ಐಸಿಸ್ ಬೆಂಬಲಿಗನೆಂಬ ಶಂಕೆ: ಕಾಶ್ಮೀರದ ಇಂಜಿನಿಯರ್ ಯುಎಇಯಿಂದ ಗಡೀಪಾರು

Update: 2018-08-19 18:20 GMT

ಶ್ರೀನಗರ, ಆ.19: ನಿಷೇಧಿತ ಐಸಿಸ್ ಸಂಘಟನೆಯ ಪರ ಸಹಾನುಭೂತಿ ಹೊಂದಿರುವ ಶಂಕೆಯಲ್ಲಿ ಕಾಶ್ಮೀರದ ವ್ಯಕ್ತಿಯೊಬ್ಬನನ್ನು ಇತ್ತೀಚೆಗೆ ಯುಎಇಯಿಂದ ಗಡೀಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ಹೊರವಲಯದ ನಿವಾಸಿ ಇರ್ಫಾನ್ ಅಹ್ಮದ್ ಝರ್ಗರ್ (36 ವರ್ಷ) ಎಂಬಾತನನ್ನು ಆಗಸ್ಟ್ 14ರಂದು ಯುಎಇಯಿಂದ ಗಡೀಪಾರು ಮಾಡಲಾಗಿದೆ. ಆತನನ್ನು ರಾಷ್ಟ್ರೀಯ ತನಿಖಾ ಸಮಿತಿ ಸೇರಿದಂತೆ ಹಲವು ಭದ್ರತಾ ಏಜೆನ್ಸಿಗಳು ತನಿಖೆ ನಡೆಸಿದ ಬಳಿಕ ಜಮ್ಮು ಕಾಶ್ಮೀರದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆದರೆ ಆತನ ವಿರುದ್ಧ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ಬಾಕಿಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇರ್ಫಾನ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯನಾಗಿದ್ದ ಮತ್ತು ಸಿರಿಯಾದಲ್ಲಿ ಐಸಿಸ್ ಸಂಘಟನೆ ನಡೆಸುತ್ತಿದ್ದ ಕಾರ್ಯಗಳನ್ನು ಶ್ಲಾಘಿಸುತ್ತಿದ್ದ. ಈತನನ್ನು ಒಮಾನ್ ಮೂಲಕ ಯುಎಇ ಪ್ರವೇಶಿಸುವ ಪ್ರಯತ್ನದಲ್ಲಿದ್ದಾಗ ದುಬೈಯಲ್ಲಿ ಈ ವರ್ಷದ ಎಪ್ರಿಲ್ 28ರಂದು ಅಧಿಕಾರಿಗಳು ಬಂಧಿಸಿದ್ದರು. ದುಬೈಯಲ್ಲಿ ಟೆಲಿಕಾಂ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾನು ಕರಕುಶಲ ವಸ್ತುಗಳ ಉದ್ಯಮವನ್ನು ಒಮಾನ್‌ನಲ್ಲಿ ಆರಂಭಿಸಲು ಅಲ್ಲಿಗೆ ತೆರಳಿದ್ದೆ ಎಂದು ಇರ್ಫಾನ್ ಹೇಳಿಕೆ ನೀಡಿದ್ದ.

ಬಳಿಕ ಆತ ವಾಸವಿದ್ದ ಶಾರ್ಜಾದ ಅಪಾರ್ಟ್‌ಮೆಂಟ್‌ನಲ್ಲಿ ಪೊಲೀಸರು ವ್ಯಾಪಕ ಶೋಧ ನಡೆಸಿ ಆತನನ್ನು ಹೆಚ್ಚಿನ ವಿಚಾರಣೆಗಾಗಿ ರಹಸ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.

ಈ ಮಧ್ಯೆ, ಇರ್ಫಾನ್ ಪ್ರಕರಣದಲ್ಲಿ ಸಹಾಯ ಮಾಡುವಂತೆ ಆತನ ಸಂಬಂಧಿಕರು ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ಗೆ ಟ್ವಿಟರ್‌ನಲ್ಲಿ ಕೋರಿಕೆ ಸಲ್ಲಿಸಿದ್ದರು. ಕೋರಿಕೆಯನ್ನು ಪುರಸ್ಕರಿಸಿದ್ದ ಸುಷ್ಮಾ, ಇರ್ಫಾನ್‌ರನ್ನು ಪತ್ತೆ ಹಚ್ಚುವಂತೆ ದುಬೈಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ ತಮ್ಮ ವಿಚಾರಣೆ ಮುಗಿಯುವವರೆಗೆ ಇರ್ಫಾನ್ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ದುಬಾಯಿಯ ಅಧಿಕಾರಿಗಳು ತಿಳಿಸಿದ್ದರು. ಆತನನ್ನು ಆಗಸ್ಟ್ 14ರಂದು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಭಯೋತ್ಪಾದಕ ತಂಡಗಳ ಬಗ್ಗೆ ಸಹಾನುಭೂತಿ ಹೊಂದಿರುವ ಕಾರಣಕ್ಕೆ ಗಡೀಪಾರು ಮಾಡಲ್ಪಟ್ಟಿರುವ ಮೂರನೇ ಕಾಶ್ಮೀರ ಪ್ರಜೆಯಾಗಿದ್ದಾನೆ ಇರ್ಫಾನ್. ಮೇ 25ರಂದು ಅಫ್ಶಾನ್ ಪರ್ವೇಝ್ ಎಂಬಾತನನ್ನು ಟರ್ಕಿಯ ರಾಜಧಾನಿ ಅಂಕಾರದಿಂದ ಹಾಗೂ ಮಾರ್ಚ್ 23ರಂದು ಅಝರುಲ್ ಇಸ್ಲಾಂ ಎಂಬಾತನನ್ನು ಯುಎಇಯಿಂದ ಗಡೀಪಾರು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News