ಶಸ್ತ್ರಾಸ್ತ್ರ ಪತ್ತೆ ಪ್ರಕರಣ: ಶಿವಸೇನೆ ಮಾಜಿ ಕಾರ್ಪೊರೇಟರ್‌ಗೆ ಆ.28ರವರೆಗೆ ಎಟಿಎಸ್ ಕಸ್ಟಡಿ

Update: 2018-08-20 15:19 GMT

ಮುಂಬೈ,ಆ.20: ಮಹಾರಾಷ್ಟ್ರದ ವಿವಿಧೆಡೆಗಳಿಂದ ಆ.9 ಮತ್ತು 11ರ ನಡುವೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ವಶಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಜಾಲ್ನಾ ಮಹಾನಗರ ಪಾಲಿಕೆಯ ಮಾಜಿ ಶಿವಸೇನೆ ಕಾರ್ಪೊರೇಟರ್ ಶ್ರೀಕಾಂತ ಪಂಗರಕರ್‌ನನ್ನು ಸೋಮವಾರ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು,ಮುಂದಿನ ತನಿಖೆಗಾಗಿ ಆತನನ್ನು ಆ.28ರವರೆಗೆ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ದ ವಶಕ್ಕೊಪ್ಪಿಸಲಾಗಿದೆ.

ಜಾಲ್ನಾದಲ್ಲಿಯ ಪಂಗರಕರ್ ನಿವಾಸದಿಂದ ಪೆನ್ ಡ್ರೈವ್,ಹಾರ್ಡ್ ಡಿಸ್ಕ್‌ಗಳು ಮತ್ತು ಕೆಲವು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.

ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ವಶಕ್ಕೆ ಸಂಬಂಧಿಸಿದಂತೆ ಆ.10ರಂದು ಬಂಧಿಸಲಾಗಿರುವ ಮೂವರು ಆರೋಪಿಗಳಿಗೆ ಪಂಗರಕರ್ ಹಣಕಾಸು ಒದಗಿಸುತ್ತಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದೂ ಅದು ತಿಳಿಸಿತು.

ಬಂಧಿತ ಆರೋಪಿಗಳಿಗೂ ವಿಚಾರವಾದಿಗಳಾದ ಗೋವಿಂದ ಪನ್ಸಾರೆ,ನರೇಂದ್ರ ದಾಭೋಲ್ಕರ್ ಮತ್ತು ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಗಳಿಗೂ ಸಂಬಂಧವಿದೆಯೇ ಎನ್ನುವುದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿಯೂ ತಾನು ತನಿಖೆಯನ್ನು ನಡೆಸುವುದಾಗಿ ಎಟಿಎಸ್ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News