ಆಧಾರ್ ಕಾರ್ಡ್ ಮುಖ ದೃಢೀಕರಣ ವ್ಯವಸ್ಥೆ ಸೆಪ್ಟೆಂಬರ್ 15ರಿಂದ ಜಾರಿ

Update: 2018-08-20 15:38 GMT

ಹೊಸದಿಲ್ಲಿ, ಆ.20: ಟೆಲಿಕಾಂ ಸಂಸ್ಥೆಗಳು ಮುಖ ದೃಢೀಕರಣ ವ್ಯವಸ್ಥೆಯ ಮೂಲಕ ತಮ್ಮ ಗ್ರಾಹಕರ ಪರಿಚಯವನ್ನು ಕಡ್ಡಾಯವಾಗಿ ಪ್ರಮಾಣೀಕರಿಸಬೇಕು ಎಂದು ಆಧಾರ್ ಗುರುತುಪತ್ರ ನೀಡುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ತಿಳಿಸಿದ್ದು, ಇದು ಸೆಪ್ಟೆಂಬರ್ 15ರಿಂದ ಜಾರಿಯಾಗಲಿದೆ ಎಂದು ತಿಳಿಸಿದೆ.

ಈ ಕುರಿತು 2018ರ ಜನವರಿಯಲ್ಲಿ ಮೊದಲ ಆದೇಶ ಜಾರಿಗೊಳಿಸಿ ಜುಲೈ 1ರಿಂದ ಮುಖ ದೃಢೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ ದಿನಾಂಕವನ್ನು ಆಗಸ್ಟ್ 1ಕ್ಕೆ, ಇದೀಗ ಸೆಪ್ಟೆಂಬರ್ 15ಕ್ಕೆ ಮುಂದೂಡಲಾಗಿದ್ದು, ಸದ್ಯಕ್ಕೆ ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಗಳಿಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. ಆಧಾರ್ ಸೇವೆ ಒದಗಿಸುವ ಎಲ್ಲಾ ಸಂಸ್ಥೆಗಳು ಮುಖ ದೃಢೀಕರಣ ವ್ಯವಸ್ಥೆ ಹೊಂದಿಲ್ಲದ ಕಾರಣ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಯುಐಡಿಎಐ ತಿಳಿಸಿದೆ. ಸೆ.15ರ ಬಳಿಕ ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಮಾಸಿಕ ದೃಢೀಕರಣ ವ್ಯವಹಾರದ ಕನಿಷ್ಟ ಶೇ.10ರಷ್ಟು ವ್ಯವಹಾರವನ್ನು ಮುಖ ದೃಢೀಕರಣ ವ್ಯವಸ್ಥೆಯ ಮೂಲಕ ನಿರ್ವಹಿಸಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ, ಪ್ರತೀ ವ್ಯವಹಾರದ ಮೇಲೆ 20 ಪೈಸೆ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.

ಮುಖ ದೃಢೀಕರಣ ಪ್ರಕ್ರಿಯೆ:

ಟೆಲಿಕಾಂ ಸೇವೆ ಬಳಕೆದಾರರ ಫೋಟೋವನ್ನು ತೆಗೆದು ಅದನ್ನು ಆಧಾರ್ ಕಾರ್ಡ್‌ನ ಫೋಟೋದೊಂದಿಗೆ ತುಲನೆ ಮಾಡುವುದು. ತಾವು ತೆಗೆದ ಫೋಟೋಗಳನ್ನು ಟೆಲಿಕಾಂ ಸಂಸ್ಥೆಗಳು ಪ್ರತ್ಯೇಕ ಸಂಗ್ರಹಿಸಿಡಬೇಕು ಮತ್ತು ಇದು ಆಧಾರ್ ಫೋಟೋದೊಂದಿಗೆ ಹೋಲಿಕೆಯಾದಲ್ಲಿ ಮಾತ್ರ ಸಿಮ್‌ಕಾರ್ಡ್ ಆ್ಯಕ್ಟಿವೇಟ್ ಮಾಡಬೇಕು. ಹೀಗೆ ಮಾಡದ ಟೆಲಿಕಾಂ ಸಂಸ್ಥೆಗಳಿಗೆ ನೀಡುವ ಪ್ರೋತ್ಸಾಹಧನದಲ್ಲಿ ಕಡಿತ ಮಾಡಲಾಗುವುದು ಎಂದು ತಿಳಿಸಲಾಗಿದೆ. ಆಧಾರ್ ಕಾರ್ಡ್‌ನ ಆಧಾರದಲ್ಲಿ ಮೊಬೈಲ್ ಸಿಮ್ ನೀಡಿದ್ದಲ್ಲಿ ಮಾತ್ರ ಮುಖ ದೃಢೀಕರಣ ಪ್ರಕ್ರಿಯೆಯ ಅಗತ್ಯವಿದೆ. ಸಿಮ್ ಪಡೆಯಲು ಆಧಾರ್ ಕಾರ್ಡ್ ನೀಡದಿದ್ದವರಿಗೆ ಇದು ಅನ್ವಯಿಸದು ಎಂದು ಯುಐಡಿಎಐ ಸಿಇಒ ಅಜಯ ಭೂಷಣ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News