ಸಾಕ್ಷಿಯನ್ನು ಬಿಜೆಪಿ ಶಾಸಕನ ಜನರು ವಿಷವುಣಿಸಿ ಕೊಂದಿದ್ದಾರೆ: ಸಂತ್ರಸ್ಥೆಯ ಚಿಕ್ಕಪ್ಪನ ಆರೋಪ

Update: 2018-08-24 14:38 GMT

ಹೊಸದಿಲ್ಲಿ, ಆ.24: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆಯ ಹತ್ಯೆಯ ಪ್ರಮುಖ ಸಾಕ್ಷಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದಾಗಿ ಸಂತ್ರಸ್ತೆಯ ಚಿಕ್ಕಪ್ಪ ತಿಳಿಸಿದ್ದಾರೆ. ಪ್ರಮುಖ ಸಾಕ್ಷಿದಾರ ಯೂನುಸ್‌ನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸಂತ್ರಸ್ತೆಯ ಚಿಕ್ಕಪ್ಪ, ಉತ್ತರ ಪ್ರದೇಶ ಪೊಲೀಸ್ ಮತ್ತು ಕೇಂದ್ರ ತನಿಖಾ ಮಂಡಳಿಗೆ ಪತ್ರವನ್ನು ಬರೆದಿದ್ದು ತನ್ನ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಹಾಗೂ ಆತನ ಸಹಚರರು ತನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಹದಿನೇಳರ ಹರೆಯದ ಬಾಲಕಿ 2017ರ ಜೂನ್‌ನಲ್ಲಿ ಆರೋಪಿಸಿದ್ದಳು. ಆದರೆ ಆ ವೇಳೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಸೆಂಗರ್‌ನನ್ನು ಹೆಸರಿಸಿರಲಿಲ್ಲ. ಸೆಂಗರ್ ಹೆಸರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸುವಂತೆ ಕೋರಿ ಸಂತ್ರಸ್ತೆ ಹಲವು ಬಾರಿ ಮುಖ್ಯಮಂತ್ರಿ ಕಚೇರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಎಲ್ಲ ಪ್ರಯತ್ನಗಳು ವಿಫಲವಾದಾಗ ಸಂತ್ರಸ್ತೆಯ ತಾಯಿ ಅಂತಿಮವಾಗಿ ಮುಖ್ಯ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಬಳಿ ತೆರಳಿ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದರು.

ಎಪ್ರಿಲ್ ಮೂರರಂದು ಸಂತ್ರಸ್ತೆಯ ತಂದೆಗೆ ಸೆಂಗರ್ ಸಹೋದರ ಅತುಲ್ ಸಿಂಗ್ ತನ್ನ ಸಹಚರರೊಂದಿಗೆ ಸೇರಿ ಹಾಡಹಗಲೇ ಹಲ್ಲೆ ನಡೆಸಿದ್ದ. ಸಂತ್ರಸ್ತೆಯ ತಂದೆ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಹಲ್ಲೆ ನಡೆಸುವ ವಿಡಿಯೊ ಬಯಲಾಗಿ ಅದರಲ್ಲಿ ಹಲ್ಲೆಕೋರರ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿತ್ತು. ಘಟನೆ ನಡೆದ ಸಮಯದಲ್ಲಿ ಸ್ಥಳದಲ್ಲಿದ್ದ ಯೂನುಸ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಆಗಸ್ಟ್ 18ರಂದು ಅವರು ಕರುಳಿಗೆ ಸಂಬಂಧಿಸಿದ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ದೇಹವನ್ನು ಅದೇ ದಿನ ದಫನ ಮಾಡಲಾಗಿತ್ತು. ಯೂನುಸ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ. ಅವರ ಕುಟುಂಬ ಸಾವಿನ ಬಗ್ಗೆ ದೂರು ದಾಖಲಿಸಿಲ್ಲ ಮತ್ತು ಯೂನುಸ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರೂ ಪೊಲೀಸರು ಅವರ ಸಾವಿನ ಬಗ್ಗೆ ತನಿಖೆ ನಡೆಸಲು ಮುಂದಾಗಿಲ್ಲ. ಯೂನುಸ್‌ಗೆ ಸೆಂಗರ್‌ನ ಜನರು ವಿಷವುಣಿಸಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪೊಲೀಸರು, ಯೂನುಸ್‌ಗೆ ಹಲವು ವರ್ಷಗಳಿಂದ ಕರುಳಿನ ರೋಗವಿತ್ತು ಮತ್ತು ಅದಕ್ಕೆ ಆತ ದೀರ್ಘ ಸಮಯದಿಂದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ. ಆ ರೋಗದಿಂದಲೇ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News