ಇಮ್ರಾನ್ ಗೆ ಪತ್ರ ಬರೆದ ಪ್ರಧಾನಿ ಮೋದಿ

Update: 2018-08-20 13:20 GMT

ಹೊಸದಿಲ್ಲಿ, ಆ. 20: ಭಾರತವು ನೆರೆರಾಷ್ಟ್ರ ಪಾಕಿಸ್ತಾನದೊಂದಿಗೆ ಶಾಂತಿಯುತ ಸಂಬಂಧಗಳನ್ನು ಹೊಂದುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಗೆ ಬರೆದ ಪತ್ರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘‘ಭಾರತವು ಪಾಕಿಸ್ತಾನದೊಂದಿಗೆ ರಚನಾತ್ಮಕ ಹಾಗೂ ಅರ್ಥಪೂರ್ಣ ಸಂಬಂಧ ಹೊಂದಲು ಬಯಸಿದೆ’’ ಎಂದೂ ಮೋದಿ ಪತ್ರದಲ್ಲಿ ಬರೆದಿದ್ದಾರೆ. ತಾವು ಇಮ್ರಾನ್ ಖಾನ್ ಜತೆ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಭಾರತೀಯ ಉಪಖಂಡವನ್ನು ಉಗ್ರವಾದ ಮತ್ತು ಹಿಂಸೆಯಿಂದ ಮುಕ್ತಗೊಳಿಸುವ ಸಲುವಾಗಿ ಇಬ್ಬರೂ ಶಾಂತಿ, ಸುರಕ್ಷತೆ ಮತ್ತು ಸಮೃದ್ಧಿಗಾಗಿ ಪ್ರಯತ್ನಿಸುವ ಬಗ್ಗೆ ಮಾತನಾಡಿಕೊಂಡಿದ್ದ ಬಗ್ಗೆಯೂ ಮೋದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಾಕಿಸ್ತಾನವು ತನ್ನ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಶ್ರಮಿಸುವುದಾಗಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಇಮ್ರಾನ್ ಹೇಳಿದ್ದರು. ‘‘ನೆರೆಯ ರಾಷ್ಟ್ರಗಳೊಂದಿಗೆ ಶಾಂತಿ ಕಾಪಾಡದೆ ಪಾಕಿಸ್ತಾನದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ,’’ ಎಂದೂ ಅವರು ಹೇಳಿದ್ದರು.

ಇದಕ್ಕೂ ಮುಂಚೆ ಚುನಾವಣೆಯಲ್ಲಿ ತಮ್ಮ ಪಕ್ಷ ಜಯ ಸಾಧಿಸಿದ ಬಳಿಕ ಮಾತನಾಡಿದ್ದ ಇಮ್ರಾನ್ ಪಾಕಿಸ್ತಾನವು ಭಾರತದೊಂದಿಗಿನ ಸಂಬಂಧ ಸುಧಾರಿಸಲು ಹಾಗೂ ಕಾಶ್ಮೀರ ಸೇರಿದಂತೆ ಇತರ ವಿಚಾರಗಳನ್ನೂ ಮಾತುಕತೆ ಮೂಲಕ ಪರಿಹರಿಸಲು ಸಿದ್ಧ ಎಂದೂ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News