ಉತ್ತರ ಪ್ರದೇಶ: ಎನ್‌ಕೌಂಟರ್ ಹೆಸರಿನಲ್ಲಿ ಯೋಜಿತ ಹತ್ಯೆ?

Update: 2018-08-25 18:45 GMT

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್ 

2017ರ ಮಾರ್ಚ್‌ನಲ್ಲಿ ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಬಳಿಕ, ಈ ವರ್ಷದ ಆಗಸ್ಟ್ 4ರವರೆಗೆ ಆ ರಾಜ್ಯದಲ್ಲಿ 2,351 ಶೂಟೌಟ್‌ಗಳು ನಡೆದಿವೆ ಹಾಗೂ 63 ಮಂದಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ರಾಜ್ಯವನ್ನು ಅಪರಾಧ ಹಾಗೂ ಕ್ರಿಮಿನಲ್‌ಗಳಿಂದ ಮುಕ್ತಗೊಳಿಸುವ ತನ್ನ ದೃಢಸಂಕಲ್ಪಕ್ಕೆ ಇದು ಸಾಕ್ಷಿಯೆಂದು ರಾಜ್ಯ ಸರಕಾರವು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ.

ಇವುಗಳಲ್ಲಿ 17 ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಐದು ಮಂದಿ ಸದಸ್ಯರ ತಂಡವನ್ನು ರಚಿಸುವಂತೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ರಾಜ್ಯಸರಕಾರಕ್ಕೆ ಸೂಚನೆ ನೀಡಿದೆ. ಎನ್‌ಕೌಂಟರ್‌ಗಳ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೂಡಾ ಜುಲೈನಲ್ಲಿ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
 ಈ ಮಧ್ಯೆ ಇಂಗ್ಲಿಷ್ ದೈನಿಕವೊಂದು 63 ಎನ್‌ಕೌಂಟರ್ ಪ್ರಕರಣಗಳ ಪೈಕಿ 41 ಪ್ರಕರಣಗಳಿಗೆ ಸಂಬಂಧಪಟ್ಟ ಕುಟುಂಬಗಳು ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿವೆ ಹಾಗೂ 21 ಮಂದಿಯ ಸಾವಿಗೆ ಸಂಬಂಧಿಸಿ, 20 ಪ್ರಕರಣಗಳ ಎಫ್‌ಐಆರ್‌ಗಳನ್ನು ಕೂಡಾ ಪಡೆದುಕೊಳ್ಳುವಲ್ಲಿ ಸಫಲವಾಗಿವೆೆ. ಉಳಿದ 21 ಎನ್‌ಕೌಂಟರ್ ಪ್ರಕರಣಗಳ ಎಫ್‌ಐಆರ್‌ಗಳು, ಸಂತ್ರಸ್ತ ಕುಟುಂಬಗಳಿಗೆ ಲಭ್ಯವಾಗಿಲ್ಲ ಅಥವಾ ಸಂತ್ರಸ್ತ ಕುಟುಂಬಗಳು ತಮ್ಮ ವಾಸ್ತವ್ಯವನ್ನು ಬದಲಾಯಿಸಿಕೊಂಡಿವೆ ಹಾಗೂ ಅವುಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲು ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಖುದ್ದಾಗಿ ನಿರಾಕರಿಸಿದ್ದರೆ, ಇನ್ನು ಕೆಲವರು ತಾವು ಹೊಸದಾಗಿ ನಿಯೋಜಿತರಾಗಿರುವುದರಿಂದ ತಮ್ಮ ಬಳಿ ಆ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಿಲ್ಲವೆಂದು ಸಮಜಾಯಿಷಿ ನೀಡಿದ್ದಾರೆ.
ಈ ಎನ್‌ಕೌಂಟರ್ ಪ್ರಕರಣಗಳ ಬಗ್ಗೆ ತನಿಖಾ ವರದಿಯನ್ನು ತಯಾರಿಸುವ ಸಂದರ್ಭದಲ್ಲಿ ಆಂಗ್ಲ ದೈನಿಕವು, ಕೆಲವು ಪ್ರಮುಖ ಅಂಶಗಳನ್ನು ಬೆಳಕಿಗೆ ತರುವಲ್ಲಿ ಸಫಲವಾಗಿದೆ.
♦ ಸುಮಾರು 12 ಎಫ್‌ಐಆರ್‌ಗಳಲ್ಲಿ ಪೊಲೀಸರು, ಮಾಹಿತಿದಾರರು ನೀಡಿದ ಸುಳಿವಿನ ಆಧಾರದಲ್ಲಿ ತಾವು ಕ್ರಿಮಿನಲ್‌ಗಳನ್ನು ಅಡ್ಡಗಟ್ಟಿದ್ದಾಗಿ ಉಲ್ಲೇಖಿಸಿದ್ದಾರೆ. ಅವರಲ್ಲಿ ಬಹುತೇಕ ಕ್ರಿಮಿನಲ್‌ಗಳು ಮೋಟಾರ್‌ಸೈಕಲ್‌ಗಳಲ್ಲಿ ಆಗಮಿಸುತ್ತಿದ್ದಾಗ, ಸ್ಕಿಡ್ ಆಗಿ ಬಿದ್ದುದಾಗಿಯೂ ಹಾಗೂ ಅವರು ತಮ್ಮೆಡೆಗೆ ಗುಂಡು ಎಸೆದಿದ್ದರು ಎಂಬುದಾಗಿಯೂ ಪೊಲೀಸರು ಎಫ್‌ಐಆರ್‌ಗಳಲ್ಲಿ ದಾಖಲಿಸಿದ್ದಾರೆ.
♦ 11 ಎಫ್‌ಐಆರ್‌ಗಳಲ್ಲಿ ಪೊಲೀಸರು, ತಮಗೆ ದೊರೆತ ತರಬೇತಿಯ ಅನುಸಾರವಾಗಿ, ಪಾತಕಿಗಳ ಮೇಲೆ ಗುಂಡುಹಾರಿಸಿದ್ದಾಗಿ ಹೇಳಿದ್ದಾರೆ.
♦ 18 ಎಫ್‌ಐಆರ್‌ಗಳಲ್ಲಿ ಪೊಲೀಸರು, ಎನ್‌ಕೌಂಟರ್ ವೇಳೆ ತಾವು ಆದಮ್ಯವಾದ ಸಾಹಸವನ್ನು ಪ್ರದರ್ಶಿಸಿದ್ದಾಗಿ, ಉಲ್ಲೇಖಿಸಿದ್ದಾರೆ.
♦ ಎಂಟು ಎಫ್‌ಐಆರ್‌ಗಳಲ್ಲಿ, ಎನ್‌ಕೌಂಟರ್‌ಗಳನ್ನು ನಡೆಸಿದ ಸಂದರ್ಭದಲ್ಲಿ ತಾವು ಸುಪ್ರೀಂಕೋರ್ಟ್‌ನ ಆದೇಶಗಳನ್ನು ಅನುಸರಿಸಿದ್ದಾಗಿಯೂ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಮಂಡಳಿಯ ಮಾರ್ಗದರ್ಶಿ ಸೂತ್ರಗಳನ್ನು ಸಂಪೂರ್ಣವಾಗಿ ಪಾಲಿಸಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ.
♦ 12 ಎಫ್‌ಐಆರ್‌ಗಳಲ್ಲಿ ಪೊಲೀಸರು, ತಾವು ಎನ್‌ಕೌಂಟರ್‌ಗಳನ್ನು ರಾತ್ರಿಯಲ್ಲಿ ಅಥವಾ ಅಪರವೇಳೆಯಲ್ಲಿ ನಡೆಸಿರುವುದರಿಂದ ಘಟನೆಗೆ ಸಂಬಂಧಿಸಿದಂತೆ ಸಾಕ್ಷಿಗಳು ತಮಗೆ ಲಭ್ಯವಾಗಿಲ್ಲವೆಂದು ಹೇಳಿದ್ದಾರೆ.
♦ 18 ಎಫ್‌ಐಆರ್‌ಗಳಲ್ಲಿ ಕ್ರಿಮಿನಲ್‌ಗಳನ್ನು ಹತ್ಯೆ ಮಾಡಿರುವುದಾಗಿಯೂ ಹಾಗೂ ಅವರ ಸಹಚರರು ಪರಾರಿಯಾಗಿದ್ದಾಗಿಯೂ ಉಲ್ಲೇಖಿಸಲಾಗಿದೆ.
♦ ಬಹುತೇಕ ಎಲ್ಲಾ ಎಫ್‌ಐಆರ್‌ಗಳಲ್ಲಿ ಎನ್‌ಕೌಂಟರ್‌ಗಳು ರಾತ್ರಿ ವೇಳೆಯಲ್ಲಿ ಅಥವಾ ನಸುಕಿನಲ್ಲಿ ನಡೆದಿದ್ದಾಗಿ ಉಲ್ಲೇಖಿಸಲಾಗಿದೆ. ಹಲವಾರು ಪೊಲೀಸರು ತಾವು ಟಾರ್ಚ್‌ಲೈಟ್ ಬಳಸಿ, ಕ್ರಿಮಿನಲ್‌ಗಳನ್ನು ಗುರುತಿಸಿದ್ದಾಗಿ ಮತ್ತು ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ.
 ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಲಭ್ಯವಾದ 16 ಮರಣೋತ್ತರ ಪರೀಕ್ಷಾ ವರದಿಗಳ ಪೈಕಿ, ಮೂರರಲ್ಲಿ ಮೃತರ ತಲೆಗೆ ಹಾಗೂ ಎಂಟು ಮಂದಿಯ ಎದೆಗೆ ಗುಂಡಿಕ್ಕಲಾಗಿದೆ. ಅವರಲ್ಲಿ ಹೆಚ್ಚಿನವರಿಗೆ ಹಲವಾರು ಬಾರಿ ಗುಂಡುಹಾರಿಸಲಾಗಿದೆ. 2017ರ ಆಗಸ್ಟ್ 3ರಲ್ಲಿ ಮೃತಪಟ್ಟ ಆಝಂಘರ್ ನಿವಾಸಿ ಜೈ ಹಿಂದ್ ಯಾದವ್‌ಗೆ ಮೃತ ದೇಹದಲ್ಲಿ 19 ಗುಂಡೇಟಿನ ಗಾಯದ ಗುರುತುಗಳು ಕಂಡುಬಂದಿವೆ.
41 ಪ್ರಕರಣಗಳ ಪೈಕಿ 25ರ ಮರಣೋತ್ತರ ಪರೀಕ್ಷಾ ವರದಿಗಳು, ಇಂಡಿಯನ್ ಎಕ್ಸ್‌ಪ್ರೆಸ್ ದೈನಿಕಕ್ಕೆ ಲಭ್ಯವಾಗಿಲ್ಲ. ಹಲವಾರು ಪ್ರಕರಣಗಳಲ್ಲಿ, ಮರಣೋತ್ತರ ಪರೀಕ್ಷಾ ವರದಿಯನ್ನಾಗಲಿ ಅಥವಾ ಎಫ್‌ಐಆರ್ ಆಗಲಿ ಸಂಬಂಧಪಟ್ಟ ನ್ಯಾಯಾಲಯಗಳ ಜೊತೆ ಹಂಚಿಕೊಂಡಿಲ್ಲವೆಂಬುದನ್ನು ಆಂಗ್ಲ ದೈನಿಕ ಪತ್ತೆ ಹಚ್ಚಿದೆ.
 ಎನ್‌ಕೌಂಟರ್‌ನಲ್ಲಿ ಸಾವಿಗೀಡಾದವರನ್ನು ಕೊಂಡೊಯ್ಯಲಾದ ಆಸ್ಪತ್ರೆಗಳಿಗೂ ಇಂಡಿಯನ್ ಎಕ್ಸ್‌ಪ್ರೆಸ್ ಭೇಟಿ ನೀಡಿದೆ. ಅನೇಕ ಪ್ರಕರಣಗಳಲ್ಲಿ ಎಫ್‌ಐಆರ್ ಆಗಲಿ ಅಥವಾ ಮರಣೋತ್ತರ ಪರೀಕ್ಷೆಯ ವರದಿಯನ್ನಾಗಲಿ ಆಯಾ ನ್ಯಾಯಾಲಯಗಳ ಜೊತೆ ಪೊಲೀಸರು ಹಂಚಿಕೊಂಡಿಲ್ಲವೆಂಬುದು ಕೂಡಾ ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದವರ ಪೈಕಿ 27 ಮಂದಿಯ ಕುಟುಂಬಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಮೃತರ ಪೈಕಿ ನದೀಮ್ ಹಾಗೂ ಶಂಶಾದ್ ಹೀಗೆ ಕನಿಷ್ಠ ಇಬ್ಬರನ್ನು ಕಸ್ಟಡಿಯಿಂದ ಪರಾರಿಯಾಗುತ್ತಿದ್ದ ವೇಳೆ ಗುಂಡಿಕ್ಕಲಾಗಿದೆಯೆಂದು ಹೇಳಲಾಗಿದೆ. ಅನೇಕ ಪ್ರಕರಣಗಳಲ್ಲಿ, ಹತ್ಯೆಯಾದರ ತಲೆಗೆ ಪೊಲೀಸರು ಬಹುಮಾನ ಘೋಷಿಸಿದ್ದರೆಂಬ ಮಾಹಿತಿ ತಮಗೆ ಇರಲಿಲ್ಲವೆಂದು ಅವರ ಕುಟುಂಬಿಕರು ತಿಳಿಸಿದ್ದಾರೆ.
ಅನೇಕ ಪ್ರಕರಣಗಳಲ್ಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಶಾಮ್ಲಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಜಯ್ ಪಾಲ್ ಶರ್ಮಾಗೆ ‘ಎನ್‌ಕೌಂಟರ್ ಮ್ಯಾನ್’ ಎಂಬ ಹಣೆಪಟ್ಟಿ ಕೂಡಾ ಇತ್ತು. ಅತ ನಡೆಸಿದ ಐದು ಎನ್‌ಕೌಂಟರ್‌ಗಳಲ್ಲಿ ಆರು ಮಂದಿ ಹತ್ಯೆಯಾಗಿದ್ದಾರೆ. ಆನಂತರ ಅವರು ಎಸ್‌ಎಸ್‌ಪಿ ದರ್ಜೆಗೆ ಭಡ್ತಿ ಪಡೆದು, ಗೌತಮ್ ಬುದ್ಧ ನಗರ್‌ಗೆ ವರ್ಗಾವಣೆಯಾದರು. ಗೌತಮ್ ಬುದ್ಧ ನಗರದಲ್ಲೂ ಎಸ್‌ಎಸ್‌ಪಿ ಶರ್ಮಾ ನಡೆಸಿದ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
  ಎನ್‌ಕೌಂಟರ್ ನಡೆದಾಗ ಸ್ಥಳದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಎಫ್‌ಐಆರ್‌ನಲ್ಲಿ ವಿವರಿಸುವುದಾಗಿ ಶರ್ಮಾ ಹೇಳುತ್ತಾರೆ. ಪಾತಕಿಗಳು ಗುಂಡೆಸೆದಾಗ ಪೊಲೀಸರು ಹಿಂದಡಿಯಿಡದೆ ದಿಟ್ಟತನದಿಂದ ಅವರನ್ನು ಎದುರಿಸುತ್ತಾರೆ. ಅವರ ಶೌರ್ಯವನ್ನು ಎಫ್‌ಐಆರ್‌ನಲ್ಲಿ ವಿವರಿಸುತ್ತೇವೆ ಎಂದವರು ತಿಳಿಸುತ್ತಾರೆ.
‘‘ಶಾಮ್ಲಿಯಲ್ಲಿ ಕಳೆದ ವರ್ಷ ಆಗಸ್ಟ್‌ನಲ್ಲಿ ಇಕ್ರಂ ಯಾನೆ ತೋಲಾ ಎಂಬಾತನನ್ನು ಎನ್‌ಕೌಂಟರ್ ನಡೆಸಿದಾಗ ಗಾಯಗೊಂಡ ಆತನಿಗೆ ಮೂರು ತಾಸುಗಳ ಕಾಲ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೆವು. ಆತನ ಅಂತಿಮ ಹೇಳಿಕೆಯನ್ನು ಕೂಡಾ ವೀಡಿಯೊದಲ್ಲಿ ದಾಖಲಿಸಿ ಕೊಂಡಿದ್ದೇವೆ. ಆತ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದನ್ನು ತನ್ನ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾನೆ’’ ಎಂದು ಶರ್ಮಾ ವಿವರಿಸುತ್ತಾರೆ.
ಈ ಎನ್‌ಕೌಂಟರ್‌ಗಳ ಪೈಕಿ 63 ಮಂದಿ ಕ್ರಿಮಿನಲ್ ಆರೋಪಿಗಳು ಮೃತಪಟ್ಟಿದ್ದು, 584 ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ದಾಖಲಿಸಿರುವ ಎನ್‌ಕೌಂಟರ್ ಪ್ರಕರಣಗಳ ಎಫ್‌ಐಆರ್‌ಗಳಲ್ಲಿಯೂ ಸಾಮ್ಯತೆಗಳಿರುವ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಉತ್ತರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ‘‘ಎಫ್‌ಐಆರ್‌ಗಳನ್ನು ಘಟನಾಸ್ಥಳದ ಸನ್ನಿವೇಶಕ್ಕೆ ಅನುಗುಣವಾಗಿ ದಾಖಲಿಸಲಾಗುತ್ತದೆಯೇ ಹೊರತು ಯಾವುದೇ ಸಿದ್ಧಪಡಿಸಿದ ಮಾದರಿಯಿರುವುದಿಲ್ಲ’’ ಎಂದು ಸ್ಪಷ್ಟಪಡಿಸಿದರು.
ಆದರೆ 20 ಎನ್‌ಕೌಂಟರ್ ಪ್ರಕರಣಗಳನ್ನು ನಿಕಟವಾಗಿ ಪರಿಶೀಲಿಸಿದಾಗ, ಅವುಗಳಲ್ಲಿ ಸಾಮ್ಯತೆಯಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ.
   ಉದಾಹರಣೆಗೆ 2017ರಂದು ಮಾರ್ಚ್ 31ರಂದು ಸಹಾರನ್‌ಪುರ ಜಿಲ್ಲೆಯ ಭೈಲಾದಲ್ಲಿ ನಡೆದ 25 ವರ್ಷದ ಗುರ್ಮಿತ್ ಸಿಂಗ್‌ನ ಪ್ರಕರಣವನ್ನೇ ತೆಗೆದುಕೊಳ್ಳೋಣ. ಆತ ತಮ್ಮ ಮೇಲೆ ಗುಂಡೆಸೆದು, ಆನಂತರ ಸಹಚರನೊಂದಿಗೆ ಪರಾರಿಗೆ ಯತ್ನಿಸಿದ್ದಾಗಿಯೂ ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ. ಆ ಸಂದರ್ಭದಲ್ಲಿ ಆತನಿಗೆ ಗುಂಡೆಸೆದಿದ್ದಾಗಿಯೂ ಅವರು ಹೇಳಿದ್ದಾರೆ. ಎನ್‌ಕೌಂಟರ್ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹಾಗೂ ಮಾನವಹಕ್ಕುಗಳ ಆಯೋಗದ ನಿರ್ದೇಶನಗಳನ್ನು ಸ್ಪಷ್ಟವಾಗಿ ಪಾಲಿಸಿದ್ದಾಗಿಯೂ ಅವರು ಎಫ್‌ಐಆರ್‌ನಲ್ಲಿ ಪ್ರಸ್ತಾವಿಸಿದ್ದಾರೆ.
ಗುರ್ಮಿತ್ 2017ರ ಎಪ್ರಿಲ್ 22ರಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಆದಿತ್ಯನಾಥ್ ಸರಕಾರದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಪ್ರಪ್ರಥಮ ವ್ಯಕ್ತಿ ಈತ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತ ನೆತ್ತರನಂಜಿನ ಪರಿಣಾಮವಾಗಿ ಸಾವನ್ನಪ್ಪಿದ್ದಾಗಿ ಉಲ್ಲೇಖಿಸಲಾಗಿದೆ.
ಅದೇ ರೀತಿ ಶಾಮ್ಲಿಯಲ್ಲಿ ಆಗಸ್ಟ್ 10ರಂದು ಎನ್‌ಕೌಂಟರ್‌ಗೊಳಗಾದ ಇಕ್ರಂ ಅಲಿಯಾಸ್ ತೋಲಾ ಪ್ರಕರಣದಲ್ಲಿಯೂ ಇದೇ ರೀತಿಯ ಸಾಮ್ಯತೆ ಕಂಡುಬರುತ್ತದೆ. ಮೋಟಾರ್‌ಬೈಕ್‌ನಲ್ಲಿ ತನ್ನ ಸಹಚರನೊಂದಿಗೆ ಬರುತ್ತಿದ್ದ ಇಕ್ರಂ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿ ತಾವು ಅಡ್ಡಗಟ್ಟಿದಾಗ ಆತ ತಮ್ಮ ಮೇಲೆ ಗುಂಡುಹಾರಿಸಿದ್ದಾಗಿಯೂ ಪ್ರತಿಯಾಗಿ ತಾವು ಎನ್‌ಕೌಂಟರ್ ನಡೆಸಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಆತನ ಸಹಚರ ಪರಾರಿಯಾಗಿರುವುದಾಗಿಯೂ ವರದಿ ತಿಳಿಸಿದೆ.
ಆದರೆ ಇಕ್ರಂನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತನ ಮೇಲೆ 10 ಗುಂಡುಗಳು ಬಿದ್ದಿರುವುದನ್ನು ದಾಖಲಿಸಲಾಗಿದೆ.
12 ಕ್ರಿಮಿನಲ್ ಪ್ರಕರಣಗಳ ಆರೋಪಿ ನದೀಮ್‌ನನ್ನು ಮೊಕದ್ದಮೆ ಯೊಂದರ ವಿಚಾರಣೆಗಾಗಿ ಮುಝಾಫರ್ ನ್ಯಾಯಾಲಯದಲ್ಲಿ ಹಾಜರುಪಡಿಸಲು ಕೊಂಡೊಯ್ಯುತ್ತಿದ್ದ ವೇಳೆ ಆತ ತನ್ನ ಸಹಚರರ ನೆರವಿನೊಂದಿಗೆ ತಮ್ಮ ಮೇಲೆ ಖಾರಪುಡಿ ಎಸೆದು ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಆತನನ್ನು ಎನ್‌ಕೌಂಟರ್ ನಡೆಸಿ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಇದಕ್ಕೆ ಪುರಾವೆಯಾಗಿ ಈವರೆಗೆ ಪೊಲೀಸರು ಯಾವುದೇ ಸಾಕ್ಷಿಯನ್ನು ಹಾಜರುಪಡಿಸಿಲ್ಲ.
ಇನ್ನು ಕ್ರಮವಾಗಿ ಮುಝಪ್ಫರ್ ನಗರದಲ್ಲಿ 2017ರ ಸೆಪ್ಟೆಂಬರ್ 22ರಂದು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಜಾನ್ ಮುಹಮ್ಮದ್‌ನ ಮರಣೋತ್ತರ ಪರೀಕ್ಷಾ ವರದಿ ಈವರೆಗೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ