ಕ್ರಿಕೆಟ್‌ನಲ್ಲೂ ಮೀಸಲಾತಿ ಅಗತ್ಯವೇ?

Update: 2018-08-23 18:47 GMT

ದೇಶದ ಜನಸಂಖ್ಯೆಯಲ್ಲಿ ಶೇ.4ರಷ್ಟು ಮಾತ್ರವೇ ಇದ್ದ ಬ್ರಾಹ್ಮಣ ಕುಲಸ್ಥರೇ ಕ್ರಿಕೆಟ್‌ನಲ್ಲಿ ಅಧಿಕವಾಗಿ ಕಾಣಿಸುತ್ತಾ ಬಂದಿದ್ದಾರೆ. ನಿನ್ನೆ ಮೊನ್ನೆಯವರೆಗೆ ಭಾರತ ತಂಡದಲ್ಲಿ ಕನಿಷ್ಠ ಅರ್ಧ ಮಂದಿ ಬ್ರಾಹ್ಮಣ ಆಟಗಾರರೇ ಇರುತ್ತಿದ್ದರು.

ಭಾರತ ಕ್ರಿಕೆಟ್ ತಂಡದಲ್ಲಿ ದಲಿತರಿಗೆ, ಆದಿವಾಸಿಗಳಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ವರ್ಷದ ಹಿಂದೆ ಕೇಂದ್ರ ಮಂತ್ರಿ ರಾಮದಾಸ್ ಅಠಾವಳೆ ಮಾಡಿದ ಡಿಮ್ಯಾಂಡು ಸಂಚಲನ ಎಬ್ಬಿಸಿತು. ಅಧಿಕ ಮಂದಿ ಕರಿಯರು ಇರುವ ಫ್ರಾನ್ಸ್ ಟೀಂ ಫುಟ್‌ಬಾಲ್ ವಿಶ್ವಕಪ್ ಗೆಲ್ಲುವುದರೊಂದಿಗೆ ಬಹುಶಃ ಈಗ ಮತ್ತೆ ಈ ಅಂಶ ತೆರೆಯ ಮೇಲಕ್ಕೆ ಬಂದಿದೆ. ಇತ್ತೀಚೆಗಷ್ಟೇ ಇಬ್ಬರು ಯುವ ವಕೀಲರು ಗೌರವ್ ಭವ್ನಾನಿ, ಶುಭಂ ಜೈನ್ ಕ್ರಿಕೆಟ್‌ನಲ್ಲಿ ಕೂಡಾ ‘ಮೀಸಲಾತಿ’ (ಕೋಟಾ) ಪದ್ಧತಿ ಇರಬೇಕೆಂದು ‘ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯಲ್ಲಿ ಬರೆದ ಬರಹದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಹಮ್ಮದ್ ಕೈಫ್‌ರಂಥ ಮಾಜಿ ಕ್ರಿಕೆಟಿಗರು ಕೂಡಾ ಸ್ಪಂದಿಸಿ ಈ ವಾದವನ್ನು ತಳ್ಳಿ ಹಾಕಿದ್ದಾರೆ. ‘‘ಜಾತಿಯ ಗಡಿಗಳನ್ನು, ಕಟ್ಟುಪಾಡುಗಳನ್ನು ದಾಟಿದ ಘನತೆ ಕ್ರೀಡಾರಂಗಕ್ಕೆ ಸಲ್ಲುತ್ತದೆ’’ ಎಂದು ಕೈಫ್ ಅಂದಿದ್ದಾರೆ. ನಟಿ ರವೀನಾ ಟಂಡನ್ ಕೂಡಾ ಈ ವಿಷಯದ ಮೇಲೆ ಟ್ವೀಟ್ ಮಾಡುತ್ತಾ ಸಿನೆಮಾರಂಗದಲ್ಲಿ (ಬಹುಶಃ ಬಾಲಿವುಡ್‌ನಲ್ಲಿ) ಜಾತಿಗಳ ಪ್ರಸ್ತಾಪವೇ ಇರದೆಂದು ವ್ಯಾಖ್ಯಾನಿಸಿದ್ದಾರೆ. ಮತ್ತೆ ಅವರು ಹೇಳಿದಂತೆ ‘ಆಲ್ ಈಸ್ ವೆಲ್’ ಆಗಿದೆಯಾ?

 ನಮ್ಮ ಜನಸಂಖ್ಯೆಯಲ್ಲಿ ದಲಿತರು, ಆದಿವಾಸಿಗಳು ಶೇ.25ರಷ್ಟು ಇದ್ದಾರೆ. ಆದರೆ ದೇಶದಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಕ್ರೀಡೆಯಾದ ಕ್ರಿಕೆಟ್ ವಿಷಯಕ್ಕೆ ಬರುವಷ್ಟರಲ್ಲಿ ತಂಡದಲ್ಲಿ ಆ ಎರಡು ವರ್ಗಗಳ ಆಟಗಾರರೂ ಔಷಧಿಗೊಬ್ಬರೂ ಕಂಡು ಬರುವುದಿಲ್ಲ. ಮೇಲೆ ನಾವು ಹೇಳಿಕೊಂಡ ಭವ್ನಾನಿ, ಜೈನ್‌ರ ಬರಹದ ಪ್ರಕಾರ ಇದುವರೆಗೂ 289 ಮಂದಿ ಆಟಗಾರರು ಭಾರತದ ಪರವಾಗಿ ಕ್ರಿಕೆಟ್ ಆಡಿದರೆ ಅವರಲ್ಲಿ ನಾಲ್ವರು ಏಕನಾಥ್ ಸೋಲ್ಕರ್, ಕರ್ಸನ್ ಗಾವ್ರಿ, ವಿನೋದ್ ಕಾಂಬ್ಳಿ, ಭುವನೇಶ್ವರ್ ಕುಮಾರ್ ಮಾತ್ರವೇ ದಲಿತರು. ಆದರೆ ಈ ಲೇಖಕರ ಲೆಕ್ಕಕ್ಕೆ ಸರಿಯಾದ ಆಧಾರಗಳಿಲ್ಲ. ಸೋಲ್ಕರ್ ತುಂಬಾ ಬಡ ಕುಟುಂಬದಿಂದ ಬಂದ ಮಾತು ಸತ್ಯವೇ ಆದರೂ ಆತ ದಲಿತ ಎನ್ನುವುದಕ್ಕೆ ಸೂಕ್ತ ಆಧಾರಗಳಿಲ್ಲ. ಕರ್ಸನ್ ಗಾವ್ರಿ ವಿಷಯದಲ್ಲಾದರೂ 2004ರ ಚುನಾವಣೆಯಲ್ಲಿ ಒಂದು ಎಸ್ಸಿ ಮೀಸಲು ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವುದಕ್ಕೆ ಬಿಜೆಪಿ ಬಯಸುತ್ತಿರುವುದಾಗಿ ಒಂದು ಪತ್ರಿಕೆಯಲ್ಲಿ ಬಂದ ಸುದ್ದಿಯ ಹೊರತು ದಲಿತನೆನ್ನುವುದಕ್ಕೆ ಇನ್ಯಾವ ಆಧಾರಗಳೂ ಇಲ್ಲ. ಕಾಂಬ್ಳಿಯ ಕುರಿತು ಕೂಡಾ ಸ್ಪಷ್ಟತೆ ಇಲ್ಲ. ಆತ ಬೆಸ್ತರ ಕುಟುಂಬಕ್ಕೆ ಸೇರಿದವರೇ ಹೊರತು ದಲಿತ ಅಲ್ಲ ಎಂದು ಮುಂಬೈ ವರ್ಗಗಳು ಹೇಳುತ್ತವೆ. ಇನ್ನು ಭುವನೇಶ್ವರ್ ಕುಮಾರ್ ಕೂಡಾ ಗುರ್ಜಾರ್ ಎಂಬ ಹಿಂದುಳಿದ ಜಾತಿಗೆ ಸೇರಿದವರು ಎಂದು, ದಲಿತನೆಂದು ಆಧಾರವಿಲ್ಲವೆಂಬುದಾಗಿ ನಿಕಟವರ್ತಿಗಳು ಸ್ಪಷ್ಟಪಡಿಸುತ್ತಾರೆ. ಈ ಲೆಕ್ಕದಲ್ಲಿ ದಲಿತ ಜಾತಿಗಳಿಗೆ ಸೇರಿದ ಒಬ್ಬ ಆಟಗಾರ ಕೂಡಾ ಇಂಡಿಯಾ ಪರವಾಗಿ ಟೆಸ್ಟ್ ಆಡಿದಂತಿಲ್ಲ. ಇಂಡಿಯಾಗೆ ಟೆಸ್ಟ್ ಸ್ಥಾನ ಬರುವ ಮುನ್ನ ಅನಧಿಕೃತ ಇಂಗ್ಲೆಂಡ್ ಟೂರ್‌ಗಳಿಗೆ ಹೋದ ಪಲ್ವಂಕರ್ ಬಾಲು ಒಬ್ಬರೇ ರಾಷ್ಟ್ರೀಯ ತಂಡದಲ್ಲಿ ಆಡಿದ ದಲಿತ ಕ್ರಿಕೆಟರ್ ಎಂದು ಹೇಳಬೇಕು.
ದೇಶದ ಜನಸಂಖ್ಯೆಯಲ್ಲಿ ಶೇ.4ರಷ್ಟು ಮಾತ್ರವೇ ಇದ್ದ ಬ್ರಾಹ್ಮಣ ಕುಲಸ್ತರೇ ಕ್ರಿಕೆಟ್‌ನಲ್ಲಿ ಅಧಿಕವಾಗಿ ಕಾಣಿಸುತ್ತಾ ಬಂದಿದ್ದಾರೆ. ನಿನ್ನೆ ಮೊನ್ನೆಯವರೆಗೆ ಭಾರತ ತಂಡದಲ್ಲಿ ಕನಿಷ್ಠ ಅರ್ಧ ಮಂದಿ ಬ್ರಾಹ್ಮಣ ಆಟಗಾರರೇ ಇರುತ್ತಿದ್ದರು. ಟೀಂ ಇಂಡಿಯಾದಲ್ಲಿನ 11 ಮಂದಿ ಆಟಗಾರರಲ್ಲಿ ಎಂಟು ಮಂದಿ ಬ್ರಾಹ್ಮಣರಿದ್ದ ಸಂದರ್ಭಗಳು ಕನಿಷ್ಠ್ಠ ಎರಡು ಕಾಣಿಸುತ್ತದೆ. 1997 ಕೇಪ್‌ಟೌನ್ ಟೆಸ್ಟ್‌ನಲ್ಲಿ ಆಡಿದ ಆಟಗಾರರಲ್ಲಿ ಕ್ಯಾಪ್ಟನ್ ಅಝರುದ್ದೀನ್, ನಯನ್ ಮೋಂಗಿಯಾ, ದೊಡ್ಡಗಣೇಶ್ ವಿನಃ ಉಳಿದ ಎಂಟು ಮಂದಿ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಲಕ್ಷ್ಮಣ್, ಅನಿಲ್ ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್, ಡಬ್ಲು.ವಿ.ರಾಮನ್ ಇವರೆಲ್ಲಾ ಬ್ಯಾಹ್ಮಣರೇ. ಹಾಗೆ 2000ದಲ್ಲಿ ಆಸ್ಟ್ರೇಲಿಯಾದಲ್ಲಿ ಜರುಗಿದ ಕಾರ್ಲ್‌ಟನ್ ಆ್ಯಂಡ್ ಯುನೈಟೆಡ್ ವನ್‌ಡೇ ಸೀರೀಸ್ ಫೈನಲ್‌ನಲ್ಲಿ ಆಡಿದ ತಂಡದಲ್ಲಿ ಕೂಡಾ ಎಂಟು ಮಂದಿ ಬ್ರಾಹ್ಮಣ ಆಟಗಾರರು. ಸಚಿನ್, ದ್ರಾವಿಡ್, ಗಂಗೂಲಿ, ಕುಂಬ್ಳೆ, ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೇವಾಶಿಶ್ ಮೊಹಂತಿ, ಹೃಷಿಕೇಶ್ ಕಾನಿಟ್ಕರ್ ಕಾಣಿಸುತ್ತಾರೆ.


ಹಾಕಿ, ಫುಟ್ಬಾಲ್ ರೀತಿಯಲ್ಲಿ ಬರೆಸಿಕೊಂಡು ಆಡುವ ಕಾಂಟ್ರಾಕ್ಟ್ ಸ್ಪೋರ್ಟ್ಸ್ ಅಲ್ಲದಿರುವುದು, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೋಲ್ಕತಾದಂಥ ನಗರಗಳಿಂದಲೇ ಅಧಿಕ ಮಂದಿ ಆಟಗಾರರು ಬರುವುದೇ ಕ್ರಿಕೆಟ್‌ನಲ್ಲಿ ಬ್ರಾಹ್ಮಣ ಆಧಿಪತ್ಯಕ್ಕೆ ಕಾರಣ ಎಂದು ‘ಬ್ರಾಹ್ಮಣ್ಸ್ ಆ್ಯಂಡ್ ಕ್ರಿಕೆಟ್’ ಪುಸ್ತಕದ ಲೇಖಕ ಸಿರಿಯವಾನ್ ಆನಂದ್ ಅನ್ನುತ್ತಾರೆ. ಮುಖ್ಯವಾಗಿ ತಮಿಳುನಾಡಿನಲ್ಲಿ ಬ್ರಾಹ್ಮಣೇತರ ಕ್ರಿಕೆಟರ್‌ಗಳಿಗೆ ಸರಿಯಾದ ಅವಕಾಶಗಳಿರುತ್ತಿರಲಿಲ್ಲ ಎನ್ನುತ್ತಾರೆ. ‘‘ಯಾರಾದರೂ ಹೊಸ ಆಟಗಾರ ಚೆನ್ನಾಗಿ ಆಡುತ್ತಿದ್ದರೆ ಅಲ್ಲಿನ ಕ್ರಿಕೆಟ್ ಪ್ರಮುಖರು ಆತನ ಭುಜ ತಟ್ಟಿದಂತೆ ಮಾಡಿ ಜನಿವಾರ ಇದೆಯಾ ಇಲ್ವಾ ಎಂದು ಚೆಕ್ ಮಾಡುತ್ತಿದ್ದರು’’ ಎನ್ನುತ್ತಾರೆ. ಕ್ರಿಕೆಟ್ ಕಥೆಯೊಂದಿಗೆ 2014ರಲ್ಲಿ ಬಂದ ‘ಜೀವಾ’ ಎಂಬ ತಮಿಳು ಸಿನೆಮಾದಲ್ಲಿ ಹೀಗೆ ಯುವ ಕ್ರಿಕೆಟರ್‌ಗಳ ಜನಿವಾರ ಹುಡುಕುವ ದೃಶ್ಯ ತೋರಿಸಿದ್ದಾರೆ ಕೂಡಾ. ತಮಿಳುನಾಡಿನಿಂದ ರಾಷ್ಟ್ರೀಯ ತಂಡದೊಳಗೆ ಬಂದ ಆಟಗಾರರಲ್ಲಿ ಎಲ್. ಬಾಲಾಜಿ, ದಿನೇಶ್ ಕಾರ್ತಿಕ್‌ರಂಥ ಒಬ್ಬಿಬ್ಬರ ಹೊರತು ವೆಂಕಟ ರಾಘವನ್‌ರಿಂದ ಅಶ್ವಿನ್‌ವರೆಗೂ ಅಧಿಕ ಮಂದಿ ಬ್ರಾಹ್ಮಣರೇ ಇರುವುದು ಈ ವಾದಕ್ಕೆ ಬಲ ತುಂಬುತ್ತಿದೆ.
ಆದರೆ ಇತ್ತೀಚಿನ ಕಾಲದಲ್ಲಿ ಚಿಕ್ಕಪಟ್ಟಣಗಳಿಂದ ಹೆಚ್ಚಾಗಿ ಕ್ರಿಕೆಟಿಗರು ಬರುತ್ತಿರುವುದರಿಂದ ಟೀಂ ಇಂಡಿಯಾದಲ್ಲಿ ಬ್ರಾಹ್ಮಣಾಧಿಪತ್ಯ ಗಣನೀಯವಾಗಿ ತಗ್ಗಿದೆ. ಆದರೆ ಬ್ರಾಹ್ಮಣೇತರರಲ್ಲಿ ಕೂಡಾ ಮೇಲ್ಜಾತಿಯವರೇ ಹೆಚ್ಚಾಗಿ ತಂಡದಲ್ಲಿ ಕಂಡು ಬರುತ್ತಿದ್ದಾರೆ. ಕಪಿಲ್, ಯುವರಾಜ್, ಸೆಹ್ವಾಗ್‌ರಂಥ ಜಾಟರು, ಧೋನಿ, ರವೀಂದ್ರ ಜಡೇಜಾರಂಥ ರಾಜಪುತರು, ಕೊಹ್ಲಿ, ಶಿಖರ್ ಧವನ್‌ರಂಥ ಖತ್ರಿಗಳು, ಪಾರ್ಥಿವ್, ಅಕ್ಷರ್‌ರಂಥ ಪಟೇಲರು ಹೀಗೆ ಬಹುಮಂದಿ ಮುಖ್ಯವಾದ ಆಟಗಾರರು ಎಲ್ಲರೂ ಮೇಲ್ಜಾತಿಯವರೇ. ಧವನ್ ತೊಡೆ ತಟ್ಟಿ ಮೀಸೆ ತಿರುಗಿಸುವುದರಲ್ಲೂ, ಜಡೇಜಾ ಅಮಾವಾಸ್ಯೆಗೋ ಹುಣ್ಣಿಮೆಗೋ ಒಂದು 50 ಹೊಡೆದರೆ ಬ್ಯಾಟನ್ನು ಕತ್ತಿಯಂತೆ ತಿರುಗಿಸುವುದರಲ್ಲೂ ‘ನಾವು ಕ್ಷತ್ರಿಯರು ಕಣ್ರೀ’ ಎಂಬ ಜಾತ್ಯಹಂಕಾರವೇ ಕಾಣಿಸುತ್ತದೆ. ದಲಿತರು ಆದಿವಾಸಿಗಳ ಹಾಗೆ ರಾಷ್ಟ್ರೀಯ ಕ್ರಿಕೆಟ್ ಆಡಿದ ಹಿಂದುಳಿದ ಜಾತಿಯವರನ್ನು ಕೂಡಾ ಬೆರಳ ಮೇಲೆ ಲೆಕ್ಕಿಸಬಹುದು.
ಇನ್ನು ಮುಸ್ಲಿಮರ ವಿಷಯಕ್ಕೆ ಬಂದರೆ, ಚಿಕ್ಕ ಪಟ್ಟಣಗಳಿಂದ ಕ್ರಿಕೆಟರ್‌ಗಳು ಹುಟ್ಟಿಕೊಂಡು ಬರುತ್ತಿರುವುದರಿಂದ ಹೊಸ ಶತಮಾನದಲ್ಲಿ ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರ ಸಂಖ್ಯೆ ಹೆಚ್ಚಿದೆ ಎಂದು ಭವ್ನಾನಿ, ಜೈನ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಆದರೆ ಅವರಲ್ಲಿ ಅಧಿಕ ಮಂದಿ ಬೌಲರ್‌ಗಳು ಎಂದೇ ಅವರು ವ್ಯಾಖ್ಯಾನಿಸಿದ್ದಾರೆ. ಮೇಲ್ಜಾತಿಯವರು, ಧನಿಕರು ಬ್ಯಾಟಿಂಗ್‌ನತ್ತ ಆಸಕ್ತಿ ತೋರುವುದು, ಶಾರೀರಿಕ ಶ್ರಮದಿಂದ ಕೂಡಿರುವ ಬೌಲಿಂಗ್ ಕೆಳಜಾತಿಯವರು ಮಾಡಬೇಕಾಗಿ ಬರುವುದು, ಕ್ರಿಕೆಟ್‌ನಲ್ಲಿ ವಿಶ್ವಾದ್ಯಂತ ಇರುವ ಧೋರಣೆಯೇ. ವಿಚಿತ್ರ ಏನೆಂದರೆ ಮಹಿಳಾ ಕ್ರಿಕೆಟರ್‌ಗಳ ವಿಷಯಕ್ಕೆ ಬಂದರೆ ಪರಿಸ್ಥಿತಿ ತದ್ವಿರುದ್ಧವಾಗಿದೆ. ಮಹಿಳಾ ಕ್ರಿಕೆಟ್ ತಂಡದಲ್ಲಿ ಅರ್ಧ ಮಂದಿ ದಲಿತರು, ಇತರ ಬಹುಸಂಖ್ಯಾತರೇ ಇದ್ದಾರೆ ಎಂದು ಸುಕನ್ಯಾಶಾಂತ ಎಂಬ ಜರ್ನಲಿಸ್ಟ್ ಹೇಳುತ್ತಿದ್ದಾರೆ. ಮೇಲ್ಜಾತಿ ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ಕ್ರೀಡೆಗಳ ವಿಷಯದಲ್ಲಿ ಪ್ರೋತ್ಸಾಹ ಸಿಗದೇ ಹೋಗುವುದು ಇದಕ್ಕೆ ಕಾರಣ ಎಂದು ಆಕೆ ಬರೆಯುತ್ತಾರೆ. ಹಾಕಿ, ಫುಟ್‌ಬಾಲ್‌ನಂಥ ಕ್ರೀಡೆಗಳಲ್ಲಿ ಪುರುಷರಲ್ಲಿ ದಲಿತರು, ಆದಿವಾಸಿಗಳು ಬಹಳ ಮಂದಿ ಕಾಣಿಸುತ್ತಾರೆ. 1928ರಲ್ಲಿ ಮೊಟ್ಟ ಮೊದಲ ಸಲ ನಾವು ಹಾಕಿಯಲ್ಲಿ ಒಲಿಂಪಿಕ್ ಸ್ವರ್ಣ ಗೆದ್ದಾಗ ತಂಡಕ್ಕೆ ನಾಯಕತ್ವ ವಹಿಸಿದ್ದು ಜೈಪಾಲ್ ಸಿಂಗ್ ಮುಂಡಾ ಎಂಬ ಓರ್ವ ಆದಿವಾಸಿಯಾಗಿರುವುದು ವಿಶೇಷ.
ಬಿಳಿಯರ ಆಡಳಿತದಿಂದ ವಿಮುಕ್ತರಾದ ಮೇಲೆ ದ.ಆಫ್ರಿಕಾ ಕ್ರಿಕೆಟ್‌ನಲ್ಲಿ ಕರಿಯರಿಗೆ ಮಿಶ್ರ ಜಾತಿಯವರಿಗೆ ಮೀಸಲಾತಿ ಪದ್ಧತಿ ಜಾರಿ ಮಾಡಿದರು. ಆರಂಭದಲ್ಲಿ ಶಾಲೆ, ಜ್ಯೂನಿಯರ್ ಸ್ಥಾಯಿಯಲ್ಲಿ ಈ ಮೀಸಲಾತಿಯನ್ನು ಪ್ರವೇಶಗೊಳಿಸಿದರು. ಈಗ ರಾಷ್ಟ್ರೀಯ ತಂಡದಲ್ಲಿ ಕೂಡಾ ಸರಾಸರಿ ಕನಿಷ್ಠ ಆರು ಮಂದಿ ಮಿಶ್ರ ಅಥವಾ ಕರಿಯ ಜಾತಿಯವರು ಇರಬೇಕೆನ್ನುವ ನಿಯಮ ಇದೆ. ಈ ಕೋಟಾ ಪದ್ಧತಿ ಇಷ್ಟವಾಗದೆಯೇ ಕೆವಿನ್ ಪೀಟರ್ಸನ್‌ರಂತಹ ಆಟಗಾರರು ದ.ಆಫ್ರಿಕಾ ತ್ಯಜಿಸಿ ಇಂಗ್ಲೆಂಡಿಗೆ ಹೊರಟು ಹೋದರು. ಆದರೆ ಈ ಮೀಸಲಾತಿಯಿಂದಲೇ ಕಗಿಸೋ ರಬಾಡಾ, ಲುಂಗಿ ಎನ್‌ಗಿಡಿಯಂಥ ಕ್ರಿಕೆಟ್ ಮಿಂಚುಗಳು ಹುಟ್ಟಿಬಂದರೆನ್ನುವುದು ಈ ಪದ್ಧತಿಯ ಸಮರ್ಥಕರ ವಾದ. ಕೋಟಾ ಪದ್ಧತಿ ಇದ್ದರೂ ಕೂಡಾ ವಿಶ್ವ ಕ್ರಿಕೆಟ್‌ನಲ್ಲಿ ಒಂದು ಅಗ್ರಶ್ರೇಣಿ ತಂಡವಾಗಿ ದ.ಅಫ್ರಿಕಾ ಮುಂದುವರಿಯುತ್ತಿದೆ ಎಂದು ಅವರು ಅನ್ನುತ್ತಾರೆ.
ಮೀಸಲಾತಿ ಮೂಲಕ ಓರ್ವ ದಲಿತ, ಆದಿವಾಸಿ ಆಟಗಾರ ವಿಜೃಂಭಿಸಿದರೆ ಎಷ್ಟೋ ಕೋಟಿ ಬಹುಸಂಖ್ಯಾತರಿಗೆ ಸ್ಫೂರ್ತಿಯಾಗಿ ನಿಲ್ಲುತ್ತಾನೆಂದು ಗೌರವ್, ಶುಭಂರ ವಾದ. ಮೀಸಲಾತಿ ತುಂಬಾ ಸೂಕ್ಷ್ಮ ಸಂಗತಿ. ಒಮ್ಮೆಲೆ ಬಿಪಿ ಏರಿಸುವ ಅಂಶ. ಹಾಗಿದ್ದೂ ಈ ಯುವ ವಕೀಲರ ಪ್ರಸ್ತಾಪದ ಬಗ್ಗೆ ಬೌದ್ಧಿಕ ಚರ್ಚೆ ನಡೆಯಬೇಕು. ಅವರು ಹೇಳುವಂತೆ ಶಾಲೆ, ಜ್ಯೂನಿಯರ್ ತಂಡಗಳಲ್ಲಾದರೂ ಮೀಸಲಾತಿ ಪ್ರವೇಶಗೊಳಿಸಲು ಪ್ರಯತ್ನಿಸಬಹುದು. ಹಿಂದುಳಿದ ಜಾತಿಯವರು ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ಕಲ್ಪಿಸಬೇಕು. ಐಪಿಎಲ್‌ನಲ್ಲಿ ಈಗಾಗಲೇ ಕೋಟಾ ಪದ್ಧತಿ ಇದೆ ಎಂದು, ಅದು ಉತ್ತಮ ಫಲ ನೀಡುತ್ತಿದೆ ಎಂದು ನಿಸ್ಸೀಮ್ ಮನ್ನೆತ್ತುಕರನ್ ಎಂಬ ಸಾಮಾಜಿಕ ಕಾರ್ಯಕರ್ತ ಹೇಳುತ್ತಾರೆ. ನಾಲ್ವರು ವಿದೇಶಿ ಆಟಗಾರರು ಇರಬೇಕೆನ್ನುವ ಪರಿಮಿತಿಯೊಂದಿಗೆ, ದೇಶೀ, ಸ್ಥಳೀಯ ಆಟಗಾರರನ್ನು ತಂಡದಲ್ಲಿ ತೆಗೆದುಕೊಳ್ಳಬೇಕೆಂಬ ನಿಯಮದಿಂದಲೇ ಐಪಿಎಲ್‌ನಲ್ಲಿ ಕೆಳವರ್ಗಗಳ ಕ್ರಿಕೆಟರ್‌ಗಳಿಗೆ ಅವಕಾಶ ಬರುತ್ತಿದೆ ಎಂದು ಅವರ ಅಭಿಪ್ರಾಯ.
ಸುನೀಲ್ ಗಾವಸ್ಕರ್ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಂತೆ ಅವರು ಹುಟ್ಟಿದ ಆಸ್ಪತ್ರೆಯಲ್ಲಿ ಅವರನ್ನು ತಪ್ಪಾಗಿ ಬೆಸ್ತ ಮಹಿಳೆಯ ಪಕ್ಕದಲ್ಲಿ ಮಲಗಿಸಲಾಗಿತ್ತಂತೆ. ತಕ್ಷಣ ಹಿರಿಯರು ಎಚ್ಚೆತ್ತುಕೊಳ್ಳದಿದ್ದಲ್ಲಿ ತಾವು ಸಮುದ್ರದಲ್ಲಿ ಮೀನು ಹಿಡಿಯುತ್ತಾ ಇರಬೇಕಾಗುತ್ತಿತ್ತಂತೆ. ಇದಲ್ಲವೇ ಜಾತ್ಯಹಂಕಾರ?
(ಕ್ರೀಡಾ ವಿಶ್ಲೇಷಕ ಸಿ. ವೆಂಕಟೇಶ್ರ ಲೇಖನದ ಆಧಾರಿತ)
ಕೃಪೆ: ಆಂಧ್ರಜ್ಯೋತಿ

Writer - ಕಸ್ತೂರಿ

contributor

Editor - ಕಸ್ತೂರಿ

contributor

Similar News

ಜಗದಗಲ
ಜಗ ದಗಲ