತಂಡ 1974, 1982 ಮತ್ತು 1986ರಲ್ಲಿ ಕಂಚು ಪಡೆದಿತ್ತು.

  ಭಾರತ ಮಹಿಳಾ ತಂಡ ಏಶ್ಯನ್ ಗೇಮ್ಸ್‌ನಲ್ಲಿ 2 ಬಾರಿ ಕಂಚು ಜಯಿಸಿದೆ. ಮಹಿಳೆಯರ ವಿಭಾಗದಲ್ಲಿ ಭಾರತದ ತಂಡ ಸಿಂಧು ಮತ್ತು ಸೈನಾರನ್ನೇ ನೆಚ್ಚಿಕೊಂಡಿದೆ. ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಬಹಳಷ್ಟು ಸುಧಾರಿಸಿದ್ದಾರೆ. ಆದರೆ ಅವರು ಜಪಾನ್, ದಕ್ಷಿಣ ಕೊರಿಯಾ ಚೈನಾ ಆಟಗಾರ್ತಿಯರನ್ನು ಎದುರಿಸುವಲ್ಲಿ ಎಡವುತ್ತಿದ್ದಾರೆ.

 ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಪೂನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಟಿಬ್ಲಿಸಿ ಗ್ರಾನ್ ಪ್ರಿ ಮತ್ತು ಯಾಸಾರ್ ಡುಗು ಇಂಟರ್‌ನ್ಯಾಶನಲ್‌ನಲ್ಲೂ ಮಿಂಚಿದ್ದಾರೆ. ಅದೇ ಪ್ರದರ್ಶನವನ್ನು ಜಕಾರ್ತಾದಲ್ಲಿ ಮುಂದುವರಿಸುವುದನ್ನು ನಿರೀಕ್ಷಿಸಲಾಗಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಮತ್ತು ಸಾಕ್ಷಿ ಮಲಿಕ್ ಫಾರ್ಮ್ ಕಳೆದುಕೊಂಡಿದ್ದರೂ ಪದಕದ ನಿರೀಕ್ಷೆಯಲ್ಲಿದ್ದಾರೆ. ಭಾರತದ ಪುರುಷರ ಹಾಕಿ ತಂಡ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವುದದರ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯುವ ಯೋಜನೆಯಲ್ಲಿದೆ. ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಾಕಿ ತಂಡ ಎರಡನೇ ಸ್ಥಾನ ಪಡೆದಿತ್ತು.  ಭಾರತದ ಮಹಿಳಾ ಹಾಕಿ ತಂಡ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲುವ ಮೂಲಕ ಐತಿಹಾಸಿಕ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ರಾಣಿ ರಾಂಪಾಲ್ ನಾಯಕತ್ವದ ಹಾಕಿ ತಂಡ ಪ್ರಶಸ್ತಿಯ ಸುತ್ತು ತಲುಪುವ ವಿಶ್ವಾಸದಲ್ಲಿದೆ.

ಪುರುಷರ ಬಾಕ್ಸಿಂಗ್‌ನಲ್ಲಿ ವಿಕಾಸ್ ಕೃಶನ್, ಶಿವ ಥಾಪಾ, ಗೌರವ್ ಸೋಳಂಕಿ ಮತ್ತು ಮಹಿಳೆಯರ ಬಾಕ್ಸಿಂಗ್‌ನಲ್ಲಿ ಸರ್ಜುಬಾಲಾ ದೇವಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಅವರು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದಿದ್ದರು.

  ಟೆನಿಸ್‌ನಲ್ಲಿ ತಜ್ಞ ಜೊತೆಗಾರ ಸಿಗದ ಹಿನ್ನೆಲೆಯಲ್ಲಿ ಲಿಯಾಂಡರ್ ಪೇಸ್ ಪುರುಷರ ಡಬಲ್ಸ್‌ನಲ್ಲಿ ಆಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಗಾಯದ ಕಾರಣದಿಂದಾಗಿ ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ ಮಾಣಿಕಾ ಬಾತ್ರಾ ಚಿನ್ನದ ನಗೆ ಬೀರುವ ತಯಾರಿಯಲ್ಲಿದ್ದಾರೆ. ಸಿಡಬ್ಲುಜಿಯಲ್ಲಿ ಅವರು ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದರು. ಅವರಿಗೆ ಚೀನಾ ಮತ್ತು ಜಪಾನ್ ಆಟಗಾರ್ತಿಯರ ಸವಾಲು ಎದುರಾಗಲಿದೆ. ಪುರುಷರ ವಿಭಾಗದಲ್ಲಿ ಎ.ಶರತ್ ಕಮಲ್ ಪದಕದ ಬೇಟೆ ನಡೆಸಲಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ದೀಪಾ ಕರ್ಮಾಕರ್ ಅವರು ಜಿಮ್ನಾಸ್ಟಿಕ್‌ನಲ್ಲಿ ಪದಕ ಗೆಲ್ಲುವ ಪ್ರಯತ್ನ ನಡೆಸಲಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ 45 ದೇಶಗಳ ಒಟ್ಟು 10,000ಕ್ಕೂಅಧಿಕ ಅಥ್ಲೀಟ್‌ಗಳು ಪದಕದ ಬೇಟೆಗೆ ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News