ರಾಷ್ಟ್ರೀಯ ವಿಪತ್ತು ಘೋಷಣೆ ಸಮಸ್ಯೆಯನ್ನು ಪರಿಹರಿಸೀತೇ?

Update: 2018-08-21 06:17 GMT

ಈ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಎರಡು ವಾರಗಳಿಂದ ‘ದೇವರನಾಡು’ ಕೇರಳವನ್ನು ತತ್ತರಿಸುವಂತೆ ಮಾಡಿದ ನೆರೆ,ಭೂಕುಸಿತದಿಂದಾಗಿ ಈ ತನಕ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರವಿವಾರ ಕೇರಳಕ್ಕೆ ಧಾವಿಸಿ, ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬೆನ್ನಲ್ಲೇ 500 ಕೋಟಿ ರೂ. ನೆರವು ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇರಳದ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎಂದು ಕೇರಳ ಸರಕಾರ ಒತ್ತಾಯಿಸಿದೆ. ವಿರೋಧ ಪಕ್ಷಗಳೂ ಅದಕ್ಕೆ ಧ್ವನಿ ಕೂಡಿಸಿವೆ. ಈ ಬೇಡಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ,ಜನಸಾಮಾನ್ಯರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ನೆರೆ ದುರಂತಕ್ಕೆ ಸಂಬಂಧಿಸಿ ನಾವಿಂದು ನಿಜಕ್ಕೂ ಕೇಂದ್ರ ಸರಕಾರದಿಂದ ನಿರೀಕ್ಷಿಸುವುದು ಏನನ್ನು? ಬರೇ 500 ಕೋಟಿ ರೂಪಾಯಿ ಕೊಟ್ಟು ಕೈತೊಳೆದುಕೊಂಡಿರುವ ಕೇಂದ್ರ ಸರಕಾರ ದುರಂತವನ್ನು ‘‘ರಾಷ್ಟ್ರೀಯ ವಿಪತ್ತು’’ ಎಂದು ಘೋಷಿಸಿದಾಕ್ಷಣ ಸಮಸ್ಯೆ ಪರಿಹಾರವಾಗುತ್ತದೆಯೇ? ಇದೊಂದು ರೀತಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡಿ ಎಂದು ಒಂದು ಕಾಲದಲ್ಲಿ ರಾಜಕೀಯ ನಾಯಕರು ಮತ್ತು ಸಾಹಿತಿಗಳು ಕೂಗಾಡಿದ ಹಾಗೆ. ಶಾಸ್ತ್ರೀಯ ಸ್ಥಾನಮಾನ ನೀಡಿದ ಬಳಿಕವೂ ರಾಜ್ಯದಲ್ಲಿ ಕನ್ನಡದ ಸ್ಥಿತಿಗೆ ಹೇಗಿದೆ? ಕನ್ನಡ ಭಾಷೆ, ಸಂಸ್ಕೃತಿಯ ಮೇಲೆ ಅದು ಬೀರಿದ ಪರಿಣಾಮವೇನು? ಯಾರೂ ಚರ್ಚಿಸಲು ಹೋಗಿಲ್ಲ. ಇಂದು ಕನ್ನಡದ ಮೇಲೆ ಹಿಂದಿಯನ್ನು ಹೇರುವ ವ್ಯಾಪಕ ಸಂಚು ನಡೆಯುತ್ತಿದೆ. ಶಾಸ್ತ್ರೀಯ ಸ್ಥಾನಮಾನದಿಂದ ಕನ್ನಡದ ಹಿರಿತನ ಯಾವ ರೀತಿಯಲ್ಲೂ ಹೆಚ್ಚಳವಾಗಿಲ್ಲ. ಇದೇ ರೀತಿಯಲ್ಲಿ ‘ರಾಷ್ಟ್ರೀಯ ವಿಪತ್ತು’’ ಎನ್ನುವ ಘೋಷಣೆಯೂ ನಮ್ಮ ನಡುವೆ ಚಾಲ್ತಿಯಲ್ಲಿದೆ. ‘‘ರಾಷ್ಟ್ರೀಯ ವಿಕೋಪ’’ ಎಂಬ ಪದಕ್ಕೆ, ಯಾವುದೇ ಕಾನೂನುಬದ್ಧವಾದ ವ್ಯಾಖ್ಯಾನವಿಲ್ಲ. ಕೇಂದ್ರ ಸರಕಾರವು ಈಗಾಗಲೇ ಸಿಬ್ಬಂದಿ ಹಾಗೂ ಅಲ್ಪ ಹಣಕಾಸು ನೆರವಿನ ಮೂಲಕ ಪ್ರವಾಹ ಸಂತ್ರಸ್ತರಿಗೆ ನೆರವಾಗುತ್ತಿದೆ. ಕೇವಲ ಕೇರಳ ಪ್ರವಾಹವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿದಲ್ಲಿ, ಈಗಾಗಲೇ ಜಾರಿಯಲ್ಲಿರುವ ಪರಿಹಾರ ಕಾರ್ಯಗಳಲ್ಲಿ ಯಾವುದೇ ವ್ಯತ್ಯಾಸವನ್ನುಂಟು ಮಾಡಲಾರದು.

ಭಾರತದ ವಿಪತ್ತು ನಿರ್ವಹಣಾ ಯೋಜನೆಯು, 2005ರ ವಿಕೋಪ ನಿರ್ವಹಣಾ ಕಾಯ್ದೆಯ ವ್ಯಾಪ್ತಿಗೆ ಒಳಪಟ್ಟಿದೆ. ಆದಾಗ್ಯೂ,ಯಾವುದೇ ದುರಂತವನ್ನು, ರಾಷ್ಟ್ರೀಯ ವಿಕೋಪವೆಂದು ಘೋಷಿಸಲು ಈ ಕಾಯ್ದೆಯಡಿ ಅವಕಾಶವಿಲ್ಲ. ವಾಸ್ತವಿಕವಾಗಿ ಪ್ರಾಕೃತಿಕ ದುರಂತಗಳನ್ನು ರಾಷ್ಟ್ರೀಯ, ರಾಜ್ಯ ಅಥವಾ ಸ್ಥಳೀಯ ಮಟ್ಟದ ದುರಂತವೆಂಬ ಸ್ಪಷ್ಟವಾದ ವ್ಯತ್ಯಾಸ ಮಾಡಲಾಗದು.

ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯ ವರಿಷ್ಠರಲ್ಲೊಬ್ಬರಾದ ಅನಿಲ್ ಗುಪ್ತಾ ಪ್ರಕಾರ, ಪ್ರಾಕೃತಿಕ ವಿಕೋಪ ನಿರ್ವಹಣೆಯು ರಾಜ್ಯದ ಹೊಣೆಗಾರಿಕೆಯಾಗಿದೆ. ಪ್ರಾಕೃತಿಕ ದುರಂತ ಸಂಭವಿಸಿದ ಸಂದರ್ಭದಲ್ಲಿ ನೆರವು ನೀಡುವುದಷ್ಟೇ ರಾಜ್ಯ ಸರಕಾರದ ಹೊಣೆಗಾರಿಕೆಯಾಗಿದೆ. ಯಾವುದೇ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಕೋಪವೆಂದು ಘೋಷಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಆದರೆ ಆ ಬಗ್ಗೆ ರಾಜ್ಯ ಸರಕಾರವು ನೆರವು ಕೋರಿ ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು. ಆನಂತರವಷ್ಟೇ ಕೇಂದ್ರವು ರಾಜ್ಯದ ಕೋರಿಕೆಗೆ ಸಂಬಂಧಿಸಿ ಕಾರ್ಯಪ್ರವೃತ್ತವಾಗಬೇಕಾಗುತ್ತದೆ ಎಂದು ಗುಪ್ತಾ ಹೇಳುತ್ತಾರೆ.

‘ರಾಷ್ಟ್ರೀಯ ದುರಂತ’ವೆಂಬ ಪದಕ್ಕೆ ಕಾನೂನಾತ್ಮಕವಾಗಿ ಅಥವಾ ಆಡಳಿತಾತ್ಮಕವಾಗಿ ಯಾವುದೇ ಮಹತ್ವವಿಲ್ಲದಿದ್ದರೂ, ನಮ್ಮ ರಾಜಕಾರಣಿಗಳು, ಹಲವಾರು ವರ್ಷಗಳಿಂದಲೂ ಪೂರ್ಣಜ್ಞಾನವಿಲ್ಲದೆ ಆ ಪದವನ್ನು ಉರುಹೊಡೆಯುತ್ತಲೇ ಬಂದಿದ್ದಾರೆ. 2017ರಲ್ಲಿ ಗುಜರಾತ್, ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ್ದ ಪ್ರವಾಹವನ್ನು ರಾಷ್ಟ್ರೀಯ ದುರಂತವೆಂದು ಘೋಷಿಸಿರಲಿಲ್ಲ. ಆದಾಗ್ಯೂ,2014ರಲ್ಲಿ ಜಮ್ಮುಕಾಶ್ಮೀರದಲ್ಲಿ ಭೀಕರ ಪ್ರವಾಹ ಸಂಭವಿಸಿದಾಗ, ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ದುರಂತವೆಂಬ ಪದವನ್ನು ಬಳಸಿದ್ದರು. 2017ರಲ್ಲಿ ಬಿಹಾರದಲ್ಲಿ ಸಂಭವಿಸಿದ ಪ್ರವಾಹಕ್ಕೆ ಹೋಲಿಸಿದಲ್ಲಿ, ಜಮ್ಮುಕಾಶ್ಮೀರ ಪ್ರವಾಹದಲ್ಲಿ ಸಾವುನೋವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಿತ್ತೆಂಬುದು ಬೇರೆ ಮಾತು.

 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2016ರಲ್ಲಿ ಪ್ರಕಟಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನಾ ವರದಿಯು ಈ ಪ್ರಾಕೃತಿಕ ದುರಂತಗಳನ್ನು ಕ್ರಮಬದ್ಧವಾಗಿ ಶ್ರೇಣೀಕರಿಸಿದೆ. ಒಂದು ವೇಳೆ, ಯಾವುದೇ ದುರಂತವನ್ನು ಜಿಲ್ಲಾ ಮಟ್ಟದೊಳಗಿನ ಸಾಮರ್ಥ್ಯ ಹಾಗೂ ಸಂಪನ್ಮೂಲಗಳ ಮೂಲಕ ನಿರ್ವಹಿಸಲು ಸಾಧ್ಯವಾದಲ್ಲಿ ಅದು 1ನೇ ಮಟ್ಟದ ದುರಂತವೆನಿಸುತ್ತದೆ. ರಾಜ್ಯ ಸರಕಾರವು ಪ್ರಾಕೃತಿಕ ವಿಕೋಪದ ನಿರ್ವಹಣೆಗೆ ತನ್ನ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಹಾಗೂ ನೆರವಿಗಾಗಿ ರಾಜ್ಯ ಮಟ್ಟದ ಸಂಸ್ಥೆಗಳನ್ನು ನಿಯೋಜಿಸಬೇಕಾದ ಸನ್ನಿವೇಶ ಬಂದಲ್ಲಿ ಅದು 2 ಶ್ರೇಣಿಯ ದುರಂತವೆನಿಸುವುದು. ಒಂದು ವೇಳೆ ಸಂಭವಿಸಿರುವ ದುರಂತವು ಅತ್ಯಂತ ಭೀಕರವಾಗಿದ್ದಲ್ಲಿ ಹಾಗೂ ಅದನ್ನು ನಿರ್ವಹಿಸುವುದು ರಾಜ್ಯ ಸರಕಾರದ ಸಾಮರ್ಥ್ಯವನ್ನು ಮೀರಿದಲ್ಲಿ ಅದು 3ನೇ ಶ್ರೇಣಿಯ ದುರಂತವೆನಿಸುತ್ತದೆ.

ಪ್ರವಾಹಪೀಡಿತ ರಾಜ್ಯಗಳಿಗೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರಕಾರದ ತಾರತಮ್ಯ ಧೋರಣೆಯು ಮೊದಲಿನಿಂದಲೂ ನಡೆದುಕೊಂಡೇ ಬಂದಿದೆ. 2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹ, ಭೂಕುಸಿತದಿಂದಾಗಿ 5,700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಆಗಿನ ಮನಮೋಹನ್‌ಸಿಂಗ್ ಸರಕಾರವು, ಆ ರಾಜ್ಯಕ್ಕೆ 1 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿತ್ತು. ಇದಕ್ಕೆ ಹೋಲಿಸಿದಲ್ಲಿ 2015ರಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಭಾರೀ ನೆರೆಯಲ್ಲಿ ಮೃತಪಟ್ಟವರ ಸಂಖ್ಯೆ ಗಣನೀಯಾಗಿ ಕಡಿಮೆಯಿತ್ತು. ಆದಾಗ್ಯೂ ಕೇಂದ್ರ ಸರಕಾರದಿಂದ ಆ ರಾಜ್ಯಕ್ಕೆ ಸರಿಸುಮಾರು ಅಷ್ಟೇ ಮೊತ್ತದ (939.6 ಕೋಟಿ ರೂ.) ಪರಿಹಾರ ದೊರೆತಿತ್ತು. ಇದೀಗ ಕೇರಳವನ್ನು ಹೈರಾಣಾಗಿಸಿರುವ ಪ್ರವಾಹದಲ್ಲೂ ಕೇಂದ್ರದ ತಾರತಮ್ಯ ಧೋರಣೆ ಎದ್ದು ಕಾಣುತ್ತಿದೆ. ಆಗಸ್ಟ್ 13ರಂದು ಕೇಂದ್ರ ಸರಕಾರವು ಪ್ರವಾಹಪೀಡಿತ ಕೇರಳಕ್ಕೆ 100 ಕೋಟಿ ರೂ. ತುರ್ತು ಪರಿಹಾರ ಘೋಷಿಸಿತ್ತು.

ರಾಜ್ಯ ಸರಕಾರದ ವಿಪತ್ತು ನಿರ್ವಹಣಾ ನಿಧಿಯಲ್ಲಿ ಸಾಕಷ್ಟು ನಿಧಿಯಿರುವುದಾಗಿ ಅದು ಬೆಟ್ಟು ಮಾಡಿ ತೋರಿಸಿತ್ತು. ಆದಾಗ್ಯೂ ಪರಿಹಾರ ಬಿಡುಗಡೆಯಲ್ಲಿ ಮೋದಿ ಸರಕಾರವು ಕೇರಳವನ್ನು ಕಡೆಗಣಿಸಿದೆಯೆಂದು ರಾಜಕೀಯ ವಲಯಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಆಗ ಎಚ್ಚೆತ್ತುಕೊಂಡ ಕೇಂದ್ರ ಸರಕಾರ ಐದು ದಿನಗಳ ಬಳಿಕ 500 ಕೋಟಿ ರೂ. ಪರಿಹಾರವನ್ನು ಘೋಷಿಸಿದೆ. ಇದೀಗ ಕೊನೆಗೂ ಕೇರಳದ ದುರಂತವನ್ನು ‘‘ಗಂಭೀರ ಸ್ವರೂಪದ ದುರಂತ’’ ಎಂದು ಕರೆದು ದಕ್ಷಿಣ ಭಾರತೀಯರನ್ನು ಸಮಾಧಾನಿಸಲು ಯತ್ನಿಸಿದೆ. ಆದರೆ ಆ ಗಂಭೀರ ಸ್ವರೂಪದ ದುರಂತಕ್ಕೆ ಆರ್ಥಿಕವಾಗಿ ಕೇಂದ್ರ ಯಾಕೆ ಸ್ಪಂದಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಅದು ಇನ್ನೂ ಉತ್ತರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News