ನಕಲಿ ಎನ್‌ಕೌಂಟರ್ ವಿರೋಧಿಸಿ ಸೇನೆಯ ವಿರುದ್ಧ ಏಕಾಂಗಿ ಸಮರ ಸಾರಿದ ಯೋಧ ನಾಪತ್ತೆ!

Update: 2018-08-19 18:47 GMT
ಯೋಧ ಧರಮ್‌ವೀರ್ ಸಿಂಗ್‌ರ ಪತ್ನಿ ಮತ್ತು ಮಕ್ಕಳು

ಭಾಗ-2

ಕರ್ನಲ್ ಸಿಂಗ್ ಹೇಳಿಕೆಯ ಪ್ರಕಾರ, ಕರ್ನಲ್ ಶ್ರೀಕುಮಾರ್ ತಮ್ಮ ಹೇಳಿಕೆಯಲ್ಲಿ ಹತ್ಯೆಗೀಡಾದ ಓರ್ವ ಬಂಡುಕೋರನ ಹೆಸರನ್ನೂ ತಪ್ಪಾಗಿ ತಿಳಿಸಿದ್ದಾರೆ. ಶ್ರೀಕುಮಾರ್ ತಿಳಿಸಿರುವ ಆರ್.ಕೆ ರೋಶನ್‌ನ ನಿಜವಾದ ಹೆಸರು ಆರ್.ಕೆ ರನೆಲ್ ಎಂದಾಗಿದೆ ಮತ್ತು ಈ ಮೂವರನ್ನು ಸೇನೆಯು ದೀಮಾಪುರದಲ್ಲಿರುವ ಅವರ ನಿವಾಸದಿಂದ ಬಂಧಿಸಿ ಕೊಂಡೊಯ್ದಿತ್ತು.
ಈ ಮೂವರನ್ನು ಸೇನಾ ಉಪವಿಭಾಗದ ಮುಖ್ಯಕಚೇರಿಗೆ ಕರೆತಂದು ಅಲ್ಲಿ ಕಚೇರಿಯ ಹಿಂದೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಮೃತದೇಹಗಳನ್ನು ಅಸ್ಸಾಂನ ಆಂಗ್ಲೊಂಗ್‌ಗೆ ಸಾಗಿಸುವುದಕ್ಕೂ ಮುನ್ನ ಅವುಗಳನ್ನು ಕಚೇರಿಯ ಹಿಂದೆ ಹೂಳಲಾಗಿತ್ತು.
ಸತೀಶ್ ಎಂಬ ವಿದ್ಯಾರ್ಥಿ ಮತ್ತು ಇನ್ನೋರ್ವ ವ್ಯಕ್ತಿಯನ್ನು ಶಿಲ್ಲಾಂಗ್‌ನಲ್ಲಿ ಬಂಧಿಸಿ ಇದೇ ರೀತಿ ಹತ್ಯೆ ಮಾಡಲಾಗಿದೆ ಎಂದು ಕರ್ನಲ್ ಸಿಂಗ್ ತಮ್ಮ ಅಫಿದಾವಿತ್‌ನಲ್ಲಿ ಆರೋಪಿಸಿದ್ದಾರೆ.
ಪಿಎಲ್‌ಎಯಲ್ಲಿ ಸಹಾಯಕ ಸಾರ್ವಜನಿಕ ಕಾರ್ಯದರ್ಶಿಯಾಗಿದ್ದ ಜಿ.ಜಿತೇಶ್ವರ ಅಲಿಯಾಸ್ ಜಿಪ್ಸಿ ಎಂಬಾತನನ್ನೂ ಇದೇ ರೀತಿ ಹತ್ಯೆ ಮಾಡಲಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

ದಿ ಪ್ರಿಂಟ್ ಜೊತೆ ಮಾತನಾಡಿದ ಜಿಪ್ಸಿ ಸಹೋದರ ಸತ್ಯೆಬ್ರತ, ಈ ಅಫಿದಾವಿತ್‌ನಲ್ಲಿರುವ ನಿಜಾಂಶಗಳನ್ನು ಪರಿಗಣಿಸಿ ನ್ಯಾಯಾಲಯ ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಆತ ಒಬ್ಬ ಗೆರಿಲ್ಲಾ ಆಗಿದ್ದರೂ ಭಾರತೀಯ ಸಂವಿಧಾನ ಆತನಿಗೂ ಮಾನವ ಹಕ್ಕುಗಳನ್ನು ನೀಡಿದೆ. ತನ್ನನ್ನು ದೀಮಾಪುರದಲ್ಲಿ ಬಂಧಿಸಲಾಗಿದೆ ಎಂದು ಜಿಪ್ಸಿ ಕೊನೆಯ ಬಾರಿ ಮೊಬೈಲ್ ಸಂದೇಶ ರವಾನಿಸಿದ್ದ. ನಂತರ ಆತ ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಆತ್ಮಸಾಕ್ಷಿಯಿರುವ ಸೈನಿಕ
ನ್ಯಾಯಾಲಯದಲ್ಲಿ ಅಫಿದಾವಿತ್ ಸಲ್ಲಿಸುವ ಮೂಲಕ ಕರ್ನಲ್ ಧರಮ್‌ವೀರ್ ಸಿಂಗ್, ರಾಜ್ಯದಲ್ಲಿ ತಮ್ಮದೇ ಸೇನೆಯ ವಿರುದ್ಧ ತಿರುಗಿಬಿದ್ದ ಭದ್ರತಾ ಪಡೆಯ ತನಜೊಮ್ ಹೆರೊಜಿತ್ ಮತ್ತು ಕಿರಿಯ ಅಧಿಕಾರಿ ರಮೇಶ್ ಚಂದ್ ಶರ್ಮಾ ಅವರ ಸಾಲಿನಲ್ಲಿ ನಿಂತಿದ್ದಾರೆ.
ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿರುವ ಹೆರೊಜಿತ್ ತಾನು ಕಾನೂನೇತರ ಹತ್ಯೆಗಳನ್ನು ನಡೆಸಿರುವುದಾಗಿ 2016ರ ಜನವರಿಯಲ್ಲಿ ಒಪ್ಪಿಕೊಂಡಿದ್ದರು ಮತ್ತು ಇಂಥ ಹತ್ಯೆಗಳು ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ ಎಂದು ತಿಳಿಸಿದ್ದರು.
30 ಅಸ್ಸಾಂ ರೈಫಲ್‌ನಲ್ಲಿ ಸುಬೇದಾರ್ ಆಗಿರುವ ಶರ್ಮಾ, ಈ ವರ್ಷದ ಎಪ್ರಿಲ್‌ನಲ್ಲಿ ಇಂಪಾಲದಲ್ಲಿರುವ ಪತ್ರಿಕಾ ಕಚೇರಿಗೆ ತೆರಳಿ, ಪಶ್ಚಿಮ ಇಂಪಾಲದ ಕುಕ್ರುಲ್ ಮಿಲ್ಸ್‌ನಲ್ಲಿ ಐದು ಶಂಕಿತ ತೀವ್ರವಾದಿಗಳನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ತಾನೂ ಸ್ಥಳದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದರು. ಅದು ಎನ್‌ಕೌಂಟರ್ ಆಗಿರಲಿಲ್ಲ. ನಾವು ಅವರನ್ನು ಅಲ್ಲಿಗೆ ಕರೆದೊಯ್ದು ಹತ್ಯೆ ಮಾಡಿದ್ದೆವು ಎಂದು ಶರ್ಮಾ ತಪ್ಪೊಪ್ಪಿಕೊಂಡಿದ್ದರು.
ಆದರೆ ಕರ್ನಲ್ ಧರಮ್‌ವೀರ್ ಸಿಂಗ್ ಉಳಿದಿಬ್ಬರಿ ಗಿಂತಲೂ ಉನ್ನತ ಹುದ್ದೆಯಲ್ಲಿರುವವರಾಗಿದ್ದಾರೆ. ಸೇನಾಧಿಕಾರಿಯಾಗಿ ಅದರಲ್ಲೂ ವಿಶೇಷ ಪಡೆಯಲ್ಲಿದ್ದು ತಮ್ಮದೇ ವಿಭಾಗದ ವಿರುದ್ಧ ಮಾತನಾಡುವುದು ಬಹಳ ವಿರಳ.
ಧರಮ್‌ವೀರ್ ಸಿಂಗ್ ಅವರನ್ನು ಸೇನೆಯಲ್ಲಿ ಜವಾನರಾಗಿ ನೇಮಿಸಲಾಗಿತ್ತು. ನಂತರ ಭಾರತೀಯ ಸೇನಾ ಅಕಾಡಮಿಗೆ (ಐಎಂಎ) ಆಯ್ಕೆಯಾಗುವುದಕ್ಕೂ ಮುನ್ನ ಅವರು ಡೆಹ್ರಾಡೂನ್‌ನಲ್ಲಿರುವ ಸೇನಾ ಕಾಲೇಜಿನಲ್ಲಿ ತರಬೇತಿ ಪಡೆದಿದ್ದರು.
ವಿಶೇಷ ಪಡೆಯಲ್ಲಿ ಸೇವೆ ಸಲ್ಲಿಸಿದ ನಂತರ ಸಿಂಗ್ ಅವರನ್ನು ಗುಪ್ತಚರ ವಿಭಾಗದಲ್ಲಿ ಅಧಿಕಾರಿಯಾಗಿ ನೇಮಿಸಲಾಗಿತ್ತು. ಎರಡೂವರೆ ವರ್ಷಗಳ ಹಿಂದೆ ಅವರನ್ನು ನಾಗಲ್ಯಾಂಡ್‌ನಲ್ಲಿ ನಿಯೋಜಿಸಲಾಗಿತ್ತು.
ಸಿಂಗ್ ನಿಯೋಜನೆಗೊಂಡಿದ್ದ ಇಂಪಾಲದ ಎಂ ಸೆಕ್ಟರ್ ಅಥವಾ ಸೇನಾ ಸೆಕ್ಟರ್‌ನಲ್ಲಿರುವ ಅವರ ಗೆಳೆಯರಿಗೆ, ತಾವು ಪ್ರೀತಿಯಿಂದ ವೀರ್ ಎಂದು ಕರೆಯುವ ಕರ್ನಲ್ ಧರಮ್‌ವೀರ್ ಸಿಂಗ್ ತನ್ನದೇ ಜನರ ವಿರುದ್ಧ ತಿರುಗಿಬೀಳಲು ಕಾರಣವೇನು ಎಂಬುದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.
ಎಂ ಸೆಕ್ಟರ್‌ನಲ್ಲಿ ಸೇನಾ ಕಚೇರಿಗಳು ಮತ್ತು ವಸತಿ ನಿಲಯಗಳಿವೆ. ಅದು ಇಂಪಾಲದ ರಾಜ್ಯಪಾಲರ ನಿವಾಸ ರಾಜಭವನದ ಹತ್ತಿರವೇ ಇದೆ. ಜೊತೆಗೆ ಮಣಿಪುರದ ರಾಜಮನೆತನದ ನಿವಾಸ ಕಾಂಗ್ಲಾ ಕೋಟೆಯ ಸಮೀಪವಿದೆ.
ಇಂಥ ಅಭೂತಪೂರ್ವ ಸೇನಾ ನಿಯೋಜನೆ ಹೊಂದಿರುವ ನಗರದಲ್ಲಿ ಯೋಧರು ವಿವಿಧ ಬಣ್ಣಗಳ ಸಮವಸ್ತ್ರಗಳೊಂದಿಗೆ ಕಾಣಲು ಸಿಗುತ್ತಾರೆ.
ಎಂ ಸೆಕ್ಟರ್‌ನಲ್ಲಿ ಭದ್ರತೆಯ ಜವಾಬ್ದಾರಿಯನ್ನು ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ಗೆ ನೀಡಲಾಗಿದೆ. ಅಲ್ಲಿರುವ ದೇವಸ್ಥಾನದಲ್ಲಿ ಹಾಕಿರುವ ಫಲಕದಲ್ಲಿ 2016ರಂದು ಈ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರಮ್‌ವೀರ್ ಸಿಂಗ್ ಕೂಡಾ ಭಾಗಿಯಾಗಿದ್ದರು ಎಂಬುದನ್ನು ಉಲ್ಲೇಖಿಸಲಾಗಿದೆ.
ಎಂ ಸೆಕ್ಟರ್‌ನಲ್ಲಿ ನೆಲೆಸಿರುವ ಮತ್ತು ಅಲ್ಲೇ ನಿಯೋಜನೆಗೊಂಡಿರುವ ಸೇನಾ ಅಧಿಕಾರಿಯೊಬ್ಬರ ಪ್ರಕಾರ, ಮಣಿಪುರ ಒಂದು ಅತ್ಯಂತ ಕಠಿಣ ಪ್ರದೇಶ. ಬಾಹ್ಯವಾಗಿ ಅದು ಬಹಳ ಶಾಂತಿಯುತವಾಗಿದೆ. ಮಣಿಪುರಿಗಳು, ಮುಖ್ಯವಾಗಿ ಮೇತಿಗಳು ಶಾಂತಿಪ್ರಿಯ ಜನರಾಗಿದ್ದಾರೆ. ಆದರೆ ಇಲ್ಲಿನ ಅನೇಕ ಘಟನೆಗಳ ಬಗ್ಗೆ ಎಲ್ಲರಿಗೂ ಗೊಂದಲವಿದೆ.
 ಇಂಪಾಲದಲ್ಲಿ ಬಹಳಷ್ಟು ಸಮಯ ಕಳೆದಿರುವ ಧರಮ್‌ವೀರ್ ಸಿಂಗ್ ಅಲ್ಲಿನ ಸ್ಥಳೀಯ ಭಾಷೆಯನ್ನೂ ಕಲಿತುಕೊಂಡಿದ್ದರು ಮತ್ತು ಬಹಳ ಕರಾರುವಾಕ್ ಗುಪ್ತಚರ ಮಾಹಿತಿಯನ್ನು ನೀಡುತ್ತಿದ್ದರು ಎಂದು ಅಧಿಕಾರಿ ತಿಳಿಸುತ್ತಾರೆ. ಸುಖಾಸುಮ್ಮನೆ ಗೊಂದಲ ಉಂಟು ಮಾಡಿದ್ದಾನೆ ಎಂದು ಅಭಿಪ್ರಾಯಪಡುತ್ತಾರೆ ಸಿಂಗ್ ಜೊತೆ ಇಂಪಾಲದ ಎಂ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸಿರುವ ಇನ್ನೋರ್ವ ಅಧಿಕಾರಿ.

ಈ ಅಧಿಕಾರಿಯ ಪ್ರಕಾರ, ತನಗಿಷ್ಟದ ಪ್ರದೇಶಕ್ಕೆ ವರ್ಗಾವಣೆಗೊಳಿಸದ ಕಾರಣದಿಂದ ಧರಮ್‌ವೀರ್ ಸಿಂಗ್ ಕೋಪಗೊಂಡಿದ್ದರು. ಅವರನ್ನು ಬೆಳಗಾಂಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಸಿಂಗ್ ಮುಂಬೈಗೆ ತೆರಳಲು ಬಯಸಿದ್ದರು. ತನ್ನದೇ ವಿಭಾಗದ ಅಧಿಕಾರಿಗಳ ಮೇಲೆ ಸಿಂಗ್ ಯಾಕೆ ಯುದ್ಧ ಘೋಷಿಸಿದ್ದಾರೆ ಎಂಬುದಕ್ಕೆ ನಿಖರವಾದ ಕಾರಣವನ್ನು ಅವರ ಪತ್ನಿ ಕೂಡಾ ನೀಡಿಲ್ಲ. ನನ್ನ ಪತಿಗೆ ಸೇನೆಯೇ ಧರ್ಮವಾಗಿತ್ತು ಮತ್ತು ನಾವಿಬ್ಬರೂ ಈ ಪ್ರತಿಷ್ಠಿತ ಸಂಘಟನೆಯ ಬಗ್ಗೆ ಗೌರವ ಹೊಂದಿದ್ದೇವೆ. ನಾವೆಂದೂ ವ್ಯವಸ್ಥೆಯ ವಿರುದ್ಧ ಹೋಗುತ್ತೇವೆ ಎಂದು ಯೋಚಿಸಿರಲಿಲ್ಲ ಎಂದು ಮಣಿಪುರ ಉಚ್ಚ ನ್ಯಾಯಾಲಯ ಯಾವುದೇ ಹೇಳಿಕೆ ನೀಡಬಾರದು ಎಂದು ಆದೇಶ ನೀಡುವುದಕ್ಕೂ ಮುನ್ನ ಆಕೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೃಪೆ: theprint.in

Writer - ಸುಜನ್ ದತ್ತಾ

contributor

Editor - ಸುಜನ್ ದತ್ತಾ

contributor

Similar News

ಜಗದಗಲ
ಜಗ ದಗಲ