ಪ್ರಕೃತಿ ಮೇಲಿನ ನಿರಂತರ ದಾಳಿಗೆ ನಲುಗುತ್ತಿದೆ ಜನಜೀವನ

Update: 2018-08-19 18:42 GMT

ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ

ನೆರೆ ರಾಜ್ಯ ಕೇರಳ ಹಾಗೂ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಮಹಾಮಳೆಗೆ ಅಪಾರ ಜೀವರಾಶಿಗಳ ನಾಶದೊಂದಿಗೆ ಜನಜೀವನವೇ ತತ್ತರಗೊಂಡಿದೆ. ಇದಕ್ಕೆ ಪ್ರಮುಖ ಕಾರಣ ಜೀವ ಸಂಕುಲದ ಸಂರಕ್ಷಣೆಯನ್ನು ಮಾಡುವ ಪ್ರಕೃತಿ ಮೇಲಿನ ಮಾನವ ನಿರ್ಮಿತ ನಿರಂತರ ದಾಳಿ ಎಂಬ ಪರಿಸರವಾದಿಗಳು ಹಲವು ಸಮಯದಿಂದ ನೀಡುತ್ತಿರುವ ಎಚ್ಚರಿಕೆಯ ಮಾತುಗಳನ್ನು ನಾವಿಂದು ಆಲಿಸಲೇಬೇಕಾಗಿದೆ.
ಕೃಷಿ ಭೂಮಿಯಲ್ಲೆಲ್ಲಾ ಕಟ್ಟಡಗಳು ತಲೆ ಎತ್ತಿವೆ. ಗದ್ದೆ, ಹೊಲಗಳು ಮಾಯವಾಗಿವೆ. ಮಾತ್ರವಲ್ಲದೆ, ಭೂ ಪ್ರದೇಶದ ಸಂರಕ್ಷಣೆಯ ಹೊದಿಕೆಯಾಗಿರುವ ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ದಾಳಿ ಮುಂದುವರಿದಿದೆ. ನಮಗೆ ಅಭಿವೃದ್ಧಿಯ ಅಗತ್ಯವಿದೆ. ರಸ್ತೆ, ರೈಲು ಸೇರಿದಂತೆ ಸಂಪರ್ಕಗಳು ಬೇಕಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶಕ್ಕೆ ಮುಂದಾದ ಪರಿಣಾಮವಾಗಿ ನಾವು ದುರಂತಗಳನ್ನು ಎದುರಿಸಬೇಕಾ ಪರಿಸ್ಥಿತಿ ಇದೀಗ ನಮ್ಮೆದುರುಗಿದೆ.
ಪ್ರಕೃತಿಯ ಮುನಿಸಿನ ಮುಂದೆ ಏನೂ ಇಲ್ಲ ಎಂಬುದು ಇದೀಗ ಕೇರಳ ಮತ್ತು ಕೊಡಗು ಜಿಲ್ಲೆಗಳಲ್ಲಿ ನಾವು ನೋಡುತ್ತಿರುವ ದುರಂತಗಳೇ ಸಾಕ್ಷಿ. ಪ್ರಕೃತಿಯ ಮುನಿಸು ಇನ್ನಷ್ಟು ತೀವ್ರಗೊಂಡು ಜೀವಕುಲ ಇನ್ನಷ್ಟು ಮಹಾದುರಂತಕ್ಕೆ ಒಳಗಾಗುವ ಮುನ್ನ ಇನ್ನಾದರೂ ನಾವು ಜೀವಪರರಾಗಿ ಯೋಚಿಸುವ ಜತೆಗೆ ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ ಎನ್ನುವುದು ಸದ್ಯ ಪರಿಸರ ಪ್ರೇಮಿಗಳಿಂದ ವ್ಯಕ್ತವಾಗುತ್ತಿರುವ ಮಾತುಗಳು.
ಪಶ್ಚಿಮ ಘಟ್ಟದಲ್ಲಿ ಶಿರಾಡಿ, ಚಾರ್ಮಾಡಿ ಘಾಟಿಗಳು ಕುಸಿಯುತ್ತಿವೆೆ. ಇದಕ್ಕೆ ಪ್ರಮುಖ ಕಾರಣ, ನಮ್ಮ ಪಶ್ಚಿಮ ಘಟ್ಟದ ತುದಿ ಭಾಗ ತುಂಬಾ ಸೂಕ್ಷ್ಮ ಹಾಗೂ ಮೆದುವಾದ ಹುಲ್ಲುಗಾವಲಿನ ಪ್ರದೇಶ. ಕೆಳಗಡೆ ಕಲ್ಲುಬಂಡೆಗಳ ಪದರ. ನಡುವೆ ಘಾಟಿ ರಸ್ತೆಗಳು. ಘಟ್ಟದ ಮೇಲ್ಪದರದ ಹುಲ್ಲುಗಾವಲಿನ ಪ್ರದೇಶ ನೀರನ್ನು ಸಂಗ್ರಹಿಸುವ ಪಾತ್ರೆ ಇದ್ದಂತೆ. ಆರು ತಿಂಗಳ ಮಳೆ ನೀರನ್ನು ಇಂಗಿಕೊಂಡು ಅದನ್ನು ಸಂಗ್ರಹಿಸಿಡುವ ಸಾಮರ್ಥ್ಯ ಇರುವ ಪ್ರದೇಶ. ಆ ನೀರನ್ನು ನಮ್ಮ ಶೋಲಾ ಫಾರೆಸ್ಟ್ (ದಟ್ಟಡವಿ)ಗೆ ಪೂರೈಸುತ್ತಿದೆ. ಆದರೆ ನಮ್ಮ ಹುಲ್ಲುಗಾವಲು ಪ್ರದೇಶವನ್ನು ರೆಸಾರ್ಟ್, ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳು, ಬೇಟೆಗಾರಿಕೆಗಾಗಿ ಾವು ಈಗಾಗಲೇ ಹಾಳು ಮಾಡಿದ್ದೇವೆ.
ಇತ್ತೀಚೆಗೆ ಧಾರಾಕಾರವಾಗಿ ಮಳೆ ಸುರಿದಾಗ ಪಶ್ಚಿಮ ಘಟ್ಟದ ನೀರಿನ ಹರಿವಿನ ಪ್ರದೇಶವಾದ ಜಲಪಾತಗಳಲ್ಲಿ ಸಂಗ್ರಹದ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಹರಿಯಿತು. ಆದಾಗಲೇ ಹಲವಾರು ಯೋಜನೆಗಳಿಂದ ಮೃದುವಾದ ಮೇಲ್ಪದರ ಹಾನಿಗೊಂಡಿದೆ. ಇದೀಗ ನಿರಂತರ ಐದು ದಿನಗಳ ಮಳೆಯಿಂದಾಗಿ ಜಲಪಾತದಿಂದ ನೀರು ಉಕ್ಕಿ ಹರಿದಾಗ ಮೃದು ಮಣ್ಣು ಕರಗಿ ಬೀಳಲಾರಂಭಿಸಿತು. ಹುಲ್ಲುಗಾವಲು ಪ್ರದೇಶಕ್ಕೆ ಹಾನಿ ಮಾಡದಿರುತ್ತಿದ್ದರೆ ಇಂದು ನಾವು ಇಂತಹ ಅನಾಹುತವನ್ನು ಎದುರಿಸಬೇಕಾದ ಪರಿಸ್ಥಿತಿ ಇರುತ್ತಿರ ಲಿಲ್ಲ ಎಂದು ಅಭಿಪ್ರಾಯಿಸುತ್ತಾರೆ ಪರಿಸಪ್ರೇಮಿ, ಚಾರಣಿಗ ದಿನೇಶ್ ಹೊಳ್ಳ.
ಸರಳವಾಗಿ ಹೇಳಬೇಕೆಂದರೆ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಂಡಿರುವ ಮಾರನಹಳ್ಳಿ ಪ್ರದೇಶದಲ್ಲಿ ಘಾಟಿ ಕುಸಿದಿದೆ. ಏತಮಾರನ ಹಳ್ಳಿಯಲ್ಲಿ ಘಾಟಿ ಕುಸಿಯಿತು. ಹೆಬ್ಬಸಾಲೆ, ಸತ್ತಿಗಾಲದ ಮೃದುಪ್ರದೇಶದಲ್ಲಿ ಮಣ್ಣು ತೆಗೆದು ಹುಲ್ಲುಗಾವಲು ನಾಶವಾಗಿದೆ. ಆ ಪ್ರದೇಶವೀಗ ಮನುಷ್ಯನ ದೇಹದಿಂದ ಚರ್ಮವನ್ನೇ ತೆಗೆದಂತಾಗಿದೆ.
ಪಶ್ಚಿಮ ಘಟ್ಟದಲ್ಲಿ ಕಾಡ್ಗಿಚ್ಚು ಮತ್ತೊಂದು ದೊಡ್ಡ ಅನಾಹುತ. ಈ ಬಗ್ಗೆ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಇಂತಹ ಸಾಮಾನ್ಯವಾದ ಕಾಡ್ಗಿಚ್ಚನ್ನು ತಡೆದುಕೊಳ್ಳುವ ಶಕ್ತಿ ಪ್ರಕೃತಿಗೆ ಇರುತ್ತದೆ. ಆದರೆ ಒಂದೇ ಪ್ರದೇಶದಲ್ಲಿ ಆಗಾಗ ಬೆಂಕಿ ಬಿದ್ದರೆ ಅದನ್ನು ತಡೆಯಲು ಪ್ರಕೃತಿಗೂ ಅಸಾಧ್ಯ. ಇತ್ತೀಚೆಗೆ ನಾವು ಸೊಪ್ಪಿನಗುಡ್ಡ, ರಾಮನಗುಡ್ಡಕ್ಕೆ ಭೇಟಿ ನೀಡಿದ ವೇಳೆ ಒಂದೇ ಪ್ರದೇಶದಲ್ಲಿ ಮೂರರಿಂದ ನಾಲ್ಕು ಬಾರಿ ಬೆಂಕಿ ಬಿದ್ದಿದೆ. ಆ ಬೆಂಕಿ ಹುಲ್ಲುಗಾವಲಿನ ಹುಲ್ಲಿನ ಬೇರು ಸಹಿತ ಉರಿದು, ಮಣ್ಣು ತಡೆಯುವ ಶಕ್ತಿ ಇಲ್ಲದೆ, ಮಳೆ ನೀರನ್ನು ತಡೆಯಲಾದೆ ಕುಸಿತಕ್ಕೆ ಕಾರಣ ವಾಗುತ್ತದೆ.


ಸರಕಾರ ಒಂದು ಕಡೆ ಕಾಡು ಉಳಿಸಿ, ಪಶ್ಚಿಮ ಘಟ್ಟ ಉಳಿಸಿ ಎಂಬ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅದೇ ವೇಳೆ, ಮತ್ತೊಂದೆಡೆ ಜನಸಾಮಾನ್ಯರಿಗೆ ತಿಳಿಯದಂತೆ ಪಶ್ಚಿಮ ಘಟ್ಟವು ಟಿಂಬರ್, ಗಾಂಜಾ, ರೆಸಾರ್ಟ್, ಎಸ್ಟೇಟ್ ಮಾಫಿಯಾದಿಂದ ಕಬಳಿಕೆ ಆಗಿದೆ. ಕೇರಳದ ಇಡುಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಅನಾಹುತ ಸಂಭವಿಸಿದೆ. ಅಲ್ಲಿಯ ಪಂಪಾ, ಪೆರಿಯ ನದಿಗಳಲ್ಲಿ ಅದೆಷ್ಟು ಮಿನಿ ಹೈಡಲ್ (ಜಲವಿದ್ಯುತ್) ಪ್ರಾಜೆಕ್ಟ್ ಗಳನ್ನು ಮಾಡಿದ್ದಾರೆಂದರೆ, ಧಾರಣಾಶಕ್ತಿಯನ್ನು ಮೀರಿ ಪರಿಸರ ವಿನಾಶಕ ಕಾರ್ಯ ನಡೆದಿದೆ. ಇದು ಸರಕಾರ ಮತ್ತು ನಮ್ಮ ಜನರ ಅತೀ ಕೊಳ್ಳುಬಾಕತನದ ಪರಿಣಾಮ ಎಂದೇ ನಾವು ಹೇಳಬೇಕಾಗುತ್ತದೆ.
ಎತ್ತಿನ ಹೊಳೆಯ ಬಾಧಕಗಳ ಬಗ್ಗೆ ಅದೆಷ್ಟು ಕೂಗಿ ಹೇಳಿದರೂ ಅದನ್ನು ಮುಂದುವರಿಸಲಾಗಿದೆ. ಶಿರಾಡಿ ಘಾಟಿಯಲ್ಲಿ ಇತ್ತೀಚೆಗಷ್ಟೆ ಕಾಮಗಾರಿ ಆಗಿ ಭೂಕುಸಿತ ಸಂಭವಿಸಿದೆ. ನದಿ ಮೂಲವನ್ನು ಅದರ ಪಾಡಿಗೆ ಬಿಟ್ಟಲ್ಲಿ ಮಾತ್ರವೇ ದುರಂತಗಳನ್ನು ತಪ್ಪಿಸಲು ಸಾಧ್ಯ.ನದಿ ಮೂಲ ಅಗೆದು, ಮಲೆಕಾಡು ತೆಗೆದು ಅಲ್ಲಿ ಯೋಜನೆಗಳನ್ನು ರೂಪಿಸುತ್ತೇವೆ ಎಂದಾದರೆ ಮತ್ತಷ್ಟು ದುರಂತಗಳಿಗೆ ನಾವು ಸಿದ್ಧರಾಗಿರಬೇಕಾಗಿರುತ್ತದೆ.
ಸೋಮವಾರ ಪೇಟೆಯಲ್ಲಿ 17 ಮನೆಗಳು ಭೂಸಮಾಧಿ ಆಗಿದೆ. ಗುಡ್ಡ ಜರಿದು ಬಿದ್ದಿದೆ. ರಸ್ತೆಗಳೆಲ್ಲಾ ಭೂಕಂಪನದ ರೀತಿಯಲ್ಲಿ ತುಂಡರಿಸಿವೆ. ರಸ್ತೆಯ ಕೆಳಗಿನ ಮೃದು ಭಾಗ ಸಂಪೂರ್ಣ ನಾಶವಾಗಿದೆ. ಹಾಗಾಗಿ ಮಳೆ ನೀರು ಧಾರಾಕಾರವಾಗಿ ಸುರಿದಾಗ ಮೃದುಭಾಗವನ್ನು ಒಡೆದು ಮುನ್ನುಗ್ಗುತ್ತದೆ. ಇನ್ನಾದರೂ ನಾವು ಮಳೆಕಾಡು, ನದಿಮೂಲ, ಹುಲ್ಲುಗಾವಲನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾ್ರಮಾಣಿಕವಾಗಿ ಕೆಲಸ ಮಾಡಬೇಕಾಗಿದೆ.
ಒಂದು ಕಡೆ ಪಶ್ಚಿಮ ಘಟ್ಟದಲ್ಲಿ ಯೋಜನೆಗಳನ್ನು ನಿಲ್ಲಿಸಬೇಕೆಂದು ಸರಕಾರ ಹೇಳುತ್ತದೆ, ಮತ್ತೊಂದೆಡೆ ಅಲ್ಲಿ ಜಲ ವಿದ್ಯುತ್‌ಗೆ ಅವಕಾಶ ನೀಡಲಾಗುತ್ತದೆ. ಅದಕ್ಕೆ ಆಕ್ಷೇಪಿಸಿದರೆ, ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ. ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಸುವ ಬದಲು ನಾವು ಜಲ ವಿದ್ಯುತ್ ಯೋಜನೆ ಮಾಡುತ್ತೇವೆ ಎನ್ನುತ್ತದೆ. ಜಲ ವಿದ್ಯುತ್‌ಗೆ ಬಳಸಲಾಗುವ ನೀರನ್ನು ಮತ್ತೆ ಜಲಮೂಲಕ್ಕೆ ಬಿಡಲಾಗುತ್ತದೆ. ಅದರಿಂದ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಅದಕ್ಕಾಗಿ ಅಣೆಕಟ್ಟು ನಿರ್ಮಾಣ, ಅಣೆಕಟ್ಟಿನಿಂದಾಗಿ ಆಗುವ ಮುಳುಗಡೆ ಪ್ರದೇಶ, ಸೂಕ್ಷ್ಮವೈವಿಧ್ಯಕ್ಕೆ ಹಾನಿಯಾಗುವ ಬಗ್ಗೆ ಚಿಂತನೆ ಮಾಡುವುದಿಲ್ಲ. ಜಲಪಾತಕ್ಕೆ ಹಾನಿಯಾದಾಗ ಅದರಿಂದ ಅದರ ಉಪನದಿ, ಅಲ್ಲಿಂದ ನದಿಗೆ ಹಾನಿಯಾಗುತ್ತದೆ ಎಂಬ ಪರಿಸರವಾದಿಗಳ ತಾರ್ಕಿಕ ಮಾತುಗಳ ಬಗ್ಗೆ ನಾವಿಂದು ಗಂಭೀರವಾಗಿ ಆಲೋಚಿಸಬೇಕಾಗಿದೆ.

ಪಶ್ಚಿಮ ಘಟ್ಟಗಳ ಶೋಲಾ ಅರಣ್ಯದ 7 ಲಕ್ಷ ಮರಗಳನ್ನು ಕಡಿದು 5,400 ಕೋಟಿ ರೂಪಾಯಿ ವೆಚ್ಚದಲ್ಲಿ200 ಅಡಿ ಅಗಲದ ರಸ್ತೆ ಮಾಡಲು ಸರಕಾರ ಹೊರಟಿದೆ. ಆದರೂ ಜನರು ಮಾತನಾಡುತ್ತಿಲ್ಲ. ಮಡಿಕೇರಿಯ ಕಾಫಿ ಎಸ್ಟೇಟ್ ಗಳನ್ನು ತುಂಡು ತುಂಡಾಗಿ ಕತ್ತರಿಸಿ ಅದನ್ನು ಉತ್ತರ ಭಾರತದ ಜನರಿಗೆ ರೆಸಾರ್ಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿ ಈಗ ಮನೆಗೊಂದು ಬೋರ್‌ವೆಲ್ ಕೊರಸಿ ಕಾಡು ಕತ್ತರಿಸಿ ಕಾಂಕ್ರಿಟ್ ಕಾಡು ಕಟ್ಟುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಇಂದು, ಎತ್ತಿನ ಹೊಳೆಯ ಯೋಜನಾ ಪ್ರದೇಶ, ಮಡಿಕೇರಿ ಮತ್ತು ಕಳೆದ ಐದು ದಶಕಗಳಲ್ಲಿ ಕಂಡರಿಯದಂತೆ ಅರಣ್ಯ ನಾಶ ಮಾಡಿದ ಕೇರಳವು ಎದುರಿಸುತ್ತಿರುವ ಪರಿಣಾಮಗಳು ನಮ್ಮ ಮುಂದಿವೆ. ಮುಂಬರುವ ದಿನಗಳಲ್ಲಿ ಚಿಕ್ಕಮಗಳೂರು ಮತ್ತು ಗೋವಾ ರಾಜ್ಯ ಕೂಡ ಈ ಜಲ ಪ್ರಳಯ/ ಪ್ರಕೃತಿಯ ವಿಕೋಪಕ್ಕೆ ತುತ್ತಾಗಲಿದೆ.
- ಶಶಿಧರ ಶೆಟ್ಟಿ, ಪರಿಸರ ಪ್ರೇಮಿ.

ರೆಸಾರ್ಟ್ ಮಾಫಿಯಾಕ್ಕೆ ಸರಕಾರ ಕಡಿವಾಣ ಹಾಕಲಿ
 ಮಡಿಕೇರಿ, ಕೊಡಗಿನಲ್ಲಿ ಗುಡ್ಡ ಕಾಡುಗಳಲ್ಲಿ, ದನ ಮೇಯುವ ಜಾಗ ಸೇರಿದಂತೆ ಕೃಷಿ ಭೂ ಪ್ರದೇಶವನ್ನು ಪರಿವರ್ತನೆ (ಕನ್‌ವರ್ಶನ್) ಮಾಡಿ ಲೇಔಟ್, ಹೋಮ್ ಸ್ಟೇ ಮಾಡಿರುವುದು ಪ್ರಕೃತಿಯ ವಿಕೋಪಕ್ಕೆ ಬಹುಮುಖ್ಯ ಕಾರಣವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯನ್ನು ನಾಶ ಮಾಡಲಾಗಿದೆ. ಕೇರಳ ಸರಕಾರ ಕೊಡಗಿನಲ್ಲಿ ಹೈಟೆನ್ಶನ್ ವಿದ್ಯುತ್ ಅಳವಡಿಕೆ ಮಾಡಿರುವುದು, ಕೇಂದ್ರ ಸರಕಾರ ರೈಲು ಮಾರ್ಗಕ್ಕಾಗಿ ವನ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ನಾಶ ಮಾಡಿದೆ. ನದಿ ತೀರದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಯಾವುದೇ ಕಾರಣಕ್ಕೂ ಕೃಷಿ ಭೂಮಿಯ ಪರಿವರ್ತನೆಗೆ ಅವಕಾಶ ನೀಡಬಾರದು. ಇದೀಗ ಮಡಿಕೇರಿ, ಕೊಡಗು ತತ್ತರಿಸಿದೆ. ಮುಂದೆ, ಇದು ಚಿಕ್ಕಮಗಳೂರು, ಕಾರವಾರದ ಬಳಿಕ ದಕ್ಷಿಣ ಕನ್ನಡಕ್ಕೂ ಬಾಧಿಸುವ ಸಾಧ್ಯತೆ ಇದೆ. ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.
 -ಎಸ್.ಪಿ. ಚಂಗಪ್ಪ, ನ್ಯಾಯವಾದಿ

ಪಶ್ಚಿಮ ಘಟ್ಟವನ್ನು ಚೇತನ ಶಕ್ತಿಯಾಗಿಸೋಣ
ಪಶ್ಚಿಮ ಘಟ್ಟ ನಮ್ಮ ಚೇತನ ಶಕ್ತಿ. ಆದರೆ ನಾವದನ್ನು ಆ ರೀತಿಯಾಗಿ ಪರಿಗಣಿಸದೆ ಅದನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡಿದ್ದೇ ಇಂದು ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿನ ಭೂ ಕುಸಿತಕ್ಕೆ ಪ್ರಮುಖ ಕಾರಣ. ಕಳೆದ ವರ್ಷ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿತ್ತು. ಅದೇ ಈ ವರ್ಷ ಅತಿವೃಷ್ಟಿ ಯಾಗಿದೆ. ಇದು ಪರಿಸರ ಅಸಮತೋಲನ ಆಗಿದೆ ಎಂಬುದನ್ನು ಪರಿಸರವೇ ನಮಗೆ ಸ್ಪಷ್ಟಪಡಿಸಿದೆ. ಎಲ್ಲಾ ದುರಂತಗಳಿಗೆ ಜನಪ್ರತಿನಿಧಿಗಳು, ಸರಕಾರದ ಜತೆಗೆ ಜನರೂ ಕಾರಣ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇ ಬೇಕು. ನಾವು ಕೇವಲ ಮಳೆ ಹೆಚ್ಚು ಬಂದಿದೆ ಎಂದು ಪ್ರಕೃತಿಯ ಮೇಲೆ ಆರೋಪ ಹೊರಿಸಿದರಷ್ಟೆ ಸಾಲದು. ನಮ್ಮ ಅತಿಯಾಸೆಗಳೇ ನಮಗಿಂದು ಮುಳುವಾಗುತ್ತಿದೆ. ನಮ್ಮ ನದಿ ಮೂಲ, ನಮ್ಮ ಕಾಡು, ನಮ್ಮ ಪಶ್ಚಿಮ ಘಟ್ಟದ ಜತೆ ನಾವು ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಲ್ಲಿ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಇದು ಮುಂದಿನ ದೊಡ್ಡ ದುರಂತಕ್ಕೆ ಪೀಠಿಕೆ ಅಷ್ಟೆ.
 ದಿನೇಶ್ ಹೊಳ್ಳ, ಚಾರಣಿಗ

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News

ಜಗದಗಲ
ಜಗ ದಗಲ