ವಾಜಪೇಯಿ ಶ್ರದ್ಧಾಂಜಲಿ ಸಭೆಯ ವೇದಿಕೆಯಲ್ಲಿ ನಗುತ್ತಿದ್ದ ಬಿಜೆಪಿ ಸಚಿವರು: ವೀಡಿಯೋ ವೈರಲ್

Update: 2018-08-24 10:43 GMT

ರಾಯಪುರ್, ಆ.24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ  ಗೌರವಾರ್ಥವಾಗಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ  ಬಿಜೆಪಿ ಆಡಳಿತವಿರುವ ಛತ್ತೀಸ್ ಗಢದ ಇಬ್ಬರು ಸಚಿವರು  ವೇದಿಕೆಯಲ್ಲಿ ಕುಳಿತು ನಗುತ್ತಿರುವ ವೀಡಿಯೋ ವೈರಲ್ ಆಗಿದೆ.

ರಾಜ್ಯ ಕೃಷಿ ಸಚಿವ ಬೃಜ್ ಮೋಹನ್ ಅಗರ್ವಾಲ್ ಹಾಗೂ ಆರೋಗ್ಯ ಸಚಿವ ಅಜಯ್ ಚಂದ್ರಾಕರ್ ಅವರು ಪರಸ್ಪರ ಮಾತನಾಡುತ್ತಾ ನಗುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ.

ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಪ್ರಮುಖ ನದಿಗಳಲ್ಲಿ ವಿಸರ್ಜಿಸಿದ ಬಳಿಕ ಬುಧವಾರ ಈ ಸಭೆ ನಡೆದಿತ್ತು.  ಸಚಿವ ಚಂದ್ರಾಕರ್ ನಗುತ್ತಾ ತಮ್ಮ ಎದುರಿಗಿರುವ ಮೇಜನ್ನು ಬಡಿಯುತ್ತಿರುವುದೂ ಕಾಣಿಸುತ್ತದೆ. ಆ ಕ್ಷಣ ರಾಜ್ಯ ಬಿಜೆಪಿ ಅಧ್ಯಕ್ಷ ಧರಂಲಾಲ್ ಕೌಶಿಕ್ ಅವರು ಚಂದ್ರಾಕರ್ ಅವರ ಕೈಹಿಡಿದು  ನಗಬಾರದೆಂದು ಸಂಜ್ಞೆ ಮಾಡಿದ್ದೂ ಕಾಣಿಸುತ್ತದೆ. ಸಭೆಯಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಕೂಡ ಹಾಜರಿದ್ದರು.

ಈ ವೀಡಿಯೋ ವಿಚಾರವಾಗಿ ವಿಪಕ್ಷ ಕಾಂಗ್ರೆಸ್ ಇಬ್ಬರು ಸಚಿವರನ್ನೂ ತರಾಟೆಗೆ ತೆಗೆದುಕೊಂಡಿದೆ.  ``ಬಿಜೆಪಿಯ ಉನ್ನತ ನಾಯಕತ್ವ ಅಟಲ್ ಜೀಯವರನ್ನು ಅವರು ಬದುಕಿದ್ದಾಗ ಕಡೆಗಣಿಸಿತ್ತು. ಇದೀಗ ಅವರು ತೀರಿ ಹೋದ ನಂತರ ಈ ಬಿಜೆಪಿ ಸಚಿವರ ವರ್ತನೆಯು ಅವರಿಗೆ ಅಗಲಿದ ಹಿರಿಯ ನಾಯಕನ ಮೇಲೆ ಎಷ್ಟು ಗೌರವವಿದೆಯೆಂದು ತೋರಿಸುತ್ತದೆ,'' ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲೇಶ್ ನಿತಿನ್ ತ್ರಿವೇದಿ ಹೇಳಿದ್ದಾರೆ.

“ಬಿಜೆಪಿ ನಾಯಕರಿಗೆ ಅಟಲ್ ಜೀ ಅವರಿಗೆ ಗೌರವ ತೋರಿಸುವುದು ಸಾಧ್ಯವಿಲ್ಲವಾದರೆ ಕನಿಷ್ಠ ಅಗೌರವ ತೋರದೇ ಇರಲಿ. ಅಟಲ್ ಜೀ ನಿಧನದ ನಂತ ಬಿಜೆಪಿ ಮತ್ತು ರಮಣ್ ಸಿಂಗ್ ಹಿರಿಯ ನಾಯಕನಿಗೆ ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಕೇವಲ ನಾಟಕ'' ಎಂದೂ ಅವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News