ಇದು ಜಗಳ, ವಿವಾದ ಸೃಷ್ಟಿಸುವ ಸಮಯವಲ್ಲ: ಪಿಣರಾಯಿ ವಿಜಯನ್

Update: 2018-08-25 11:48 GMT

ಏಕತೆ ಸದ್ಯಕ್ಕೆ ತಕ್ಷಣದ ಅಗತ್ಯ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಇದು ವಿವಾದ ಅಥವಾ ಜಗಳ ಸೃಷ್ಟಿಸುವ ಸಂದರ್ಭ ಅಲ್ಲ. ಸರಕಾರ, ಕೇಂದ್ರೀಯ ಸಂಸ್ಥೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಜನಸಾಮಾನ್ಯರ ಹಂತಕ್ಕೆ ಇಳಿದು ಸಂಕಷ್ಟ ನಿಭಾಯಿಸುವಲ್ಲಿ ಒಂದಾಗಿ ಕೈಜೋಡಿಸಿವೆ. ಈ ಮಟ್ಟದ ಸಹಕಾರಕ್ಕೆ ಎಷ್ಟರ ಮಟ್ಟಿನ ಬದ್ಧತೆ ಹಾಗೂ ಸಮರ್ಪಣಾ ಮನೋಭಾವ ಬೇಕಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದ ಉದ್ದೇಶಪೂರ್ವಕ ಹೇಳಿಕೆಗಳಿಗೆ ನಾನು ಸ್ಪಂದಿಸುವುದಿಲ್ಲ.

ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳವನ್ನು ಸರಿಹಾದಿಗೆ ತರುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್, ’ದ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ. ಜತೆಗೆ ಇದು ಯಾವುದೇ ವಿವಾದ ಸೃಷ್ಟಿಸುವ ಸಮಯವಲ್ಲ ಎಂದು ಸ್ಪಷ್ಟಡಿಸಿದ್ದಾರೆ.

ಪ್ರಶ್ನೆ: ಕೇರಳದ ಪುನರ್ವಸತಿ ಕಾರ್ಯಗಳ ಬಗ್ಗೆ ಮಾತನಾಡುವ ವೇಳೆ ನೀವು, ಇದು ಮರುನಿರ್ಮಾಣವಲ್ಲ; ಹೊಸ ಕೇರಳವನ್ನು ಕಟ್ಟುವುದು ಎಂದು ಹೇಳಿದ್ದೀರಿ. ಏನಿದರ ಅರ್ಥ?
ಉತ್ತರ: ರಕ್ಷಣಾ ಕಾರ್ಯ ಮುಗಿದಿದೆ. ಇದೀಗ ಪರಿಹಾರ ಹಾಗೂ ಪುನರ್ವಸತಿಯ ಸಮಯ. ಹಿಂದೆ ಇದ್ದ ಕಟ್ಟಡಗಳಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ಆದ್ದರಿಂದ ಕೇರಳದ ಪುನರ್ ನಿರ್ಮಾಣದ ಬದಲು ನಾವು ಹೊಸ ಕೇರಳ ಕಟ್ಟುತ್ತೇವೆ ಎಂದು ಹೇಳಿದ್ದೇನೆ. ಸಮಗ್ರ ಯೋಜನೆ ರೂಪಿಸುತ್ತೇವೆ; ಎಲ್ಲೆಡೆಯಿಂದ ಅನುಭವ ಹಾಗೂ ನೈಪುಣ್ಯ ಬಳಸಿಕೊಳ್ಳುತ್ತೇವೆ ಹಾಗೂ ಯೋಜನೆಯನ್ನು ಸೂಕ್ತವಾಗಿ ಕಾರ್ಯರೂಪಕ್ಕೆ ತರುತ್ತೇವೆ. ನಾನು ಈ ಮೊದಲೇ ಹೇಳಿದಂತೆ, ಕೇರಳ ಈಗಾಗಲೇ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಇದೀಗ ನಾವು ವಿಶ್ವಕ್ಕೆ ಇನ್ನೊಂದು ಮಾದರಿಯನ್ನು ನೀಡಲಿದ್ದೇವೆ.

ಪ್ರಶ್ನೆ: ಪರಿಸರ ಅಪಾಯವನ್ನು ತಪ್ಪಿಸುವ ಬಗ್ಗೆ ಗಮನ ಹರಿಸುತ್ತೀರಾ?
♦ ಎಲ್ಲ ವಲಯಗಳ ಕಳಕಳಿಯನ್ನೂ ಪರಿಗಣಿಸಲಾಗುವುದು. ಇದಲ್ಲದೆಯೂ ಎಡಪಂಥೀಯ ಚಿಂತನೆಯಲ್ಲಿ ಪರಿಸರ ಕಳಕಳಿಯಿಂದ ಕೂಡಿದ ಅಭಿವೃದ್ಧಿಗೆ ಆದ್ಯತೆ. ಸಮತೋಲಿತ ಅಭಿವೃದ್ಧಿಯ ಬಗ್ಗೆಯೇ ನಾವು ಯಾವತ್ತೂ ಒತ್ತು ನೀಡುತ್ತಾ ಬಂದಿದ್ದೇವೆ.

ಪ್ರಶ್ನೆ: ಪುನರ್ನಿರ್ಮಾಣ ಪ್ರಕ್ರಿಯೆಯು ನೀವು ಕೈಗೊಂಡಿದ್ದ ಅಭಿವೃದ್ಧಿ ಚಟುವಟಿಕೆಗಳ ಗಮನವನ್ನು ವಿಮುಖಗೊಳಿಸಬಹುದು. ಇದನ್ನು ಹೇಗೆ ನಿಭಾಯಿಸುತ್ತೀರಿ?
♦ ಈಗ ಅನುಷ್ಠಾನ ಹಂತದಲ್ಲಿರುವ ಅಭಿವೃದ್ಧಿ ಚಟುವಟಿಕೆಗಳನ್ನು, ಮುಂದೆ ಆಗಬೇಕಾಗಿರುವ ಕಾರ್ಯಗಳಿಗೆ ವಿರುದ್ಧವಾದದ್ದು ಎಂದು ಪರಿಗಣಿಸುವ ಅಗತ್ಯವಿದೆ. ನಿಮಗೆ ತಿಳಿದಿರುವಂತೆ ಕೇರಳ ಪ್ರಮುಖ ವಲಯವಾದ ಮೂಲಸೌಕರ್ಯದಲ್ಲಿ ಹಿಂದಿದೆ. ಇವುಗಳಲ್ಲಿ ಒಂದು ಅಂಶವೆಂದರೆ ಸಮರ್ಪಕ ರಸ್ತೆ ಸಂಪರ್ಕ ಇಲ್ಲದಿರುವುದು. ಆದ್ದರಿಂದ ನಮ್ಮ ಸರಕಾರ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಇಂಥ ಯೋಜನೆಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಅತಿ ಅಗತ್ಯ. ಇಂಥ ಚಟುವಟಿಕೆಗಳನ್ನು ಪ್ರಸ್ತಾವಿತ ಕ್ರಿಯಾಯೋಜನೆಗೆ ವಿರುದ್ಧವಾದದ್ದು ಎಂದು ಪರಿಗಣಿಸಲಾಗದು.

ಪ್ರಶ್ನೆ: ವಿಕೋಪ ಸಂದರ್ಭಗಳಲ್ಲಿ ನಾವು ಸಾಮಾನ್ಯವಾಗಿ ಕಾಣುವ ಅಂಶವೆಂದರೆ, ಆರಂಭಿಕ ಸುಖಭಾವನೆಯು ನಂತರದ ಸಂಕೀರ್ಣತೆಗಳು, ವಿವಾದಗಳು ಮತ್ತು ಕೆಂಪುಪಟ್ಟಿಗೆ ಕಾರಣವಾಗುತ್ತವೆ. ನಿಮ್ಮ ಸರಕಾರ ಇದನ್ನು ಹೇಗೆ ನಿರ್ವಹಿಸುತ್ತದೆ?
♦ ಏಕತೆ ಸದ್ಯಕ್ಕೆ ತಕ್ಷಣದ ಅಗತ್ಯತೆ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಇದು ವಿವಾದ ಅಥವಾ ಜಗಳ ಸೃಷ್ಟಿಸುವ ಸಂದರ್ಭ ಅಲ್ಲ. ಸರಕಾರ, ಕೇಂದ್ರೀಯ ಸಂಸ್ಥೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಜನಸಾಮಾನ್ಯರ ಹಂತಕ್ಕೆ ಇಳಿದು ಸಂಕಷ್ಟ ನಿಭಾಯಿಸುವಲ್ಲಿ ಒಂದಾಗಿ ಕೈಜೋಡಿಸಿವೆ. ಈ ಮಟ್ಟದ ಸಹಕಾರಕ್ಕೆ ಎಷ್ಟರ ಮಟ್ಟಿನ ಬದ್ಧತೆ ಹಾಗೂ ಸಮರ್ಪಣಾ ಮನೋಭಾವ ಬೇಕಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದ ಉದ್ದೇಶಪೂರ್ವಕ ಹೇಳಿಕೆಗಳಿಗೆ ನಾನು ಸ್ಪಂದಿಸುವುದಿಲ್ಲ.

ಪ್ರಶ್ನೆ: ಇದುವರೆಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಜನರಿಂದ ಅದ್ಭುತ ಸ್ಪಂದನೆ ದೊರಕಿದೆ. ಆದರೆ ಪರಿಹಾರ ಕಾರ್ಯವನ್ನು ಆಡಳಿತ ಪಕ್ಷದ ವ್ಯವಹಾರವಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ ನೀವು ಹಾಗೆ ಮಾಡದಂತೆ ಈಗಾಗಲೇ ಸಲಹೆ ಮಾಡಿದ್ದೀರಿ. ಇದನ್ನು ತಪ್ಪಿಸಲು ನಿಮ್ಮ ಕಾರ್ಯಯೋಜನೆ ಏನು?
♦ ಸಣ್ಣ ಪುಟ್ಟ ಸಮಸ್ಯೆಗಳು ಮತ್ತು ವಿಷಯಗಳು ಸಹಜ. ಆದರೆ ವ್ಯವಸ್ಥೆ ಸಮರ್ಪಕವಾಗಿದೆ ಹಾಗೂ ಇಂಥ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವಷ್ಟು ಚೆನ್ನಾಗಿದೆ. ಆದರೆ ಇದುವರೆಗೆ ಪರಿಹಾರ ಅಥವಾ ರಕ್ಷಣಾ ಕಾರ್ಯದಲ್ಲಿ ಅಂಥ ಯಾವುದೇ ದೊಡ್ಡ ಕಿರಿ ಕಿರಿಯಾದದ್ದು ನನ್ನ ಗಮನಕ್ಕೆ ಬಂದಿಲ್ಲ.

ಪ್ರಶ್ನೆ: ಈ ವಿಕೋಪದಿಂದ ಕೇರಳ ಹಾಗೂ ನಿಮ್ಮ ಸರಕಾರ ಕಲಿತ ದೊಡ್ಡ ಪಾಠವೇನು?
♦ ಯಾವುದೇ ಘಟನೆಗಳು ಕೂಡಾ ಸರಕಾರ ಸೇರಿದಂತೆ ಯಾರಿಗೂ ಪಾಠವಾಗಬಹುದು ಹಾಗೂ ಎಲ್ಲರಿಗೂ ಪಾಠವಾಗಬಹುದು. ನಿಮಗೆಲ್ಲರಿಗೂ ತಿಳಿದಂತೆ ಇದು ಹಿಂದೆಂದೂ ದೇಶದಲ್ಲಿ ಕಂಡರಿಯದ ದುರಂತ. ಈ ಪ್ರಮಾಣದ ದುರಂತವನ್ನು ಕೇರಳ ಎಂದೂ ಎದುರಿಸಿರಲಿಲ್ಲ. ಆದ್ದರಿಂದಲೇ ಆರಂಭದಲ್ಲಿ ಜನ, ವಿಕೋಪ ಈ ಮಟ್ಟಕ್ಕೆ ತಲುಬಹುದು ಎನ್ನುವುದನ್ನು ನಂಬಲಿಲ್ಲ. ಈಗಲಾದರೂ ನಾವು ಹೆಚ್ಚು ಮುಂಜಾಗ್ರತೆ ವಹಿಸಬೇಕು ಮತ್ತು ಇಂಥ ಘಟನೆಗಳನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ವಿಕೋಪಗಳು ಭವಿಷ್ಯದಲ್ಲೂ ನಮ್ಮನ್ನು ಕಾಡಬಹುದು. ಆದರೆ ಹಾನಿಯನ್ನು ನಾವು ಹೇಗೆ ತಡೆಯುತ್ತೇವೆ ಎನ್ನುವುದೇ ಪ್ರಮುಖವಾಗಲಿದೆ.

ಪ್ರಶ್ನೆ: ಬಹುಶಃ ಯುಎಇ ಸರಕಾರ ನೀಡಲು ಮುಂದಾಗಿರುವ ಹಣಕಾಸು ನೆರವಿನ ಬಗ್ಗೆ ಗೊಂದಲ ಇದ್ದಂತಿದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆಯೇ? (ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ನಿಲುವು ಸ್ಪಷ್ಟಪಡಿಸುವ ಮುನ್ನ ಮಾಡಿದ ಸಂದರ್ಶನ ಇದು).
♦ ನನಗೆ ತಿಳಿದಂತೆ, ಯುಎಇ ತಾನಾಗಿಯೇ ಈ ನೆರವಿನ ಪ್ರಸ್ತಾಪ ಮಾಡಿದೆ. ಯುಎಇಯನ್ನು ಅವರ ಆಡಳಿತಗಾರರೇ ಒತ್ತಿ ಹೇಳಿದಂತೆ ಇತರ ದೇಶಗಳಂತೆ ಪರಿಗಣಿಸುವಂತಿಲ್ಲ. ಭಾರತೀಯರು ಅದರಲ್ಲೂ ಮುಖ್ಯವಾಗಿ ಕೇರಳಿಗರು, ಅವರ ದೇಶ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಹಾಗೆಂದ ಮಾತ್ರಕ್ಕೆ ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದು ನನ್ನ ಇಚ್ಛೆಯಲ್ಲ. ಸೂಕ್ಷ್ಮ ವ್ಯತ್ಯಾಸಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕಾಗಿದೆ.

ಪ್ರಶ್ನೆ: ಈ ವಿಚಾರವನ್ನು ಪ್ರಧಾನಿ ಬಳಿಗೆ ಒಯ್ಯುತ್ತೀರಾ?
♦ ನೋಡೋಣ.

ಪ್ರಶ್ನೆ: 2ನೇ ಹಂತದ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ಕೇರಳ ಜನತೆಗೆ ನೀವು ನೀಡುವ ಸಂದೇಶ ಏನು?
♦ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಕೇರಳ ಜನತೆ ಅದ್ಭುತ ಒಗ್ಗಟ್ಟು, ಬದ್ಧತೆ, ಸಮರ್ಪಣಾ ಮನೋಭಾವ ಮತ್ತು ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಕೇರಳ, ವಿಶ್ವಕೆ ಹಲವು ಮಾದರಿಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಕೇರಳ ಒಳ್ಳೆಯ ಉದಾಹರಣೆಯಾಗಿದೆ. ಪುನರ್ವಸತಿ ವಿಚಾರದಲ್ಲೂ ಇಂಥದ್ದೇ ವಿಶಿಷ್ಟ ಮಾರ್ಗವನ್ನು ಕೇರಳಿಗರು ತೋರಿಸಿಕೊಡುವ ಖಾತರಿ ನನಗಿದೆ.

ಪ್ರಶ್ನೆ: ಹೊಸ ಕೇರಳವನ್ನು ಕಟ್ಟುವಲ್ಲಿ ಅನಿವಾಸಿ ಕೇರಳೀಯರ ಪಾತ್ರದ ಬಗ್ಗೆ ನಿಮ್ಮ ನಿರೀಕ್ಷೆ ಏನು?
♦ ಕೇರಳೀಯರು, ಇತರರು ಮಾತ್ರವಲ್ಲದೇ ವಿದೇಶೀಯರು ಕೂಡಾ ಕೇರಳಕ್ಕೆ ನೆರವಿನ ಹಸ್ತ ಚಾಚುತ್ತಿದ್ದಾರೆ. ದೇಶದ ದೂರದ ಹಳ್ಳಿಗಳಿಂದಲೂ ಸ್ಪಂದನೆ ಅಭೂತಪೂರ್ವ. ಸಾಕಷ್ಟು ನೆರವು ಈಗಾಗಲೇ ಹರಿದುಬಂದಿದೆ. ಈ ನಿಷ್ಠೆಯ ಬಗ್ಗೆ ನನಗೇ ಅಚ್ಚರಿಯಾಗಿದೆ. ರಾಜ್ಯದ ಬಗ್ಗೆ ಉತ್ತಮ ಭಾವನೆ ಹೊಂದಿರುವವರೂ ಸೇರಿದಂತೆ ಎಲ್ಲರಿಗೆ ನಾನು ಈಗಾಗಲೇ ಕೃತಜ್ಞತೆಯನ್ನೂ ಸಲ್ಲಿಸಿದ್ದೇನೆ.

ಪ್ರಶ್ನೆ: ಈ ವಿಕೋಪವನ್ನು ನೀವು ಹೇಗೆ ಅಳೆಯುತ್ತೀರಿ? ಇದು ಮನುಷ್ಯ ನಿರ್ಮಿತವೇ? ಇದನ್ನು ಎಷ್ಟರ ಮಟ್ಟಿಗೆ ತಪ್ಪಿಸಬಹುದಿತ್ತು?
♦ ನಾವು ಗರಿಷ್ಠ ಸಾಧ್ಯ ಪ್ರಯತ್ನ ಮಾಡಿದ್ದೇವೆ. ವಿಕೋಪ ಎಂದರೆ ವಿಕೋಪ. ನಾವು ಅದನ್ನು ಎದುರಿಸಲೇಬೇಕು. ಯಾವುದೇ ವಿವಾದ ಸೃಷ್ಟಿಸಲು ಅಥವಾ ವಿವಾದದ ಭಾಗವಾಗುವ ಇರಾದೆ ನನಗಿಲ್ಲ.

ಪ್ರಶ್ನೆ: ಅಣೆಕಟ್ಟುಗಳ ನಿರ್ವಹಣೆಯ ಲೋಪದ ಬಗ್ಗೆ ವಿರೋಧ ಪಕ್ಷಗಳು ಮಾತನಾಡಲು ಆರಂಭಿಸಿವೆ. ನೀರಿನ ಮಟ್ಟವನ್ನು ನಿರ್ವಹಿಸುವಲ್ಲಿ ವೈಫಲ್ಯ ಕಂಡುಬಂದಿದೆಯೇ?
♦ ಅಣೆಕಟ್ಟು ನಿರ್ವಹಣೆ ಮಾಡುವ ಹೊಣೆ ಹೊತ್ತಿದ್ದ ವ್ಯಕ್ತಿಗಳು ಈಗಾಗಲೇ ಈ ಸಂಬಂಧ ಸೂಕ್ತ ಹೇಳಿಕೆ ನೀಡಿದ್ದಾರೆ. ಅವರು ನನಗೂ ವಿವರಗಳನ್ನು ಒದಗಿಸಿದ್ದಾರೆ. ಎಲ್ಲ ಕಡ್ಡಾಯ ವಿಧಿವಿಧಾನಗಳನ್ನು ಅನುಸರಿಸಿರುವುದು ಮತ್ತು ಮನುಷ್ಯ ಕೈಗೊಳ್ಳಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಂಡಿರುವುದು ಸ್ಪಷ್ಟ.

ಕೃಪೆ: indianexpress.com 

Writer - ಸಂದರ್ಶನ: ಲಿಝ್ ಮ್ಯಾಥ್ಯೂ

contributor

Editor - ಸಂದರ್ಶನ: ಲಿಝ್ ಮ್ಯಾಥ್ಯೂ

contributor

Similar News

ಜಗದಗಲ
ಜಗ ದಗಲ