ತಮಿಳುನಾಡಿನ ವೇದಾಂತ ಕಾರ್ಖಾನೆಯ ಭವಿಷ್ಯ ನಿರ್ಧರಿಸಲು ಸಮಿತಿ: ರಾಷ್ಟ್ರೀಯ ಹಸಿರು ಪೀಠ

Update: 2018-08-20 15:46 GMT

ಹೊಸದಿಲ್ಲಿ, ಆ.20: ತಮಿಳುನಾಡಿನ ತೂತುಕುಡಿಯಲ್ಲಿ ಜನರ ಪ್ರತಿಭಟನೆಯ ನಂತರ ಮುಚ್ಚಲ್ಪಟ್ಟಿರುವ ವೇದಾಂತ ಸಂಸ್ಥೆಯ ತಾಮ್ರ ಕರಗಿಸುವ ಕಾರ್ಖಾನೆಯನ್ನು ಪುನರ್ ತೆರೆಯುವ ಬಗ್ಗೆ ಸ್ವತಂತ್ರ ನ್ಯಾಯಾಂಗ ಸಮಿತಿ ಮುಂದಿನ ಆರು ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಷ್ಟ್ರೀಯ ಹಸಿರು ಪೀಠ ತಿಳಿಸಿದೆ.

ವೇದಾಂತ ಕೋಪರ್ ಸ್ಮೆಲ್ಟರ್ ಕಾರ್ಖಾನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಜನರು ತೂತುಕುಡಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಗುಂಡು ಹಾರಾಟ ನಡೆಸಿದ ಪರಿಣಾಮ ಹದಿಮೂರು ಜನರು ಮೃತಪಟ್ಟಿದ್ದರು. ಈ ಘಟನೆಯ ನಂತರ ಕಳೆದ ಮೇನಲ್ಲಿ ತಮಿಳು ನಾಡು ಸರಕಾರ ಈ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಿ ಅದಕ್ಕೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.

ವೇದಾಂತ, ತಮಿಳು ನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪರಿಸರ ಸಚಿವಾಲಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯು ಈ ಪ್ರಕರಣವನ್ನು ಪುನಃ ಪರಿಶೀಲಿಸುವುದಾಗಿ ರಾಷ್ಟ್ರೀಯ ಹಸಿರು ಪೀಠದ ಮುಖ್ಯಸ್ಥ ನ್ಯಾಯಾಧೀಶ ಆದರ್ಶ್ ಕುಮಾರ್ ಗೋಯಲ್ ತಿಳಿಸಿದ್ದಾರೆ. ಈ ಕಾರ್ಖಾನೆಯಿಂದ ಪರಿಸರ ಹಾನಿಯಾಗುತ್ತದೆ ಎಂಬ ವಾದವನ್ನು ವೇದಾಂತ ತಳ್ಳಿಹಾಕಿದೆ. ಈ ಕೋಪರ್ ಸ್ಮೆಲ್ಟರ್‌ನಲ್ಲಿ ವಾರ್ಷಿಕ 4,00,000 ಟನ್ ತಾಮ್ರ ಉತ್ಪಾದಿಸಲಾಗುತ್ತಿತ್ತು. ಸದ್ಯ ಕಾರ್ಖಾನೆಯ ಮುಚ್ಚುಗಡೆಯಿಂದ ತನ್ನ ಉತ್ಪನ್ನಗಳನ್ನು ಖರೀದಿಸುತ್ತಿದ್ದ 350 ಕಂಪೆನಿಗಳ ಮೇಲೆ ಪರಿಣಾಮ ಬೀರಿದೆ ಎಂದು ವೇದಾಂತ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News