ಆರೆಸ್ಸೆಸ್ ಎನ್ನುವುದು ಮುಸ್ಲಿಂ ಬ್ರದರ್ ಹುಡ್ ಇದ್ದಂತೆ ಎಂದ ರಾಹುಲ್ ಗಾಂಧಿ

Update: 2018-08-24 16:49 GMT

ಹೊಸದಿಲ್ಲಿ, ಆ.24: ಆರೆಸ್ಸೆಸ್ ಸಂಘಟನೆಯು ಮುಸ್ಲಿಂ ಬ್ರದರ್ ಹುಡ್ ಇದ್ದಂತೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದು, ಇದರಿಂದ ಆಕ್ರೋಶಗೊಂಡಿರುವ ಬಿಜೆಪಿ ರಾಹುಲ್ ಕ್ಷಮೆಯಾಚನೆಗೆ ಒತ್ತಾಯಿಸಿದೆ.

ಲಂಡನ್‍ನ ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್‍ನಲ್ಲಿ ಮಾತನಾಡಿದ ರಾಹುಲ್‍ಗಾಂಧಿ, "ಆರೆಸ್ಸೆಸ್ ಭಾರತದ ಸ್ವರೂಪವನ್ನೇ ಬದಲಿಸಲು ಪ್ರಯತ್ನ ಮಾಡುತ್ತಿದೆ. ಭಾರತದ ಇತರ ಯಾವ ಸಂಘಟನೆಗಳು ಕೂಡಾ ಭಾರತದ ಸಂಸ್ಥೆಗಳ ಸ್ವಾಧೀನ ಬಯಸಿಲ್ಲ. ಸಂಪೂರ್ಣ ಹೊಸ ಕಲ್ಪನೆಯನ್ನು ನಾವು ನೋಡುತ್ತಿದ್ದೇವೆ. ಇದು ಅರಬ್ ಜಗತ್ತಿನಲ್ಲಿರುವ ಮುಸ್ಲಿಂ ಬ್ರದರ್ ಹುಡ್ ಸಂಘಟನೆಯ ಕಲ್ಪನೆಯನ್ನು ಹೋಲುತ್ತದೆ. ಪ್ರತಿ ಸಂಸ್ಥೆಗಳ ಮೂಲಕವೂ ಒಂದು ಸಿದ್ಧಾಂತ ಹರಡಬೇಕು ಎನ್ನುವುದು ಇದರ ಆಶಯ ಮತ್ತು ಒಂದು ಕಲ್ಪನೆ ಉಳಿದೆಲ್ಲವನ್ನೂ ಹೊಸಕಿ ಹಾಕಬೇಕು ಎನ್ನುವುದು ಈ ಸಿದ್ಧಾಂತ" ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, "ಮುಸ್ಲಿಂ ಒಡನಾಡಿಗಳ ಸಂಘ ಎಂದರೇನು ಗೊತ್ತೇ?, ಇದು ಹಲವು ದೇಶಗಳಲ್ಲಿ ಘೋಷಿತ ಉಗ್ರ ಸಂಘಟನೆ. ಇದಕ್ಕೆ ನೀವು ಬಿಜೆಪಿ ಹಾಗೂ ಆರೆಸ್ಸೆಸ್ ಸಂಘಟನೆಗಳನ್ನು ಹೋಲಿಸುತ್ತಿದ್ದೀರಿ" ಎಂದು ಹೇಳಿದ್ದಾರೆ.

ಬಿಜೆಪಿ- ಆರೆಸ್ಸೆಸ್ ಮೇಲೆ ವಾಗ್ದಾಳಿ ಮುಂದುವರಿಸಿದ ರಾಹುಲ್, "ಬಿಜೆಪಿ- ಆರೆಸ್ಸೆಸ್ ನಮ್ಮ ಜನರನ್ನೇ ಒಡೆಯುತ್ತಿದೆ. ನಮ್ಮದೇ ದೇಶದಲ್ಲಿ ದ್ವೇಷ ಹರಡುತ್ತಿದೆ. ನಮ್ಮ ಕೆಲಸ ಜನರನ್ನು ಒಗ್ಗೂಡಿಸುವುದು ಹಾಗೂ ದೇಶವನ್ನು ಮುನ್ನಡೆಸುವುದು. ಇದನ್ನು ಹೇಗೆ ಮಾಡಬೇಕು ಎಂದು ನಾವು ತೋರಿಸಿಕೊಟ್ಟಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನು ಸಂಬಿತ್ ಟೀಕಿಸಿದ್ದು, "ರಾಹುಲ್ ನೀವು ಅಪ್ರಬುದ್ಧರು. ಭಾರತವನ್ನು ಅರ್ಥ ಮಾಡಿಕೊಂಡಿಲ್ಲ. ನಿಮಗೆ ನಾಯಕತ್ವದ ಗುಣವೇ ಇಲ್ಲ. ನಿಮಗೆ ಇರುವುದು ಮೋದಿಯನ್ನು ದ್ವೇಷಿಸುವ ಭಾವನೆ ಮಾತ್ರ. ನೀವು ಮೋದಿ, ಆರೆಸ್ಸೆಸ್ ಮತ್ತು ಬಿಜೆಪಿಯನ್ನು ದ್ವೇಷಿಸುತ್ತಿದ್ದೀರಿ" ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News