ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾದ ಕಾಂಗ್ರೆಸ್: 3 ಸಮಿತಿಗಳನ್ನು ರಚಿಸಿದ ರಾಹುಲ್

Update: 2018-08-25 18:01 GMT

ಹೊಸದಿಲ್ಲಿ,ಆ.25: 2019ರ ಲೋಕಸಭಾ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಸಮನ್ವಯತೆ,ಪ್ರಣಾಳಿಕೆ ಮತ್ತು ಪ್ರಚಾರದ ಉಸ್ತುವಾರಿಯನ್ನು ನೋಡಿಕೊಳ್ಳಲು ಮೂರು ಪ್ರಮುಖ ಸಮಿತಿಗಳನ್ನು ಶನಿವಾರ ರಚಿಸಿದೆ. ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರು ರೂಪಿಸಿದ ಸಮಿತಿಗಳಲ್ಲಿ ಹಿರಿಯ ನಾಯಕರು ತಮ್ಮ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.

ಎ.ಕೆ.ಆ್ಯಂಟನಿ,ಗುಲಾಂ ನಬಿ ಆಝಾದ್,ಪಿ.ಚಿದಂಬರಂ,ಅಶೋಕ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ,ಅಹ್ಮದ್ ಪಟೇಲ್,ಜೈರಾಮ್ ರಮೇಶ್,ರಣದೀಪ್ ಸುರ್ಜೆವಾಲಾ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಕೋರ್ ಗ್ರೂಪ್ ಸಮಿತಿಯ ಸದಸ್ಯರಾಗಿದ್ದಾರೆ. ಈ ಎಲ್ಲರೂ ಸೋನಿಯಾ ಗಾಂಧಿಯವರ ಕೈಕೆಳಗೆ ಕೆಲಸ ಮಾಡಿದವರೇ ಆಗಿದ್ದಾರೆ.

ಪ್ರಚಾರ ಮತ್ತು ಪ್ರಣಾಳಿಕೆ ಸಮಿತಿಗಳಲ್ಲಿ ಹಳಬರ ಜೊತೆಗೆ ಕೆಲವು ಹೊಸಮುಖಗಳೂ ಸೇರಿವೆ.

ಪಿ.ಚಿದಂಬರಂ,ಭೂಪಿಂದರ್ ಸಿಂಗ್ ಹೂಡಾ,ಜೈರಾಮ್ ರಮೇಶ್,ಸಲ್ಮಾನ್ ಖುರ್ಷಿದ್,ಶಶಿ ತರೂರ್, ಕುಮಾರಿ ಶೆಲ್ಜಾ,ಮುಕುಲ್ ಸಂಗ್ಮಾ,ರಣದೀಪ್ ಸುರ್ಜೆವಾಲಾ,ಮನಪ್ರೀತ್ ಬಾದಲ್,ಸುಷ್ಮಿತಾ ದೇವಿ,ರಾಜೀವ್ ಗೌಡ,ತಾಮ್ರಧ್ವಜ ಸಾಹು,ಬಿಂದು ಕೃಷ್ಣನ್,ರಘುವೀರ ಮೀನಾ,ಬಾಲಚಂದ್ರ ಮುಂಗೇಕರ, ಮೀನಾಕ್ಷಿ ನಟರಾಜನ್,ರಜನಿ ಪಾಟೀಲ್,ಸ್ಯಾಮ್ ಪಿತ್ರೋಡಾ,ಸಚಿನ್ ರಾವ್ ಮತ್ತು ಲಲಿತೇಶ ತ್ರಿಪಾಠಿ ಅವರು ಪ್ರಣಾಳಿಕೆ ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಚಾರ ಸಮಿತಿಯು ರಣದೀಪ್ ಸುರ್ಜೆವಾಲಾ,ಆನಂದ ಶರ್ಮಾ,ಮನೀಷ ತಿವಾರಿ,ರಾಜೀವ್ ಶುಕ್ಲಾ,ಭಕ್ತ ಚರಣ ದಾಸ್,ಪ್ರವೀಣ ಚಕ್ರವರ್ತಿ,ಮಿಲಿಂದ್ ದೇವರಾ,ಕುಮಾರ್ ಕೇತ್ಕರ್,ಪವನ್ ಖೇರಾ,ವಿ.ಡಿ.ಸತೀಶನ್,ಜೈವೀರ್ ಶೇರ್ಗಿಲ್,ದಿವ್ಯಸ್ಪಂದನಾ(ರಮ್ಯಾ) ಮತ್ತು ಪ್ರಮೋದ್ ತಿವಾರಿ ಅವರನ್ನೊಳಗೊಂಡಿದೆ.

ಸಮಿತಿಗಳನ್ನು ಪ್ರಕಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಅಶೋಕ ಗೆಹ್ಲೋಟ್ ಅವರು, ಈ ಸಮಿತಿಗಳ ರಚನೆಯೊಂದಿಗೆ ಪಕ್ಷವು ಚುನಾವಣೆಗಳಿಗೆ ಸಜ್ಜಾಗಿದೆ ಮತ್ತು ಪ್ರಣಾಳಿಕೆಯನ್ನು ರೂಪಿಸುವ ಕಾರ್ಯವನ್ನು ಆರಂಭಿಸಲಿದೆ, ಜೊತೆಗೆ ಪ್ರಚಾರ ಮತ್ತು ಸಮನ್ವಯಕ್ಕಾಗಿ ಕಾರ್ಯತಂತ್ರವನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

ಈ ಸಮಿತಿಗಳಿಗೆ ಸಂಚಾಲಕರ ಹೆಸರುಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿದವು.

ಹೊಸದಾಗಿ ರಚಿಸಲಾಗಿರುವ ಈ ಮೂರು ಸಮಿತಿಗಳಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಜೀವ್ ಗೌಡ ಮತ್ತು ರಮ್ಯಾ (ದಿವ್ಯ ಸ್ಪಂದನ) ವಿವಿಧ ಸಮಿತಿಗಳಲ್ಲಿದ್ದಾರೆ.

ಕೋರ್ ಕಮಿಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಣಾಳಿಕೆ ಸಮಿತಿಯಲ್ಲಿ ರಾಜ್ಯಸಭಾ ಸಂಸದ ರಾಜೀವ್ ಗೌಡ ಮತ್ತು ಪ್ರಚಾರ ಸಮಿತಿಯಲ್ಲಿ ಎಐಸಿಸಿ ಮಾಧ್ಯಮ ವಿಭಾಗದ ದಿವ್ಯ ಸ್ಪಂದನ ಇದ್ದಾರೆ. ವಿಶೇಷವೆಂದರೆ ಹಿರಿಯ ನಾಯಕರಾದ ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿಯವರನ್ನು ಸಮಿತಿಯಿಂದ ಹೊರಗಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News