ಡಾಬಾ ಗುಡಿಸುತ್ತಿದ್ದ ಯುವತಿಯ ಏಷ್ಯಾಡ್ ಪಯಣ

Update: 2018-08-18 03:30 GMT

ಮನಾಲಿ, ಆ. 18: ಭಾರತೀಯ ಮಹಿಳಾ ಕಬಡ್ಡಿ ತಂಡದ ಸದಸ್ಯೆ ಕವಿತಾ ಠಾಕೂರ್ ತಮ್ಮ ಜೀವನದ ಬಹುಭಾಗವನ್ನು ಹಿಮಾಚಲ ಪ್ರದೇಶದ ಮನಾಲಿಯಿಂದ ಆರು ಕಿಲೋಮೀಟರ್ ದೂರದ ಜಗತ್‌ಸುಖ್ ಹಳ್ಳಿಯ ಇಕ್ಕಟ್ಟಾದ ಡಾಬಾದಲ್ಲೇ ಕಳೆದವರು.

2014ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 24ರ ಯುವತಿ, ತಮ್ಮ ಬಾಲ್ಯ ಹಾಗೂ ಹದಿಹರೆಯವನ್ನು ತಮ್ಮ ಪೋಷಕರು ನಡೆಸುತ್ತಿದ್ದ ಡಾಬಾದಲ್ಲಿ ಪಾತ್ರೆ ತೊಳೆಯುತ್ತಾ, ನೆಲ ಗುಡಿಸುತ್ತಾ ಕಳೆದವರು.

ತಂದೆ ಪೃಥ್ವಿ ಸಿಂಗ್ ಹಾಗೂ ತಾಯಿ ಕೃಷ್ಣಾ ದೇವಿ ಈಗಲೂ ಡಾಬಾದಲ್ಲಿ ಚಹಾ ಮತ್ತು ತಿಂಡಿ ಮಾರುತ್ತಿದ್ದಾರೆ. ಅಕ್ಕ ಕಲ್ಪನಾ ತಂದೆ ತಾಯಿಗೆ ನೆರವಾಗುತ್ತಿದ್ದಾರೆ. "ನಾನು ಕೂಡಾ ತಂದೆ ತಾಯಿ ಜತೆ ಡಾಬಾದಲ್ಲಿ ಕೆಲಸ ಮಾಡುತ್ತೇನೆ. ಪಾತ್ರೆ ತೊಳೆಯುತ್ತೇನೆ. ಕಸ ಗುಡಿಸುತ್ತೇನೆ" ಎಂದು ಕವಿತಾ ಹೇಳುತ್ತಾರೆ.

"ನನ್ನ ಬಾಲ್ಯ ಹಾಗೂ ಹದಿಹರೆಯ ತೀರಾ ಕಷ್ಟಕರ. ಚಳಿಗಾಲದಲ್ಲಿ ನಮ್ಮ ಅಂಗಡಿಯ ಹಿಂದೆ ಮಂಜುಗಡ್ಡೆಯಂತಾಗುತ್ತಿದ್ದ ತಣ್ಣನೆ ನೆಲದಲ್ಲಿ ಮಲಗುತ್ತಿದ್ದೆ. ನಮಗೆ ಹಾಸಿಗೆ ಖರೀದಿಸುವಷ್ಟು ಹಣ ಇರಲಿಲ್ಲ. ಕೆಲವು ದಿನ ಏನೂ ಆದಾಯ ಇಲ್ಲದೇ ಉಪವಾಸ ಇದ್ದದ್ದೂ ಇದೆ" ಎಂದು ವಿವರಿಸುತ್ತಾರೆ.

2014ರ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದದ್ದು ಕವಿತಾ ಭವಿಷ್ಯವನ್ನು ಬದಲಿಸಿತು. ರಾಜ್ಯ ಸರ್ಕಾರ ಕೂಡಾ ಹಣಕಾಸು ನೆರವು ನೀಡಿತು. ಇದರಿಂದ ತಂದೆ, ತಾಯಿ, ಅಕ್ಕ ಮತ್ತು ತಮ್ಮನನ್ನು ಒಳಗೊಂಡ ಕುಟುಂಬ ಮನಾಲಿ ಬಳಿ ಬಾಡಿಗೆ ಮನೆ ಹಿಡಿಯಿತು.

"ವಾಸಕ್ಕೆ ತಂದೆ ತಾಯಿಗೆ ಒಳ್ಳೆಯ ಸೂರು ದೊರಕಿಸಿಕೊಟ್ಟ ಕ್ಷಣ ನನ್ನ ಜೀವನದ ಸಂತಸದ ಕ್ಷಣವಾಗುತ್ತದೆ. ತಮ್ಮ ಇದೀಗ ಒಳ್ಳೆಯ ಶಿಕ್ಷಣ ಪಡೆಯಬಹುದು" ಎನ್ನುತ್ತಾರೆ.

"ಕವಿತಾಳ ಕಠಿಣ ಶ್ರಮ ಹಾಗೂ ಬದ್ಧತೆ ನಮ್ಮ ತಲೆ ಮೇಲೊಂದು ಸೂರು ಕೊಟ್ಟಿತು. ಕೆಲ ವರ್ಷಗಳ ಹಿಂದೆ ನಮ್ಮ ಡಾಬಾದಿಂದ ಹೊರಗೆ ನಾವು ಜೀವನ ಸಾಗಿಸಬಹುದು ಎಂಬ ಕನಸು ಕೂಡಾ ಕಂಡಿರಲಿಲ್ಲ. ಆಕೆ ದೇಶಕ್ಕೆ ಇನ್ನಷ್ಟು ಕೀರ್ತಿ ತರಬೇಕು ಎನ್ನುವುದು ನಮ್ಮ ಬಯಕೆ" ಎಂದು ತಾಯಿ ಕೃಷ್ಣಾದೇವಿ ಹೇಳುತ್ತಾರೆ.

2007ರಲ್ಲಿ ಶಾಲಾ ದಿನಗಳಲ್ಲಿ ಕವಿತಾ ಕಬಡ್ಡಿ ಆಡುತ್ತಿದ್ದರು. "ಇದು ಅಗ್ಗದ ಕ್ರೀಡೆ ಎಂಬ ಕಾರಣಕ್ಕೆ ಅದನ್ನು ಆಯ್ಕೆ ಮಾಡಿಕೊಂಡೆ. ನನ್ನ ಅಕ್ಕ ನನಗಿಂತಲೂ ಉತ್ತಮ ಆಟಗಾರ್ತಿ. ಆದರೆ ಡಾಬಾದಲ್ಲಿ ತಂದೆ ತಾಯಿಗೆ ನೆರವಾಗುವ ಸಲುವಾಗಿ ಉನ್ನತ ಮಟ್ಟದಲ್ಲಿ ಆಡುವ ತಮ್ಮ ಕನಸನ್ನು ಬಿಟ್ಟುಬಿಟ್ಟರು" ಎಂದು ಕವಿತಾ ವಿವರಿಸುತ್ತಾರೆ.

ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಕವಿತಾ 2009ರಲ್ಲಿ ಧರ್ಮಶಾಲಾದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಸೇರಿದರು. ಅಲ್ಲಿನ ಮೂಲಸೌಕರ್ಯ, ತರಬೇತಿ, ಪೋಷಕರ ಪ್ರೋತ್ಸಾಹ, ಸರ್ಕಾರದ ನೆರವಿನಿಂದ ಕ್ರೀಡೆಯಲ್ಲಿ ಸಾಧನೆ ಮಾಡುವುದು ಸಾಧ್ಯವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ. ಜೀರ್ಣ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಸಲುವಾಗಿ 2011ರಲ್ಲಿ ಆರು ತಿಂಗಳು ಕ್ರೀಡೆಯಿಂದ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News