ರಜೆಯಲ್ಲಿದ್ದರೂ ಕರ್ತವ್ಯನಿಷ್ಠೆ ಮೆರೆದ ಹೇಮಂತ್‌ರಾಜ್

Update: 2018-08-24 16:56 GMT

► ನಿವೃತ್ತ ಯೋಧರು, ವಿದ್ಯಾರ್ಥಿಗಳ ತಂಡ ರಚನೆ

ಜೈಪುರ, ಆ.24: ಕರ್ತವ್ಯನಿಷ್ಠೆಗೆ ಹೆಸರಾದವರು ಭಾರತೀಯ ಸೇನೆಯ ಯೋಧರು. ರಜೆಯ ಮೇಲಿದ್ದರೂ ಕೇರಳದ ನೆರೆಸಂತ್ರಸ್ತರ ನೆರವಿಗೆ ಧಾವಿಸಿದ ಭಾರತೀಯ ಸೇನೆ ಯ ಯೋಧ ಮೇಜರ್ ಹೇಮಂತ್‌ರಾಜ್ ಅವರು ಕೇರಳದಲ್ಲಿ ನಿರ್ವಹಿಸಿದ ಕಾರ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸೇನಾಪಡೆಯ 28 ಮದ್ರಾಸ್ ಸಪ್ತಶಕ್ತಿ ಕಮಾಂಡ್ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಕೇರಳ ಮೂಲದ ಹೇಮಂತ್‌ರಾಜ್‌ಗೆ ಆಗಸ್ಟ್ 18ರಿಂದ ರಜೆ ಮಂಜೂರಾಗಿತ್ತು. ತಕ್ಷಣ ಊರಿಗೆ ಹೊರಟಿದ್ದ ಅವರು ಕುಟುಂಬದ ಸದಸ್ಯರೊಂದಿಗೆ ಓಣಂ ಆಚರಿಸುವ ಯೋಜನೆಯಲ್ಲಿದ್ದರು.

ದಿಲ್ಲಿಯಿಂದ ವಿಮಾನದ ಮೂಲಕ ಕೊಚ್ಚಿಗೆ ಆಗಮಿಸಲು ಹೇಮಂತ್ ನಿರ್ಧರಿಸಿದ್ದರು. ದಿಲ್ಲಿ ತಲುಪಿದಾಗ ಅವರಿಗೆ ಕೇರಳದಲ್ಲಿ ಸಂಭವಿಸಿದ ವಿನಾಶಕಾರಿ ನೆರೆಹಾವಳಿಯ ಬಗ್ಗೆ ತಿಳಿದುಬಂದಿದೆ. ತಮ್ಮ ಊರು ನೆರೆನೀರಿನಲ್ಲಿ ಮುಳುಗಿದ್ದು ಕುಟುಂಬದ ಸದಸ್ಯರು ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿರುವ ಬಗ್ಗೆ ಮಾಹಿತಿ ದೊರೆಯಿತು, ಅಲ್ಲದೆ ಕೊಚ್ಚಿಗೆ ತೆರಳುವ ವಿಮಾನದ ಪ್ರಯಾಣ ರದ್ದಾಗಿರುವ ಮಾಹಿತಿ ತಿಳಿಯತು. ತಿರುವನಂತಪುರಕ್ಕೆ ಪ್ರಯಾಣಿಸಲಿದ್ದ ಇಂಡಿಗೊ ವಿಮಾನದ ಅಧಿಕಾರಿಗಳನ್ನು ತಕ್ಷಣ ಭೇಟಿಮಾಡಿದ ಹೇಮಂತ್, ಆ ವಿಮಾನದಲ್ಲಿ ಸಂಚರಿಸಲು ಅವಕಾಶ ನೀಡುವಂತೆ ಕೋರಿದ್ದಾರೆ. ಸೇನಾಸಮವಸ್ತ್ರದಲ್ಲಿದ್ದ ಹೇಮಂತ್‌ರಿಗೆ ಪ್ರಯಾಣಿಸಲು ಅವಕಾಶ ದೊರೆತಿದ್ದು ಅವರು ಆಗಸ್ಟ್ 19ರಂದು ಬೆಳಿಗ್ಗಿನ ಜಾವ ಸುಮಾರು 2 ಗಂಟೆಗೆ ತಿರುವನಂತಪುರ ತಲುಪಿದ್ದಾರೆ.

  ಅಲ್ಲಿ ವಾಯುಪಡೆಯ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು, ತನ್ನನ್ನು ಚೆಂಗನ್ನೂರು ಎಂಬಲ್ಲಿಗೆ ತಲುಪಿಸುವಂತೆ ಕೋರಿದ್ದಾರೆ. ಚೆಂಗನ್ನೂರು ಪ್ರದೇಶದ ರಸ್ತೆ ಸಂಪರ್ಕ ಕಡಿತವಾಗಿತ್ತು ಮತ್ತು ಮೊಬೈಲ್ ಸಂಪರ್ಕವೂ ಸಾಧ್ಯವಾಗುತ್ತಿರಲಿಲ್ಲ. ಇಡೀ ಊರು ನೀರಿನಲ್ಲಿ ಮುಳುಗಿತ್ತು. ವಿಮಾನದ ಮೂಲಕ ಚೆಂಗನ್ನೂರು ತಲುಪಿದ ಹೇಮಂತ್ ಅಲ್ಲಿ ಕೆಲವು ನಿವೃತ್ತ ಯೋಧರನ್ನು ಹಾಗೂ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅಲ್ಲೊಂದು ‘ಕಮಾಂಡ್ ಕೇಂದ್ರ’ ಸ್ಥಾಪಿಸಿದರು. ಚೆಂಗನ್ನೂರಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿತವಾಗಿದ್ದ 13 ಗರ್ವಾಲ್ ರೈಫಲ್ಸ್ ಪಡೆಯೊಂದಿಗೆ ಇವರ ತಂಡ ಸಂಪರ್ಕ ಸಾಧಿಸಲು ಯಶಸ್ವಿಯಾಯಿತು. ರೈಫಲ್ಸ್ ತಂಡದವರಿಗೆ ಕೇರಳದಲ್ಲಿ ಭಾಷೆಯ ತೊಡಕಾಗಿತ್ತು. ತಕ್ಷಣ ಪ್ರತಿಯೊಂದು ಘಟಕಕ್ಕೂ ಸ್ಥಳೀಯ ನಿವೃತ್ತ ಯೋಧರ ನೆರವು ಒದಗಿಸಲಾಯಿತು. ಸ್ಥಳೀಯ ಮೀನುಗಾರರೂ ನೆರವಿಗೆ ಬಂದರು.

ಗ್ರಾಮೀಣ ಪ್ರದೇಶದ ಒಳಭಾಗದಲ್ಲಿ ನೆರೆಯಿಂದ ಅತಂತ್ರಸ್ಥಿತಿಯಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಕರೆತರುವ ಕಾರ್ಯದಲ್ಲಿ ತೊಡಗಿಸಿಕೊಂಡಿತು ಹೇಮಂತ್‌ರಾಜ್ ಅವರ ತಂಡ.

ತನ್ನ ಕಮಾಂಡ್‌ನಡಿ 35 ನಿವೃತ್ತ ಯೋಧರು ಹಾಗೂ ಕೆಲವು ವಿದ್ಯಾರ್ಥಿಗಳಿದ್ದರು. ಸ್ಥಳೀಯ ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್‌ಗಳನ್ನು ತಂದಿದ್ದು ಇದರ ಮೂಲಕ ತಾತ್ಕಾಲಿಕ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದೆವು. ನೆರವಿಗೆ ಕರೆ ಮಾಡುವವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಪಡೆದು, ಅವರು ನೀಡಿದ ವಿವರ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಂಡು ನೆರವಿಗೆ ಧಾವಿಸುತ್ತಿದ್ದೆವು ಎಂದು ಮೇಜರ್ ವಿವರಿಸುತ್ತಾರೆ. ಇವರ ತಂಡದ ಕಾರ್ಯವನ್ನು ಕೆಲವರು ತಮ್ಮ ಫೋನಿನಲ್ಲಿ ದಾಖಲಿಸಿಕೊಂಡು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಇದನ್ನು ನೋಡಿದ ಮೇಜರ್ ಹೇಮಂತ್‌ರಾಜ್ ಪತ್ನಿ ತೀರ್ಥ ತಕ್ಷಣ ತನ್ನ ಪತಿಯನ್ನು ಫೋನಿನಲ್ಲಿ ಸಂಪರ್ಕಿಸಿ ತಾನು, ಮಗ ಆರ್ಯನ್ ಹಾಗೂ ಹೇಮಂತರ ತಾಯಿ ತಂದೆ ಕೊಟ್ಟಾಯಂನಲ್ಲಿ ಇರುವುದಾಗಿ ತಿಳಿಸಿದರು. ಚೆಂಗನ್ನೂರಿನಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿದ್ದು ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಆಗುತ್ತಿರಲಿಲ್ಲ. ಆಗ ರೇಡಿಯೋಜಾಕಿ ಅಂಜಲಿ ಉತುಪ್ ನೆನಪಾಯಿತು(ಖ್ಯಾತ ಗಾಯಕಿ ಉಷಾ ಉತುಪ್ ಅವರ ಪುತ್ರಿ). ತಕ್ಷಣ ಅವರನ್ನು ಸಂಪರ್ಕಿಸಿ ಪವರ್‌ಬ್ಯಾಂಕ್ ಮತ್ತು ಹೈಪವರ್ ಬೋಟ್‌ಗಳನ್ನು ಒದಗಿಸುವಂತೆ ತಮ್ಮ ಕಾರ್ಯಕ್ರಮದಲ್ಲಿ ಮನವಿ ಮಾಡಬೇಕೆಂದು ಹೇಮಂತ್ ಕೇಳಿಕೊಂಡರು.

ಈ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ಇವರಿಗೆ ಪವರ್‌ಬ್ಯಾಂಕ್ ಹಾಗೂ ದೋಣಿಗಳನ್ನು ಕಳಿಸಿಕೊಟ್ಟರು. ಇದರಿಂದ ಮೇಜರ್ ಹೇಮಂತ್‌ರಾಜ್ ಹಾಗೂ ತಂಡದವರಿಗೆ ಹಲವಾರು ಮಂದಿಯನ್ನು ರಕ್ಷಿಸಲು ಸಾಧ್ಯವಾಗಿದೆ. ನೆರೆಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ. ಆದರೂ ಈಗಲೂ ಸಾವಿರಾರು ಮಂದಿ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ. ರಸ್ತೆಗಳು ಸಂಪೂರ್ಣ ನಾಶವಾಗಿದ್ದು ಸಂಪರ್ಕ ವ್ಯವಸ್ಥೆಗೆ ತೊಡಕಾಗಿದೆ. ಭಾರೀ ನಷ್ಟವಾಗಿದೆ. ಆದರೂ ಈ ಪರಿಸ್ಥಿತಿಯಿಂದ ಪಾರಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಮಂತ್‌ರಾಜ್ ಹೇಳಿದ್ದಾರೆ.

ದಿನಕ್ಕೆ 10 ಟನ್ ಆಹಾರ ಪೂರೈಕೆ

ಮೂರು ದಿನ ನಡೆಸಿದ ರಕ್ಷಣಾ ಕಾರ್ಯಾಚರಣೆ ಸಂದರ್ಭ ಮೇಜರ್ ಹೇಮಂತ್‌ರಾಜ್ ಮತ್ತವರ ತಂಡ ಪ್ರತೀದಿನ 10 ಟನ್ ಆಹಾರವಸ್ತುಗಳನ್ನು ನೆರೆಸಂತ್ರಸ್ತರಿಗೆ ತಲುಪಿಸಿದೆ. ಪರಿಹಾರ ಸಾಮಾಗ್ರಿಗಳನ್ನು ಸರಿಯಾದ ಸ್ಥಳದಲ್ಲಿ ಇಳಿಸಲು ಸ್ಕಾಡ್ರನ್ ಲೀಡರ್ ಅನ್ಷಾ ನೆರವಾಗುತ್ತಿದ್ದರು ಎಂದು ಹೇಮಂತ್‌ರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News