ದೇಶವು ಕೇರಳದ ಬೆಂಬಲಕ್ಕಿದೆ : ಪ್ರಧಾನಿ ಮೋದಿ

Update: 2018-08-25 17:31 GMT

ಹೊಸದಿಲ್ಲಿ, ಆ.25: ಕೇರಳಲ್ಲಿ ಸಂಭವಿಸಿದ ವಿನಾಶಕಾರೀ ಪ್ರವಾಹದಿಂದ ಆಗಿರುವ ಅನಾಹುತದಿಂದ ಚೇತರಿಸಿಕೊಳ್ಳಲು ರಾಜ್ಯದ ಜನತೆಗೆ ಓಣಂ ಹಬ್ಬ ಹೊಸ ಶಕ್ತಿ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಡೀ ದೇಶವೇ ಕೇರಳದ ಜನತೆಯ ಜೊತೆ ಹೆಗಲಿಗೆ ಹೆಗಲು ನೀಡಿ, ರಾಜ್ಯದ ಜನತೆಗೆ ನೆಮ್ಮದಿ ದೊರೆತು ಅಭ್ಯುದಯವಾಗಲಿ ಎಂದು ಹಾರೈಸುತ್ತದೆ ಎಂದು ಮೋದಿ ಹೇಳಿದ್ದಾರೆ. ಕೇರಳದಲ್ಲಿ ವಾರ್ಷಿಕ ಸುಗ್ಗಿ ಹಬ್ಬವಾಗಿರುವ ಓಣಂ ಅನ್ನು ಈ ಬಾರಿ ಹೆಚ್ಚಿನ ಸಂಭ್ರಮಾಚರಣೆಗಳಿಲ್ಲದೆ ರಾಜ್ಯದ ಜನತೆ ಸ್ವಾಗತಿಸಿದ್ದಾರೆ. ರಾಜ್ಯದ 8.69 ಲಕ್ಷ ಜನತೆ ಇನ್ನೂ 2,287 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರೆ, ಮನೆಗೆ ಮರಳಿದವರೂ ತಮ್ಮ ಆಸ್ತಿಪಾಸ್ತಿಗೆ ಆಗಿರುವ ನಷ್ಟದಿಂದ ಆತಂಕಿತರಾಗಿದ್ದಾರೆ.

ರಾಜ್ಯ ಸರಕಾರ ಶುಕ್ರವಾರ ಪ್ರಕಟಣೆಯೊಂದನ್ನು ಹೊರಡಿಸಿದ್ದು , ಮೊಬೈಲ್ ಆ್ಯಪ್ ಬಳಸಿ, ಸ್ವಯಂಸೇವಾ ಸಂಘಟನೆಗಳ ನೆರವಿನಿಂದ ನೆರೆಬಾಧಿತ ಪ್ರದೇಶಗಳ ದಾಖಲೀಕರಣ ನಡೆಸಿದ ಬಳಿಕ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ತಿಳಿಸಿದೆ. 3.91 ಲಕ್ಷ ಸಂತ್ರಸ್ತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಯಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವರ್ಗಾಯಿಸಲಾಗುವುದು. ಇದಕ್ಕಾಗಿ 242.73 ಕೋಟಿ ರೂ. ತೆಗೆದಿರಿಸಲಾಗಿದೆ. ನೆರೆ ಸಂತ್ರಸ್ತರ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳು ಕಳೆದುಹೋಗಿದ್ದಲ್ಲಿ ಅವನ್ನು ರಾಜ್ಯದ ವಿವಿಧ ಇಲಾಖೆಗಳ ಮಾಹಿತಿ ಮೂಲದಿಂದ ಸಂಗ್ರಹಿಸಿ ಕೊಡಲಾಗುವುದು. ಇದಕ್ಕಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಇತರ ಇಲಾಖೆಗಳು ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸುತ್ತಿದೆ. ಅಲ್ಲದೆ ದಾಖಲೆಗಳನ್ನು ಮರಳಿಸಲು ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದ ಅದಾಲತ್‌ಗಳನ್ನು ನಡೆಸಲಾಗುವುದು.

ಪ್ರವಾಹ ಪೀಡಿತ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು, ಈ ಪ್ರದೇಶಗಳಲ್ಲಿರುವ ಒಟ್ಟು ಕಟ್ಟಡಗಳಲ್ಲಿ ಶೇ.31ರಷ್ಟನ್ನು, ಅಂದರೆ 1.31 ಲಕ್ಷ ಮನೆಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಈ ಮಧ್ಯೆ, ಕೇರಳದಲ್ಲಿ ಪ್ರವಾಹದ ಕಾರಣದಿಂದ ಮೃತಪಟ್ಟವರ ಸಂಖ್ಯೆ 265 ಎಂದು ಸರಕಾರದ ಹೇಳಿಕೆ ತಿಳಿಸಿದ್ದು 36 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಇಡುಕ್ಕಿಯಲ್ಲಿ 51 ಮಂದಿ ಸಾವನ್ನಪ್ಪಿದ್ದು 10 ಮಂದಿ ನಾಪತ್ತೆಯಾಗಿದ್ದಾರೆ. ತ್ರಿಶೂರ್‌ನಲ್ಲಿ 43, ಎರ್ನಾಕುಳಂನಲ್ಲಿ 38, ಅಳಪ್ಪುಝದಲ್ಲಿ 34, ಮಲಪ್ಪುರಂನಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News