ಮುಸ್ಲಿಮರ ಜೊತೆ ಸಂಘರ್ಷಕ್ಕಿಳಿದ ಕನ್ವರ್ ಯಾತ್ರಿಗಳು

Update: 2018-08-20 15:35 GMT

ಜೈಪುರ, ಆ.20: ಕನ್ವರ್ ಯಾತ್ರಿಗಳು ಮುಸ್ಲಿಮರ ಜೊತೆ ಸಂಘರ್ಷಕ್ಕಿಳಿದ ಪರಿಣಾಮ ರಾಜಸ್ಥಾನದ ಸಿಕರ್ ಜಿಲ್ಲೆಯ ಫತೇಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ ಘಟನೆ ರವಿವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕನ್ವರ್ ಯ್ರಾತಿಗಳ ಗುಂಪು ಫತೇಫುರದ ಮಸೀದಿಯ ಸಮೀಪದಿಂದ ಹಾದು ಹೋಗುವ ಸಂದರ್ಭದಲ್ಲಿ ಅಲ್ಲಿದ್ದ ಮುಸ್ಲಿಂ ಯುವಕರು ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡುವಂತೆ ಸೂಚಿಸಿದ್ದೇ ಈ ಘಟನೆ ನಡೆಯಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಮುಂದೆ ದೈಹಿಕ ಹಲ್ಲೆಗೆ ಕಾರಣವಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಎಂಟು ಕನ್ವರಿಯಗಳು ಗಾಯಗೊಂಡಿದ್ದು ಪೊಲೀಸರು ಮೂವರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ ಎಂದು ಸಿಕರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮೋಹನ್ ಶರ್ಮಾ ತಿಳಿಸಿದ್ದಾರೆ. ಹೆಚ್ಚು ಜನರನ್ನು ಬಂಧಿಸಬೇಕೆಂದು ಆಗ್ರಹಿಸಿ ಸಂಘಪರಿವಾರದ ಕಾರ್ಯಕರ್ತರು ಸೋಮವಾರ ಭೂತನಾಥ ದೇವಸ್ಥಾನದಲ್ಲಿ ಧರಣಿ ನಡೆಸಿದ್ದಾರೆ. ಈ ವೇಳೆ ಅವರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಮಾರುಕಟ್ಟೆ ಪ್ರದೇಶದ ಅಂಗಡಿಗಳನ್ನು ಮುಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಜೊತೆಗೆ ಅಶ್ರುವಾಯ ಹಾಗೂ ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಫತೇಪುರ ನಗರದಲ್ಲಿ ಸೆಕ್ಷನ್ 144 ಹೇರಲಾಗಿದ್ದು ಇಡೀ ಪ್ರದೇಶವು ಈಗಲೂ ಬೂದಿಮುಚ್ಚಿದ ಕೆಂಡದಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News