ಭಾರತ ಮೂಲದ ವ್ಯಕ್ತಿಗೆ 8.4 ಕೋಟಿ ರೂ. ಪರಿಹಾರ ಘೋಷಿಸಿದ ಕೆನಡ ನ್ಯಾಯಾಲಯ
ಹೊಸದಿಲ್ಲಿ, ಆ.24: ಅಮೆರಿಕದ ಜಾಲತಾಣವೊಂದರಲ್ಲಿ ಪ್ರಕಟಗೊಂಡ ನಕಲಿ ಸುದ್ದಿಗಳಿಂದ ಅವಮಾನಕ್ಕೀಡಾಗಿದ್ದ ಭಾರತೀಯ ಮೂಲದ ವ್ಯಕ್ತಿಗೆ ಕೆನಡ ಸರ್ವೋಚ್ಚ ನ್ಯಾಯಾಲಯ 8.4 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಗುಜರಾತ್‌ನ ಭುಜ್ ನಿವಾಸಿಯಾಗಿರುವ ಅಲ್ತಾಫ್ ನಝೀರಲಿ ಕೆನಡದಲ್ಲಿ ಉದ್ಯಮವನ್ನು ಹೊಂದಿದ್ದಾರೆ. ಇವರ ವಿರುದ್ಧ ಅಮೆರಿಕದ ಆನ್‌ಲೈನ್ ಮಾರಾಟ ಮಳಿಗೆ ಓವರ್‌ಸ್ಟಾಕ್.ಕಾಮ್‌ನ ಸಿಇಒ ಪ್ಯಾಟ್ರಿಕ್ ಬೈರ್ನ್ ಅವಮಾನಕರ ಸುದ್ದಿಗಳನ್ನು ತಮ್ಮದೇ ಮಾಲಕತ್ವದ ಸುದ್ದಿ ಜಾಲತಾಣ ಡೀಪ್‌ಕ್ಯಾಪ್ಚರ್.ಕಾಮ್ ಮೂಲಕ ಹರಡಿದ್ದರು.
ಆರ್ಥಿಕ ಅಪರಾಧ ಸಂಚುಗಳ ಬಗ್ಗೆ ವರದಿ ಮಾಡುವ ಡೀಪ್‌ಕ್ಯಾಪ್ಚರ್.ಕಾಮ್‌ನಲ್ಲಿ ನಝೀರಲಿಯನ್ನು ಓರ್ವ ಮಾದಕದ್ರವ್ಯ ಕಳ್ಳಸಾಗಾಟಗಾರ, ಶಸ್ತ್ರಾಸ್ತ್ರ ಮಾರಾಟಗಾರ ಹಾಗೂ ಅಲ್-ಖೈದ ಸಂಘಟನೆಗೆ ಆರ್ಥಿಕ ನೆರವು ನೀಡುವಾತ ಎಂಬಂತೆ ಬಿಂಬಿಸಲಾಗಿತ್ತು. ಈ ವರದಿಗಳನ್ನು ಬೈರ್ನ್ ಅಪ್ಪಣೆಯಂತೆ ಮಾರ್ಕ್ ಮಿಶೆಲ್ ಎಂಬಾತ ಬರೆದಿದ್ದ. ಬೈರ್ನ್ ತಮ್ಮ ಜಾಲತಾಣದಲ್ಲಿ ಅಲ್ತಾಫ್ ನಝೀರಲಿ ಬಗ್ಗೆ ಮಾಡಿರುವ ವರದಿಗಳಿಗೆ ಯಾವುದೇ ಆಧಾರವಿಲ್ಲ. ಬೈರ್ನ್ ಮತ್ತು ಮಿಶೆಲ್ ಕೇವಲ ದ್ವೇಷದ ಹಿನ್ನೆಲೆಯಲ್ಲಿ ನಝೀರಲಿಗೆ ಅವಮಾನ ಮಾಡುವ ಉದ್ದೇಶದಿಂದ ಈ ಲೇಖನಗಳನ್ನು ಪ್ರಕಟಿಸಿದ್ದಾರೆ ಎಂದು 2016ರಲ್ಲಿ ವ್ಯಾಂಕೋವರ್‌ನಲ್ಲಿರುವ ಬ್ರಿಟಿಶ್ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು ಮತ್ತು ನಝೀರಲಿಗೆ 8.4 ಕೋಟಿ ರೂ. ಪರಿಹಾರ ನೀಡುವಂತೆ ಸೂಚಿಸಿತ್ತು.
ಬ್ರಿಟಿಶ್ ನ್ಯಾಯಾಲಯದ ಈ ಆದೇಶದ ವಿರುದ್ಧ ಬೈರ್ನ್ ಕೆನಡದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಇದೀಗ ಕೆನಡದ ಸರ್ವೋಚ್ಚ ನ್ಯಾಯಾಲಯ ಬ್ರಿಟಿಶ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು ನಝೀರ್ ಅಲಿಗೆ ಘೋಷಿಸಲಾಗಿದ್ದ ಪರಿಹಾರ ಮೊತ್ತವನ್ನು ನೀಡುವಂತೆ ಸೂಚಿಸಿದೆ. ನಝೀರಲಿ ವಿರುದ್ಧ 2011ರಲ್ಲಿ ಸುಳ್ಳು ಸುದ್ದಿಗಳ ಸರಣಿ ಲೇಖನಗಳನ್ನು ಡೀಪ್‌ಕ್ಯಾಪ್ಚರ್.ಕಾಮ್ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು. ಇದರ ವಿರುದ್ಧ ನಝೀರಲಿ ಬ್ರಿಟಿಶ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.