ಕೇರಳದಲ್ಲಿ ನೆರೆ: ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

Update: 2018-08-18 15:15 GMT

 ಕೊಚ್ಚಿ, ಆ.18: ಭಾರೀ ಮಳೆಯಿಂದ ಬಾಧಿತವಾಗಿರುವ ಕೇರಳ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಕೊಚ್ಚಿಯ ನೌಕಾನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್,ರಾಜ್ಯಪಾಲ ಪಿ.ಸದಾಶಿವಂ, ಕಂದಾಯ ಸಚಿವ ಇ. ಚಂದ್ರಶೇಖರನ್ ಹಾಗೂ ಇತರ ಅಧಿಕಾರಿಗಳ ಜೊತೆಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

 ಶತಮಾನದ ಭೀಕರ ಮಳೆಯಿಂದ ತತ್ತರಿಸಿಹೋಗಿರುವ ಕೇರಳಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ನಿಧಿಯಿಂದ 500 ಕೋ.ರೂ. ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡುವುದಾಗಿ ಪ್ರಧಾನಿ ಸಭೆಯಲ್ಲಿ ಘೋಷಿಸಿದರು. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಕಳೆದ ವಾರ 100 ಕೋ.ರೂ.ಪರಿಹಾರ ಘೋಷಿಸಿದ್ದರು.

 ಇಂದು ನಡೆದ ಸಭೆಯಲ್ಲಿ ಪ್ರಧಾನಿ ಅವರು ಪ್ರವಾಹದಿಂದ ಪ್ರಾಣ ಕಳೆದುಕೊಂಡಿರುವ ಕುಟುಂಬದ ಸದಸ್ಯರಿಗೆ ತಲಾ 2 ಲಕ್ಷ ರೂ. ಹೆಚ್ಚು ಹೆಚ್ಚುವರಿ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ. 500 ಕೋ.ರೂ. ಪರಿಹಾರವನ್ನು ಗಂಭೀರ ಗಾಯಗೊಂಡಿರುವ ಕುಟುಂಬಕ್ಕೆ ನೀಡಲಾಗುತ್ತದೆ.

ಪ್ರಾಥಮಿಕ ಅಂದಾಜಿನ ಪ್ರಕಾರ ಕೇರಳದ ಪ್ರವಾಹದಿಂದಾಗಿ ಸುಮಾರು 19,000 ಕೋ.ರೂ.ನಷ್ಟವಾಗಿದೆ ಎಂದು ಮುಖ್ಯಮಂತ್ರಿ ವಿಜಯನ್ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

 ಮಳೆಯಿಂದಾಗಿ ಹಾನಿಯಾಗಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ಕೇರಳಕ್ಕೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ತಿರುವನಂತಪುರದಲ್ಲಿ ಮುಖ್ಯಮಂತ್ರಿ ವಿಜಯನ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದ ಪರಿಸ್ಥಿತಿಯನ್ನು ಅವಲೋಕಿಸಿದರು.

ಕೇರಳದ ನೆರವಿಗಾಗಿ ಕ್ರಮಗಳು

*ಸಾಮಾಜಿಕ ಯೋಜನೆಗಳಡಿ ಸಂತ್ರಸ್ತ ಕುಟುಂಬಗಳು ಮತ್ತು ಫಲಾನುಭವಿಗಳಿಗೆ ಸಕಾಲದಲ್ಲಿ ಪರಿಹಾರ ಬಿಡುಗಡೆಗಾಗಿ ವಿಶೇಷ ಶಿಬಿರಗಳನ್ನು ನಡೆಸುವಂತೆ ವಿಮಾ ಕಂಪನಿಗಳಿಗೆ ಸೂಚನೆ. ಫಸಲ್ ಬಿಮಾ ಯೋಜನೆಯಡಿ ರೈರಿಗೆ ಶೀಘ್ರ ವಿಮೆ ಹಣ ಪಾವತಿಸುವಂತೆ ನಿರ್ದೇಶ

* ಹಾನಿಗೀಡಾಗಿರುವ ಮುಖ್ಯ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿಗೊಳಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ ಆದೇಶ

* ವಿದ್ಯುತ್ ಸಂಪರ್ಕದ ಮರುಸ್ಥಾಪನೆಯಲ್ಲಿ ರಾಜ್ಯ ಸರಕಾರಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುವಂಂತೆ ಎನ್‌ಟಿಪಿಸಿ ಮತ್ತು ಪಿಜಿಸಿಐಲ್‌ನಂತಹ ಕೇಂದ್ರ ಸರಕಾರಿ ಸ್ವಾಮ್ಯದ ಕಂಪನಿಗಳಿಗೆ ಸೂಚನೆ

* ನೆರೆಯಿಂದಾಗಿ ತಮ್ಮ ಕಚ್ಚಾ ಮನೆಗಳನ್ನು ಕಳೆದುಕೊಂಡಿರುವ ಗ್ರಾಮಸ್ಥರಿಗೆ ಆದ್ಯತೆಯ ನೆಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯ ಮನೆಗಳ ವಿತರಣೆ

* ನರೇಗಾ ಯೋಜನೆಯಡಿ ಕಾರ್ಮಿಕ ಮುಂಗಡಪತ್ರ 2018-19ರಲ್ಲಿ 5.5 ಕೋಟಿ ಮಾನವ ದಿನಗಳ ಮಂಜೂರು. ಮಾನವ ದಿನಗಳನ್ನು ಹೆಚ್ಚಿಸುವಂತೆ ರಾಜ್ಯ ಸರಕಾರ ಕೋರಿದರೆ ಪರಿಶೀಲಿಸುವ ಭರವಸೆ

* ಏಕೀಕೃತ ತೋಟಗಾರಿಕೆ ಅಭಿವೃದ್ಧಿ ಅಭಿಯಾನದಡಿ ಹಾನಿಗೀಡಾಗಿರುವ ತೋಟಗಾರಿಕೆ ಬೆಳೆಗಳ ಮರುತೋಟ ನಿರ್ಮಾಣಕ್ಕಾಗಿ ರೈತರಿಗೆ ಆರ್ಥಿಕ ನೆರವು

“ಕೇರಳದ ಜನರ ಹೋರಾಡುವ ಛಲಕ್ಕೆ ನನ್ನ ವಂದನೆಗಳು. ಈ ಸಂಕಷ್ಟದ ಘಳಿಗೆಯಲ್ಲಿ ಇಡೀ ದೇಶವೇ ಕೇರಳದೊಂದಿಗೆ ದೃಢವಾಗಿ ನಿಂತಿದೆ. ರಾಜ್ಯಾದ್ಯಂತ ನಿರಂತರ ನೆರೆಯಿಂದಾಗಿ ಪ್ರಾಣಗಳನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಆಶಿಸಿದ್ದೇನೆ. ಕೇರಳದ ಜನರ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ನಾವು ಪ್ರಾರ್ಥಿಸುತ್ತೇವೆ.”

ಪ್ರಧಾನಿ ನರೇಂದ್ರ ಮೋದಿ

“ಪ್ರಾಥಮಿಕ ಅಂದಾಜುಗಳಂತೆ ರಾಜ್ಯವು 19,152 ಕೋ.ರೂ.ಗಳ ಹಾನಿಯನ್ನು ಅನುಭವಿಸಿದೆ. ನೆರೆಪೀಡಿತ ಪ್ರದೇಶಗಳಲ್ಲಿ ನೀರು ತಗ್ಗಿದ ಬಳಿಕವಷ್ಟೇ ನಿಜವಾದ ಹಾನಿಯ ಪ್ರಮಾಣವನ್ನು ತಿಳಿಯಬಹುದು. ರಾಜ್ಯವು 2,000 ಕೋ.ರೂ.ಗಳ ತುರ್ತು ಪರಿಹಾರಕ್ಕಾಗಿ ಕೋರಿಕೊಂಡಿದೆ.”

ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ

 ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ

ಎಲ್ಲ ಮೂರೂ ಸಶಸ್ತ್ರ ಪಡೆಗಳ ನೇತೃತ್ವದಲ್ಲಿ ಎನ್‌ಡಿಆರ್‌ಎಫ್ ಪಡೆಗಳೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.

 ನೆರೆಯಲ್ಲಿ ಸಿಕ್ಕಿಕೊಂಡಿರುವ ಜನರನ್ನು ತೆರವುಗೊಳಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲು 38 ಹೆಲಿಕಾಪ್ಟರ್‌ಗಳನ್ನು ತೊಡಗಿಸಲಾಗಿದೆ. ಸಂಪನ್ಮೂಲ ಸಾಗಾಟಕ್ಕೆ 20 ವಿಮಾನಗಳನ್ನು ಬಳಸಲಾಗುತ್ತಿದೆ.

ಸುಮಾರು 70,000 ಜನರನ್ನು ಈವರೆಗೆ ರಕ್ಷಿಸಲಾಗಿದೆ. ಇನ್ನೂ ಸುಮಾರು 6,000 ಜನರು ಸ್ಥಳಾತರಕ್ಕಾಗಿ ಕಾಯುತ್ತಿದ್ದಾರೆ.

 ಸೇನೆಯು ತನ್ನ 790 ಯೋಧರನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಿದೆ. ಇದರ ಜೊತೆಗೆ ನೌಕಾಪಡೆಯ 82 ತಂಡಗಳು,ತಟರಕ್ಷಣಾ ಪಡೆಯ 42 ತಂಡಗಳು ಮತ್ತು ಅರೆ ಮಿಲಿಟರಿ ಪಡೆಗಳ ಐದು ಕಂಪನಿಗಳೂ ರಕ್ಷಣಾ ಮತ್ತು ಪರಿಹಾರ ಕಾರ್ಯಚರಣೆಗಳಲ್ಲಿ ಶ್ರಮಿಸುತ್ತಿವೆ. 400ಕ್ಕೂ ಅಧಿಕ ಬೋಟುಗಳನ್ನು ತೊಡಗಿಸಿಕೊಳ್ಳಲಾಗಿದೆ. ಪಟ್ಟಣಂಥಿಟ್ಟ ಜಿಲ್ಲೆಯಲ್ಲಿ ಕರಾವಳಿ ಗ್ರಾಮಗಳ ನೂರಾರು ಮೀನುಗಾರರು ತಮ್ಮ ದೋಣಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಶನಿವಾರ ಬೆಳಿಗ್ಗೆ ರಕ್ಷಣಾ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಂದ ಇನ್ನಷ್ಟು ಹೆಲಿಕಾಪ್ಟರ್‌ಗಳಿಗಾಗಿ ಬೇಡಿಕೆ.

ಇನ್ನೂ ಗಂಭೀರ

ಪರಿಹಾರ ಸೇವೆಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ,ದಯವಿಟ್ಟು ನೆರವಾಗಿ ಎಂದು ಆತಂಕದಲ್ಲಿರುವ ಜನರ ಮೊರೆಗಳು ಸಾಮಾಜಿಕ ಮಾಧ್ಯಮಗಳಿಗೆ ಹರಿದು ಬರುತ್ತಿವೆ. ಪೆರಿಯಾರ್ ನದಿ ಮತ್ತು ಅದರ ಉಪನದಿಗಳು ಎರ್ನಾಕುಳಂ ಮತ್ತು ತ್ರಿಶೂರು ಜಿಲ್ಲೆಗಳಲ್ಲಿ ಹಲವಾರು ಪಟ್ಟಣಗಳನ್ನು ಮುಳುಗಿಸಿವೆ. ಅಲಪುಝಾ,ಎರ್ನಾಕುಳಂ,ತ್ರಿಶೂರು ಮತ್ತು ಪಟ್ಟಣಂಥಿಟ್ಟ ಜಿಲ್ಲೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಆತಂಕದ ಸ್ಥಿತಿ ಸೃಷ್ಟಿಯಾಗಿದೆ.

 ಮರಗಳು ಮತ್ತು ಕಟ್ಟಡಗಳ ಛಾವಣಿಗಳ ಮೇಲೆ ಆಶ್ರಯ ಪಡೆದಿರುವ ಸಾವಿರಾರು ಜನರು ಈಗಲೂ ರಕ್ಷಣೆಗಾಗಿ ಕಾಯುತ್ತಿದ್ದಾರೆ. ನೀರು ಪರಿಹಾರ ಶಿಬಿರಗಳಿಗೂ ನುಗ್ಗತೊಡಗಿದೆ. ದೇವಸ್ಥಾನಗಳು,ಆಸ್ಪತ್ರೆಗಳು ಮತ್ತು ತಮ್ಮ ಮನೆಗಳಲ್ಲಿ ಸಿಕ್ಕಿಹಾಕಿಕೊಂಡವರಿಂದಲೂ ನೆರವಿಗಾಗಿ ಕೋರಿಕೆಗಳ ಮಹಾಪೂರವೇ ಬರುತ್ತಿದೆ.

10,000 ಕಿ.ಮೀ.ಗೂ ಹೆಚ್ಚಿನ ರಸ್ತೆಗಳು ಮತ್ತು ಸಾವಿರಾರು ಮನೆಗಳು ನಾಶಗೊಂಡಿವೆ ಅಥವಾ ಹಾನಿಗೀಡಾಗಿವೆ. ರಾಜ್ಯದ ಅರ್ಧಕ್ಕೂ ಹೆಚ್ಚಿನ ಭಾಗದಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಕೊಚ್ಚಿ ವಿಮಾನ ನಿಲ್ದಾಣ ಕನಿಷ್ಠ ಆ.26ರವರೆಗೆ ಮುಚ್ಚಿರಲಿದೆ. ರಾಜ್ಯಾದ್ಯಂತ ರೈಲು ಮತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಮುಂದುವರಿದಿದೆ.

ಆಸ್ಟ್ರೇಲಿಯಾ,ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿರುವ ಅನಿವಾಸಿ ಕೇರಳೀಯರು ತಮ್ಮ ಕುಟುಂಬಗಳಿಗೆ ನೆರವಾಗುವಂತೆ ಅಧಿಕಾರಿಗಳಿಗ ಮೊರೆಯಿಡುತ್ತಿದ್ದಾರೆ. ಕೇರಳಕ್ಕ್ಕೆ ನೆರವಾಗಲು ರಾಷ್ಟ್ರೀಯ ತುರ್ತು ಸಮಿತಿಯನ್ನು ರೂಪಿಸಲು ಯುಎಇ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News