ರಫೇಲ್ ಒಪ್ಪಂದ: ಚಿದಂಬರಂರಿಂದ ಬಿಜೆಪಿಗೆ 4 ಪ್ರಶ್ನೆ

Update: 2018-08-25 17:31 GMT

ಕೋಲ್ಕತ್ತಾ, ಆ. 25: ವಿವಾದಾತ್ಮಕ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಮುಂದೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಶನಿವಾರ ನಾಲ್ಕು ಪ್ರಶೆಗಳನ್ನು ಇರಿಸಿದ್ದಾರೆ.

ರಫೇಲ್ ಒಪ್ಪಂದ ಕುರಿತು ಕೇಂದ್ರದಿಂದ ಉತ್ತರ ಕೋರಿ ದೇಶಾದ್ಯಂತ 100 ಪತ್ರಿಕಾಗೋಷ್ಠಿ ನಡೆಸುವ ಒಂದು ಭಾಗವಾಗಿ ರಾಷ್ಟ್ರ ವ್ಯಾಪಿ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ರವಿವಾರ ಆರಂಭಿಸಿದೆ. ಇಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಚಿದಂಬರಂ ಕೇಂದ್ರ ಸರಕಾರದ ಮುಂದೆ ನಾಲ್ಕು ಪ್ರಶ್ನೆಗಳನ್ನು ಇರಿಸಿದ್ದಾರೆ.

ಪ್ರಶ್ನೆ 1: ಯುಪಿಎ ಸರಕಾರದ ಅವಧಿಯಲ್ಲಿ ವಿಮಾನದ ಬೆಲೆ 526 ಕೋ. ರೂ. ಹಾಗೂ ಎನ್‌ಡಿಎ ಅಧಿಕಾರದ ಅವಧಿಯಲ್ಲಿ ವಿಮಾನದ ಬೆಲೆ 1,670 ಕೋ. ರೂ. ಇದು ಸರಿಯೇ ?, ಇದು ಸರಿಯಾಗಿದ್ದರೆ, ಈಗ ವಿಮಾನದ ಬೆಲೆ ಮೂರು ಪಟ್ಟು ಹೆಚ್ಚಾಗಿರುವುದು ಯಾಕೆ ಎಂಬುದನ್ನು ದಯವಿಟ್ಟು ಯಾರಾದರೂ ವಿವರಿಸುವಿರಾ ?,

ಪ್ರಶ್ನೆ 2: ರಕ್ಷಣಾ ಸಾಮಗ್ರಿ ಹೊಂದುವ ಪ್ರಕ್ರಿಯೆಯನ್ನು ಯಾಕೆ ನಿರ್ಲಕ್ಷಿಸಲಾಯಿತು ?, ಗುತ್ತಿಗೆ ಅನುಸಂಧಾನ ಸಮಿತಿಯನ್ನು ಕತ್ತಲೆಯಲ್ಲಿ ಇರಿಸಲು ಕಾರಣವೇನು ? ಸಂಪುಟ ಸಮಿತಿ ಹಾಗೂ ಭದ್ರತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರಲು ಕಾರಣವೇನು ?,

ಪ್ರಶ್ನೆ 3: ಎಚ್‌ಎಎಲ್ ಹಾಗೂ ಡಸ್ಸಾಲ್ಟ್ ನಡುವೆ ಕಾರ್ಯ ಹಂಚಿಕೆ ಒಪ್ಪಂದ ಇದ್ದರೆ ತೊಂದರೆ ಇಲ್ಲ. ಆದರೆ, ಆಮದು ಹಾಗೂ ರಫ್ತು ಅನ್ನು ಎಚ್‌ಎಎಲ್‌ಗೆ ನೀಡಬೇಕು ಅಥವಾ ಎಚ್‌ಎಎಲ್ ಅನ್ನು ಪರಿಗಣಿಸಬೇಕು ಎಂದು ಡಸ್ಸಾಲ್ಟ್‌ಗೆ ಯಾಕೆ ತಿಳಿಸಿಲ್ಲ. ತನ್ನ ಆಮದು-ರಫ್ತು ಭಾಗೀದಾರರನ್ನು ಆಯ್ಕೆ ಮಾಡಿಕೊಳ್ಳಲು ಡಸ್ಸಾಲ್ಟ್‌ಗೆ ಸ್ವಾತಂತ್ರ ನೀಡಿರುವುದು ಯಾಕೆ ?, ಎಚ್‌ಎಎಲ್ ಅನ್ನು ಪೂರ್ಣ ಒಪ್ಪಂದದಿಂದ ಹೊರಗಿಡಲಾಗಿದೆ. ಎಚ್‌ಎಎಲ್ ಏನು ತಪ್ಪು ಮಾಡಿದೆ ?,

ಪ್ರಶ್ನೆ 4: ತಂತ್ರಜ್ಞಾನ ವರ್ಗಾವಣೆ ಏನಾಯ್ತು ?, ಭಾರತ ಏನಾದರೂ ಪಡೆದುಕೊಂಡಿತೆ ?, ಎಚ್‌ಎಎಲ್ ಏನಾದರೂ ಪಡೆದುಕೊಂಡಿದೆ?. ಡಸ್ಸಾಲ್ಟ್ ತಂತ್ರಜ್ಞಾನವನ್ನು ಭಾರತಕ್ಕೆ ಆಮದು ಮಾಡುವ ಮೂಲಕ ನಮ್ಮ ವೈಮಾನಿಕ ಕೈಗಾರಿಕೆ ಏನಾದರೂ ಪಡೆದುಕೊಂಡಿತೇ ?, ನೀವು 36 ವಿಮಾನಗಳನ್ನು ಆಮದು ಮಾಡಿಕೊಂಡಿರಿ. ಭಾರತದ ಭವಿಷ್ಯದ ವಿಮಾನಕ್ಕಾಗಿ ತಂತ್ರಜ್ಞಾನವನ್ನು ವರ್ಗಾಯಿಸಬೇಕು ಎಂದು ಡಸ್ಸಾಲ್ಟ್‌ಗೆ ನೀವು ಸೂಚಿಸಿಲ್ಲ ಯಾಕೆ ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News