ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ: ನಾಲ್ಕನೇ ಬಂಧನ

Update: 2018-08-20 06:23 GMT

ಮುಂಬೈ, ಆ. 20: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ವಿದ್ವಾಂಸ ಎಂ ಎಂ  ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳ ಜತೆ ನಂಟು ಹೊಂದಿದ್ದಾನೆಂದು ತಿಳಿಯಲಾದ ಶ್ರೀಕಾಂತ್ ಪಂಗರ್ಕರ್ (40) ಎಂಬಾತನನ್ನು ಮಹಾರಾಷ್ಟ್ರ ಎಟಿಎಸ್ ಜಲ್ನಾ ಎಂಬಲ್ಲಿ ರವಿವಾರ ಬಂಧಿಸಿದೆ. ಈತ ಕಚ್ಛಾ ಬಾಂಬ್ ತಯಾರಿ ಪ್ರಕರಣದಲ್ಲಿ ಬೇಕಾಗಿದ್ದು, ಈತ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರಲ್ಲಿ ನಾಲ್ಕನೆಯವನಾಗಿದ್ದಾನೆ ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

ಬಂಧಿತ ವ್ಯಕ್ತಿ ಜಲ್ನಾದ ಮಾಜಿ ಶಿವಸೇನಾ ಕಾರ್ಪೊರೇಟರ್ ಆಗಿದ್ದಾನೆ.

ಈತನ ಬಂಧನದೊಂದಿಗೆ ಇತರ ಹಲವಾರು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ. ಕಳೆದ ವಾರವಷ್ಟೇ ಮಹಾರಾಷ್ಟ್ರ ಎಟಿಎಸ್ ವೈಭವ್ ರಾವತ್, ಶರದ್ ಕಲಸ್ಕರ್ ಎಂಬವರನ್ನು ನಲಸೊಪಾರದಿಂದ ಹಾಗೂ ಸುಧನ್ವ ಗೊಂಧಲೇಕರ್ ಎಂಬಾತನನ್ನು ಪುಣೆಯಿಂದ ಬಂಧಿಸಿತ್ತು. ಅವರಿಂದ ಬಹಳಷ್ಟು ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಲ್ಳಾದ ವಸ್ತುಗಳಲ್ಲಿ ಹಲವಾರು ಬಾಂಬುಗಳು, ಬಾಂಬು ತಯಾರಿ ಸಾಮಗ್ರಿಗಳು, ಒಂದು ಬೈಕ್ ಹಾಗೂ ಒಂದು ಕಾರು ಇತ್ತು.

ಈ ಮೂವರು ನೀಡಿದ ಮಾಹಿತಿಯಂತೆ ಮಹಾರಾಷ್ಟ್ರ ಎಟಿಎಸ್ ಸಚಿನ್ ಅಂದುರೆ ಎಂಬಾತನನ್ನು ಬಂಧಿಸಿ ಆತನನ್ನು ಸಿಬಿಐಗೆ ಹಸ್ತಾಂತರಿಸಿದೆ. ಆತ ದಾಭೋಲ್ಕರ್ ಪ್ರಕರಣದಲ್ಲಿ ಬೇಕಾಗಿದ್ದ ಶಾರ್ಪ್ ಶೂಟರ್ ಆಗಿದ್ದ.

ಬಂಧಿತ ಶ್ರೀಕಾಂತ್ ಪಂಗರ್ಕರ್ ವಿಚಾರವಾದಿಗಳನ್ನು ಹತ್ಯೆಗೈಯ್ಯಲೆಂದೇ ಹೆಸರಿಲ್ಲದ ಭೂಗತ ಸಂಘಟನೆಯೊಂದನ್ನು ರಚಿಸಿದ್ದ. ಆರೋಪಿ ಇತರ ಸಹವರ್ತಿಗಳೊಂದಿಗೆ ಸಂಪರ್ಕ ಸಾಧಿಸುವಾಗ ಸಂಕೇತಾಕ್ಷರಗಳನ್ನೇ ಬಳಸುತ್ತಿದ್ದ. ಆತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News