ರಫೇಲ್ ಆರೋಪ ಕೇವಲ ಕಲ್ಪಿತ ಊಹೆ: ಅನಿಲ್ ಅಂಬಾನಿ

Update: 2018-08-20 17:49 GMT

ಹೊಸದಿಲ್ಲಿ, ಆ.20: ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಆರೋಪ ಆಧಾರರಹಿತ, ತಪ್ಪು ಮಾಹಿತಿಯಿಂದ ಕೂಡಿದ್ದು ಮತ್ತು ದುರದೃಷ್ಟಕರ ಎಂದು ರಿಲಾಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸೋಮವಾರ ತಿಳಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ರಫೆಲ್ ಯುದ್ಧ ವಿಮಾನ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರಕಾರ ಅನುಭವಿ ಹಿಂದುಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ ಸಂಸ್ಥೆಯನ್ನು ಕೈಬಿಟ್ಟು ಅನನುಭವಿ ರಿಲಾಯನ್ಸ್ ಸಂಸ್ಥೆಗೆ ನೀಡಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ರಫೇಲ್‌ನ 36 ಜೆಟ್‌ಗಳ ಒಂದೇ ಒಂದು ನಯಾಪೈಸೆಯ ಒಂದು ಬಿಡಿಭಾಗವನ್ನೂ ರಿಲಾಯನ್ಸ್ ತಯಾರಿಸಿಲ್ಲ. ನಮ್ಮ ಜವಾಬ್ದಾರಿ ಏನಿದ್ದರೂ ಆಮದು ಮತ್ತು ರಫ್ತು ನಿಬಂಧನೆಗಳಿಗೆ ಸೀಮಿತವಾಗಿದೆ. ಈ ಕಾರ್ಯದಲ್ಲಿ ನಮ್ಮ ಜೊತೆ ಸರಕಾರಿ ಸ್ವಾಮ್ಯದ ಬೆಲ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಸೇರಿದಂತೆ ನೂರಕ್ಕೂ ಅಧಿಕ ಸಣ್ಣ ಮತ್ತು ಅತಿಸಣ್ಣ ಸಂಸ್ಥೆಗಳು ಭಾಗಿಯಾಗಿವೆ ಎಂದು ಅಂಬಾನಿ ತಿಳಿಸಿದ್ದಾರೆ. ರಾಹುಲ್ ಗಾಂಧಿಯ ಹೇಳಿಕೆ ಕಾಲ್ಪನಿಕ ಊಹೆಗಳಿಂದ ಕೂಡಿದೆ ಎಂದು ತಿಳಿಸಿರುವ ಅಂಬಾನಿ, ಸ್ಥಾಪಿತ ಹಿತಾಸಕ್ತಿಗಳು ನೀಡಿರುವ ಕುಮ್ಮಕ್ಕಿನಿಂದ ರಾಹುಲ್ ಗಾಂಧಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News