ಕೇರಳಕ್ಕೆ ಮಾನವೀಯ ನೆರವು ನೀಡಲು ಮುಂದಾದ ಪಾಕಿಸ್ತಾನ

Update: 2018-08-24 03:49 GMT

ಹೊಸದಿಲ್ಲಿ, ಆ. 24: ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಅಗತ್ಯವಾಗಿರುವ ಮಾನವೀಯ ನೆರವು ನೀಡಲು ಪಾಕಿಸ್ತಾನ ಸರ್ಕಾರ ಸಿದ್ಧವಿದೆ ಎಂದು ಅಲ್ಲಿನ ನೂತನ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.

ದೇಶದ 22ನೇ ಪ್ರಧಾನಿಯಾಗಿ ಕಳೆದ ಶನಿವಾರ ಅಧಿಕಾರ ವಹಿಸಿಕೊಂಡಿರುವ ಅವರು, ಗುರುವಾರ ಸಂಜೆ ಈ ಸಂಬಂಧ ಟ್ವೀಟ್ ಮಾಡಿದ್ದಾರೆ. "ಭಾರತದ ಕೇರಳದಲ್ಲಿ ಭೀಕರ ಪ್ರವಾಹದಿಂದ ಹಾನಿಗೀಡಾಗಿರುವ ಜನರಿಗೆ ಪಾಕಿಸ್ತಾನದ ಜನತೆಯ ಪರವಾಗಿ ನಾವು ನಮ್ಮ ಪ್ರಾರ್ಥನೆ ಹಾಗೂ ಶುಭ ಹಾರೈಕೆಯನ್ನು ಕಳುಹಿಸಿದ್ದೇವೆ. ಅವರಿಗೆ ಅಗತ್ಯವಾದ ಯಾವುದೇ ಮಾನವೀಯ ನೆರವು ಒದಗಿಸಲು ನಾವು ಸಿದ್ಧರಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 8ರಿಂದೀಚೆಗೆ ಕೇರಳದಲ್ಲಿ ಪ್ರವಾಹಕ್ಕೆ 237 ಮಂದಿ ಬಲಿಯಾಗಿದ್ದು, 14 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ. ಸುಮಾರು 20 ಸಾವಿರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಕೇರಳ ಸರ್ಕಾರ ತಕ್ಷಣಕ್ಕೆ 2600 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಕೋರಿದ್ದರೆ, ಕೇಂದ್ರ ಸರ್ಕಾರ 600 ಕೋಟಿ ಬಿಡುಗಡೆ ಮಾಡಿದೆ.

ಈಗಾಗಲೇ ಯುಎಇ, ಕತಾರ್ ಹಾಗೂ ಮಾಲ್ಡೀವ್ಸ್ ಕೇರಳಕ್ಕೆ ನೆರವು ನೀಡಲು ಮುಂದೆ ಬಂದಿದ್ದರೂ, ಪರಿಹಾರ ಕಾರ್ಯಕ್ಕೆ ವಿದೇಶಿ ಸರ್ಕಾರಗಳ ನೆರವು ಸ್ವೀಕರಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News