ನೆರೆ ಪರಿಹಾರ ವಿಚಾರದಲ್ಲಿ ಕೇರಳಕ್ಕೆ ಪ್ರತ್ಯೇಕ ಮಾನದಂಡ ಅನ್ವಯಿಸಿ: ಪಿಣರಾಯಿ ವಿಜಯನ್

Update: 2018-08-24 15:58 GMT

ತಿರುವನಂತಪುರ, ಆ. 24: ನೆರೆ ಪರಿಹಾರ ವಿಸ್ತರಣೆ ವಿಚಾರದಲ್ಲಿ ಕೇರಳಕ್ಕೆ ಭಿನ್ನ ಮಾನದಂಡ ಅನ್ವಯಿಸಬೇಕು. ಯಾವುದೇ ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಸಂಭವಿಸಿದ ಹಾನಿಯನ್ನು ಕೇರಳದಲ್ಲಿ ಉಂಟಾದ ವ್ಯಾಪಕ ನಷ್ಟದೊಂದಿಗೆ ಹೋಲಿಸಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಈ ತಿಂಗಳಿಂದ ಆರಂಭವಾಗಿರುವ ನೆರೆ ಹಾಗೂ ಭೂಕುಸಿತದಿಂದ ಉಂಟಾಗಿರುವ ನಷ್ಟದ ಬಗ್ಗೆ ವಿವರವಾದ ಲೆಕ್ಕಾಚಾರ ನೀಡಿರುವ ಅವರು, ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 20 ಸಾವಿರ ಕೋ. ರೂ. ನಷ್ಟ ಉಂಟಾಗಿದೆ. ಈ ಮೊತ್ತ ರಾಜ್ಯದ 2018-19ರ ಬಜೆಟ್‌ಗೆ ಸಮಾನವಾಗಿದೆ ಎಂದಿದ್ದಾರೆ. ಕೇರಳದಲ್ಲಿ ಆಗಸ್ಟ್ 8ರಿಂದ ಸುರಿದ ಭಾರೀ ಮಳೆ ಹಾಗೂ ನೆರೆಗೆ 231 ಜನರು ಮೃತಪಟ್ಟಿದ್ದಾರೆ. 10.40 ಲಕ್ಷಕ್ಕಿಂತಲೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.

ಅವರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನೆರೆ ಹಾವಳಿಯಿಂದ ಜರ್ಝರಿತವಾಗಿರುವ ಕೇರಳ ವಿದೇಶಿ ನೆರವನ್ನು ಸ್ವೀಕರಿಸುವ ಕುರಿತು ಬಿಕ್ಕಟ್ಟು ಇರುವ ಸಂದರ್ಭದಲ್ಲೇ ದುರಂತದ ಪ್ರಮಾಣ ಹಾಗೂ ಅದಕ್ಕೆ ಬೇಕಾದ ನೆರವಿನ ಬಗ್ಗೆ ಪಿಣರಾಯಿ ವಿಜಯನ್ ಒತ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News