ನೀರವ್ ಮೋದಿ ಇಂಗ್ಲೆಂಡಿನಲ್ಲಿ; ಹಸ್ತಾಂತರಿಸಲು ಸಿಬಿಐ ಕೋರಿಕೆ

Update: 2018-08-20 16:11 GMT

ಹೊಸದಿಲ್ಲಿ, ಆ.20: ಪಿಎನ್‌ಬಿ ವಂಚನೆ ಹಗರಣದಲ್ಲಿ ಪ್ರಮುಖ ಆರೋಪಿ, ಈಗ ತಲೆಮರೆಸಿಕೊಂಡು ವಿದೇಶದಲ್ಲಿ ನೆಲೆಸಿರುವ ನೀರವ್ ಮೋದಿ ಇಂಗ್ಲೆಂಡಿನಲ್ಲಿ ಇರುವುದಾಗಿ ಬ್ರಿಟನ್ ಖಚಿತಪಡಿಸಿದೆ. ಈತನ ಹಸ್ತಾಂತರಕ್ಕೆ ಸಿಬಿಐ ಬ್ರಿಟನ್‌ಗೆ ಮನವಿ ಸಲ್ಲಿಸಿದೆ.

13,500 ಕೋಟಿ ರೂ. ಮೊತ್ತದ ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬರುವ ಒಂದು ವಾರದ ಮೊದಲು, ಅಂದರೆ ಈ ವರ್ಷಾರಂಭದಲ್ಲಿ ನೀರವ್ ಮೋದಿ ತನ್ನ ಸಂಬಂಧಿಕರು ಹಾಗೂ ಚಿಕ್ಕಪ್ಪ ಮೆಹುಲ್ ಚೋಕ್ಸಿ ಸಹಿತ ವಿದೇಶಕ್ಕೆ ಪಲಾಯನ ಮಾಡಿದ್ದು ತನಿಖಾ ಸಂಸ್ಥೆಗಳು ಈತನ ಪತ್ತೆ ಕಾರ್ಯದಲ್ಲಿ ತೊಡಗಿದ್ದವು. 2018ರ ಜುಲೈಯಲ್ಲಿ ಸಿಬಿಐ ಕೋರಿಕೆ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ನೀರವ್ ಮೋದಿಯನ್ನು ಹಸ್ತಾಂತರಿಸಬೇಕೆಂಬ ಕೋರಿಕೆಯನ್ನು ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಸಲ್ಲಿಸಿರುವುದಾಗಿ ಆಗಸ್ಟ್‌ನಲ್ಲಿ ಕೇಂದ್ರ ಸರಕಾರ ಸಂಸತ್ತಿಗೆ ತಿಳಿಸಿತ್ತು. ಕಳೆದ ಫೆಬ್ರವರಿಯಲ್ಲಿ ಮೋದಿ ಹಾಗೂ ಮೆಹುಲ್ ಚೋಕ್ಸಿಯ ಪಾಸ್‌ಪೋರ್ಟ್‌ಗಳನ್ನು ಸರಕಾರ ರದ್ದುಗೊಳಿಸಿದೆ. 2002ರ ಬಳಿಕ , ತಲೆಮರೆಸಿಕೊಂಡಿರುವ 29 ಭಾರತೀಯರ ಹಸ್ತಾಂತರ ಕೋರಿ ಬ್ರಿಟನ್‌ಗೆ ಭಾರತ ಮನವಿ ಸಲ್ಲಿಸಿದ್ದು, 9 ಬಾರಿ ಭಾರತದ ಕೋರಿಕೆಯನ್ನು ಬ್ರಿಟನ್ ತಿರಸ್ಕರಿಸಿದೆ. ವಿಜಯ್ ಮಲ್ಯಾ ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬ್ರಿಟನ್‌ನ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News