ಇನ್ನು ಆಧಾರ್ ದೃಢೀಕರಣಕ್ಕೆ ‘ಮುಖ ಗುರುತು’ ಕಡ್ಡಾಯ

Update: 2018-08-24 11:26 GMT

ಹೊಸದಿಲ್ಲಿ, ಆ.24: ಪ್ರತಿ ಬಾರಿ ಆಧಾರ್ ಸಂಖ್ಯೆ ದೃಢೀಕರಣ ಮಾಡುವ ಸಂದರ್ಭ ಸ್ಥಳದಲ್ಲೇ ಫೋಟೋ ತೆಗೆಯುವ ಮೂಲಕ ಫೇಶಿಯಲ್ ರೆಕಗ್ನಿಶನ್ ಅಥವಾ ‘ಮುಖ ಗುರುತು’ ಪ್ರಕ್ರಿಯೆಯನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಕಡ್ಡಾಯಗೊಳಿಸಿದೆ.

ಈಗಾಗಲೇ ಬೆರಳಚ್ಚು ಅಥವಾ ಐರಿಸ್ ಸ್ಕ್ಯಾನ್ ಮೂಲಕ ನಡೆಸಲಾಗುವ ದೃಢೀಕರಣದ ಹೊರತಾಗಿ ಈ ಫೇಶಿಯಲ್ ರೆಕಗ್ನಿಶನ್ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುವುದು.

ಪ್ರಾಧಿಕಾರವು ಜೂನ್ 19 ಹಾಗೂ ಆಗಸ್ಟ್ 17ರಂದು ಅಥೆಂಟಿಕೇಶನ್ ಯೂಸರ್ ಏಜನ್ಸಿಗಳು, ಅಥೆಂಟಿಕೇಶನ್ ಸರ್ವಿಸ್ ಏಜನ್ಸಿಗಳು ಹಾಗೂ ಬಯೋಮೆಟ್ರಿಕ್ ಸಾಧನ ಪೂರೈಕೆದಾರರಿಗೆ ನೀಡಲಾದ ಅಧಿಕೃತ ಸುತ್ತೋಲೆಯಂತೆ  ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಆಧಾರ್ ದೃಢೀಕರಣದ ಸಂದರ್ಭ ಫೇಶಿಯಲ್ ರೆಕಗ್ನಿಶನ್ ಪ್ರಕ್ರಿಯೆಯನ್ನು ಅನುಸರಿಸದೇ ಇರುವುದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದಲ್ಲದೆ ಆಧಾರ್ ಕಾಯಿದೆ 2016ರ ಸೆಕ್ಷನ್ 42 ಹಾಗೂ 43 ಅನ್ವಯ ಜೈಲು ಶಿಕ್ಷೆ  ಮತ್ತು ದಂಡ ವಿಧಿಸಬಹುದಾಗಿದೆ.

ಪ್ರತಿ ಬಾರಿ ಯಾವುದಾದರೂ ಉದ್ದೇಶಕ್ಕೆ ಆಧಾರ್ ದೃಢೀಕರಣ ಮಾಡಬೇಕಾಗಿ ಬಂದಾಗ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಜತೆ ವ್ಯಕ್ತಿಯ ಫೋಟೋ ಕೂಡ ಕ್ಲಿಕ್ಕಿಸಿ ಅದನ್ನು ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಅಲ್ಲಿಂದ ದೃಢೀಕರಣ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News