ಕರ್ನಾಟಕ ಸಂಗೀತವನ್ನು ಅದರಷ್ಟಕ್ಕೇ ಬಿಡಿ

Update: 2018-08-25 18:43 GMT

ಇತ್ತೀಚೆಗೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ವಿವಾದವನ್ನು ಹುಟ್ಟುಹಾಕಲಾಗಿದೆ. ಕರ್ನಾಟಕ ಸಂಗೀತದಲ್ಲಿ ಬೇರೆ ಧರ್ಮದ ಹಾಡುಗಳನ್ನು ಹಾಡಬಾರದು ಅನ್ನುವ ಕೂಗು ಎದ್ದಿದೆ. ಹಾಗೆ ಹಾಡಿದವರಿಗೆ ಕಾರ್ಯಕ್ರಮ ನೀಡಬಾರದು. ಅವರಿಗೆ ಕೊಡಮಾಡಿರುವ ಪ್ರಶಸ್ತಿಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಜಾತಿ ಧರ್ಮ ಎಲ್ಲವನ್ನು ಮೀರಿಕೊಂಡು ಬೆಳೆಯುತ್ತಿದ್ದ ಕಲೆಯನ್ನು ಮತ್ತೆ ಅದರ ಕೂಪಕ್ಕೆ ತಳ್ಳುವ ಒಂದು ಪ್ರಯತ್ನ ಸಾಗಿದೆ. ಈ ಬಗ್ಗೆ ಸಂಗೀತ ಕ್ಷೇತ್ರದಲ್ಲಿ ಚರಿತ್ರೆಕಾರನಾಗಿ ಖ್ಯಾತರಾಗಿರುವ ವಿ. ಶ್ರೀರಾಂ ಒಂದು ಲೇಖನವನ್ನು ‘ಹಿಂದೂ’ ಪತ್ರಿಕೆಯಲ್ಲಿ ಬರೆದಿದ್ದಾರೆ. ಕಲೆಯನ್ನು ನಿಜವಾಗಿ ಪ್ರೀತಿಸುವವರು ಗಮನಿಸಲೇ ಬೇಕಾದ ಹಲವು ಅಂಶಗಳನ್ನು ಅದರಲ್ಲಿ ಚರ್ಚಿಸಿದ್ದಾರೆ. ಆರೋಗ್ಯವಂತ ಚರ್ಚೆಗೆ ಅವಕಾಶವಾಗಲಿ ಅನ್ನುವ ಉದ್ದೇಶದಿಂದ ಅದನ್ನು ಕನ್ನಡದಲ್ಲಿ ಅನುವಾದಿಸಿ ಇಲ್ಲಿ ಕೊಡಲಾಗಿದೆ. ಕರ್ನಾಟಕ ಸಂಗೀತ ಹಲವು ರೀತಿಯ ಕೊಡುಕೊಳ್ಳುವಿಕೆಯಿಂದ ಶ್ರೀಮಂತವಾಗಿರುವ ಕಲೆ. ಅದು ಉಳಿಯಬೇಕು.

ತ್ಯಾಗರಾಜರ ಕಾಲದಿಂದಲೂ ಚರ್ಚುಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಂಪರೆ ಇದೆ.
ಇತ್ತೀಚೆಗೆ ಒಬ್ಬ ಕರ್ನಾಟಕ ಸಂಗೀತಗಾರನ ಸುತ್ತ ಎದ್ದಿರುವ ವಿವಾದ ನಾವು ಯೋಚಿಸಬೇಕಾದ ವಿಷಯ. ಅವರು ಕ್ರಿಶ್ಚಿಯನ್ ಹಾಡುಗಳನ್ನು ಆಧರಿಸಿದ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ ಅನ್ನುವುದು ವಿವಾದದ ಹಿಂದಿನ ತರ್ಕ. ಅವರಿಗೆ ಸಾಮಾಜಿಕ ಮಾಧ್ಯಮಗಳು ಹಾಗೂ ಫೋನು ಕರೆಗಳ ಮೂಲಕ ತುಂಬಾ ಹಿಂಸೆ ನೀಡಲಾಯಿತು. ಕೊನೆಗೆ ಅವರು ಕಾರ್ಯಕ್ರಮವನ್ನು ರದ್ದುಪಡಿಸುವ ತನಕ ಬಿಡಲಿಲ್ಲ. ಇನ್ನೊಂದು ಗುಂಪಿನ ಪ್ರಖ್ಯಾತ ಗಾಯಕರು ಕರ್ನಾಟಕ ಸಂಗೀತದ ರಾಗಗಳನ್ನು ಅಳವಡಿಸಿದ ಕ್ರಿಶ್ಚಿಯನ್ ಹಾಡುಗಳನ್ನು ಹಾಡಿ ಮತಾಂತರಕ್ಕೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ

ಸುಳ್ಳುಗಳು ಹಾಗೂ ಬೈಗುಳಗಳು
ಅದರ ಬೆನ್ನಲ್ಲೇ ಸುಳ್ಳುಸುದ್ದಿಗಳು ಪ್ರಾರಂಭವಾದವು. ಕವಿ ಹಾಗೂ ವಾಗ್ಗೇಯಕಾರ ತ್ಯಾಗರಾಜರ ಕೃತಿಗಳಲ್ಲಿ ‘ರಾಮ’ ಎನ್ನುವಲ್ಲಿ ‘ಜೀಸಸ್’ ಎಂದು ಬದಲಿಸಿದ್ದಾರೆ ಎಂದು ಆರೋಪಿಸಲಾಯಿತು. ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ. ಸಾಹಿತ್ಯದಲ್ಲಿ ಸಾಮ್ಯತೆ ಇದೆ ಎನ್ನುವುದು ಅದಕ್ಕೆ ನಿಜವಾದ ಪುರಾವೆ ಆಗುವುದಕ್ಕೆ ಸಾಧ್ಯವಿಲ್ಲ. ಈ ಆರೋಪಗಳಿಗೆ ಗುರಿಯಾಗಿರುವ ಕಲಾವಿದರೆಲ್ಲರೂ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಸುಳ್ಳು ಸುದ್ದಿಯನ್ನು ಪ್ರಚಾರಮಾಡಿದವರಿಗೂ ಈ ಆರೋಪಗಳ ಸಮರ್ಥನೆಗೆ ಯಾವ ಪುರಾವೆಗಳನ್ನೂ ಒದಗಿಸುವುದಕ್ಕೆ ಸಾಧ್ಯವಾಗಿಲ್ಲ.
ಅಷ್ಟೇ ಅಲ್ಲ. ಕೆಲವು ಪ್ರಖ್ಯಾತ ಪಾದ್ರಿಗಳೊಡನೆ ಒಬ್ಬ ಪ್ರಮುಖ ಕರ್ನಾಟಕ ಕಲಾವಿದ ಇರುವ ಚಿತ್ರವನ್ನು ಪ್ರಕಟಿಸಿ, ಇಂತಹ ಘೋರ ಅಪರಾಧ ಮಾಡಿರುವುದಕ್ಕೆ ಆ ಕಲಾವಿದನಿಗೆ ಬಂದಿರುವ ಎಲ್ಲಾ ಪ್ರಶಸ್ತಿಗಳನ್ನು, ಬಿರುದುಗಳನ್ನೂ ಹಿಂದೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆ ಕಲಾವಿದರನ್ನು ಕೆಟ್ಟದಾಗಿ ಟೀಕಿಸಲಾಗುತ್ತಿದೆ. ಕೆಲವು ಸಭೆಗಳು ಇಂತಹ ಸುಳ್ಳುಸುದ್ದಿಗಳನ್ನು ನಂಬಿಕೊಂಡು ಇಂತಹ ಆಪಾದಿತ ಕಲಾವಿದರ ಕಾರ್ಯಕ್ರಮಗಳನ್ನು ರದ್ದು ಮಾಡಲು ಮುಂದಾಗಿವೆ. ಇವೆಲ್ಲವೂ ಐದು ವರ್ಷಗಳ ಹಿಂದೆಯೇ ಧ್ವನಿಮುದ್ರಿತವಾದವುಗಳು. ಆಗಿನಿಂದಲೂ ಯು-ಟ್ಯೂಬಿನಲ್ಲಿ ಲಭ್ಯವಿವೆ ಎಂಬ ಸತ್ಯವನ್ನು ಸಲೀಸಾಗಿ ನಿರ್ಲಕ್ಷಿಸುತ್ತಿದ್ದಾರೆ. ಇವೆಲ್ಲವನ್ನೂ ಯಾರೂ ಗಮನಿಸಲು ಬಯಸುವುದೇ ಇಲ್ಲ.

ಶ್ರೀಮಂತ ಸಂಬಂಧಗಳು
ಇವೆಲ್ಲವುಗಳಿಂದ ಹಿಂದೂ ಧರ್ಮಕ್ಕೆ ಎಂತಹ ಅಪಾಯವಿದೆ? ಪ್ರಧಾನವಾಗಿ ಹಿಂದುವಾಗಿರುವವ ಈ ಸಂಗೀತವನ್ನು ಹೀಗೆ ಬಳಸಿಕೊಳ್ಳುವುದಕ್ಕೆ ಹೇಗೆ ಸಾಧ್ಯ ಎನ್ನುವ ಬಹುಮುಖ್ಯ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ತ್ಯಾಗರಾಜರ ಕಾಲದಲ್ಲೇ ಚರ್ಚುಗಳಲ್ಲಿ ಕರ್ನಾಟಕ ಸಂಗೀತದ ಸಂಪ್ರದಾಯವಿತ್ತು ಎನ್ನುವುದನ್ನು ನಾವೆಲ್ಲಾ ಮರೆಯುತ್ತಿದ್ದೇವೆ. ತ್ಯಾಗರಾಜರ ಸಮಕಾಲೀನರಾದ ವೇದನಾಯಗಂ ಶಾಸ್ತ್ರಿಗಳು ಅಪೇರಾಗಳನ್ನು, ಹಾಡುಗಳನ್ನು ಕರ್ನಾಟಕ ಶೈಲಿಯಲ್ಲಿ ರಚಿಸಿದ್ದರು. ಕೆಲವು ರಾಗಮಟ್ಟುಗಳು ತ್ಯಾಗರಾಜರ ಕೃತಿಗಳನ್ನು ಬಹುವಾಗಿ ಹೋಲುವ ರೀತಿಯಲ್ಲಿ ರಚಿತವಾಗಿದ್ದವು. ತ್ಯಾಗರಾಜರ ‘ಸುಜನ ಜೀವನ (ಹರಿಕಾಂಬೋಜಿ) ಪರಮ ಪಾವನ’ ಎಂಬ ರಚನೆಗೆ ತುಂಬಾ ಸಾಮ್ಯವಿದೆ. ಈಗ ಯಾರು ಯಾರಿಂದ ಎರವಲು ಪಡೆದು ತಮ್ಮದು ಮಾಡಿಕೊಂಡರು ಎಂದು ಹೇಳಲಾಗುವುದಿಲ್ಲ.
ಶಾಸ್ತ್ರಿಗಳ ಬೆತ್ಲೆಹೆಮ್ ಕುರವಂಜಿಯಂತಹ ಹಾಡುಗಳನ್ನು ಅವರ ನಂತರದವರು ಕಥಾಕಾಲಕ್ಷೇಪವಾಗಿ ಹಲವು ಚರ್ಚುಗಳಲ್ಲಿ ಹಾಡುತ್ತಿದ್ದರು. ಶಾಸ್ತ್ರಿಯವರ ಕಾಲದಿಂದ ಕ್ರಿಸ್ಚಿಯನ್ ಸಮುದಾಯದಲ್ಲಿ ಕರ್ನಾಟಕ ಸಂಗೀತದ ಕಲಾವಿದರು ಹಲವರಿದ್ದರು. ಅವರೆಲ್ಲಾ ಚರ್ಚುಗಳಲ್ಲಿ ಕಲೆಯನ್ನು ಪ್ರಚಾರಮಾಡುತ್ತಿದ್ದರು.
ಈ ಕಲಾಪ್ರಕಾರದಲ್ಲಿ ಕ್ರೈಸ್ತರ ಆಸಕ್ತಿಯನ್ನು ಹಲವಾರು ಸಂಪ್ರದಾಯಸ್ಥ ಕಲಾವಿದರು ಪ್ರೋತ್ಸಾಹಿಸಿ ಬೆಳೆಸಿದರು. ಹತ್ತೊಂಬತ್ತನೇ ಶತಮಾನದ ವಾಗ್ಗೇಯಕಾರ ಸ್ಯಾಮ್ಯುಯಲ್ ವೇದನಾಯಗಂ ಪಿಳ್ಳೈ ತಮ್ಮೆಲ್ಲಾ ಕೃತಿಗಳನ್ನು ತಿದ್ದಿಸಿಕೊಂಡಿದ್ದು ‘ನಂದನ ಚರಿತ್ರಂ’ ರಚಿಸಿದ ಗೋಪಾಲಕೃಷ್ಣ ಭಾರತಿಯವರಿಂದ. ತಮಿಳು ಪಂಡಿತ ಮೀನಾಕ್ಷಿಸುಂದರಂ ಪಿಳ್ಳೈ, ತಿರುವಾಡುದುರೈ ಮಠದ ಗುರುಗಳು ಮೇಲಗ್ರಾಮಂ ಸುಬ್ರಹ್ಮಣ್ಯ ದೇಶಿಕರ್ ಇವರೆಲ್ಲರೂ ಆತ್ಮೀಯ ಗೆಳೆಯರಾಗಿದ್ದರು. 19ನೇ ಶತಮಾನದ ಕೊನೆಯ ಭಾಗದಲ್ಲಿ ತ್ಯಾಗರಾಜರು ಹಾಗೂ ದೀಕ್ಷಿತರ ಶಿಷ್ಯರುಗಳು ರೋಮನ್ ಕ್ಯಾಥೊಲಿಕ್ ಆಗಿದ್ದ ಎ. ಎಂ. ಚಿನ್ನಸ್ವಾಮಿ ಮುದಲಿಯಾರ್ ಅವರನ್ನು ಮೆಚ್ಚಿಕೊಂಡು ತಮಗೆ ಗೊತ್ತಿರುವುದನ್ನು ಅವರಿಗೆ ಕಲಿಸಿದ್ದರು. ತಂಜಾವೂರಿನಲ್ಲಿ ಮೊತ್ತಮೊದಲ ಕರ್ನಾಟಕ ಸಂಗೀತ ಸಮ್ಮೇಳನವನ್ನು ರಾವ್ ಸಾಹೇಬ್ ಅಬ್ರಹಾಂ ಪಂಡಿತರ್ ಸಂಘಟಿಸಿದಾಗ ಹರಿಕೇಶನೆಲ್ಲೂರ್ ಮುತ್ತಯ್ಯ ಭಾಗವತರು ಅವರಿಗೆ ನೆರವಾಗಿದ್ದರು.
 1930ರಲ್ಲಿ ಪಂಡಿತರ ಮಗ ಎ. ಜೆ. ಪಾಂಡಿಯನ್ ಕ್ರೈಸ್ತ ಕರೋಲ್‌ಗಳನ್ನು ಕರ್ನಾಟಕ ಶೈಲಿಯಲ್ಲಿ ರಚಿಸಿದರು. ಇವುಗಳಿಗೆ ರಾಗ ಸಂಯೋಜನೆ ಮಾಡುವುದಕ್ಕೆ ನೆರವಾಗಿದ್ದವರು ದೇವಿ ಹಾಗೂ ಶಿವನನ್ನು ಕುರಿತು ಹಲವು ಕೃತಿಗಳನ್ನು ರಚಿಸಿದ ಮುತ್ತಯ್ಯ ಭಾಗವತರು. ಈ ಕೃತಿಗಳನ್ನು ಕಲ್ಕಿ ಕೃಷ್ಣಮೂರ್ತಿ ಬಹಳ ಮೆಚ್ಚಿಕೊಂಡಿದ್ದರು ಮತ್ತು 1935 ಮತ್ತು 1937ರಲ್ಲಿ ಮ್ಯೂಸಿಕ್ ಅಕಾಡಮಿಯ ಡಿಸೆಂಬರ್ ಉತ್ಸವದಲ್ಲಿ ಇವುಗಳನ್ನು ಒಂದು ಆರ್ಕೆಷ್ಟಾ ರೂಪದಲ್ಲಿ ಪ್ರದರ್ಶಿಸಲು ಪಾಂಡಿಯನ್ ಅವರನ್ನು ಕೇಳಿಕೊಳ್ಳಲಾಯಿತು.
 1918ರಲ್ಲಿ ರೆವರೆಂಡ್ ಪಾಪ್ಲಿ ಕ್ರೈಸ್ತ ಪುರುಷರು ಮತ್ತು ಮಹಿಳೆಯರಿಗೆ ಸಂಗೀತವನ್ನು ಕಲಿಸಲು ಬೇಸಿಗೆ ಶಾಲೆಯನ್ನು ಪ್ರಾರಂಭಿಸಿದರು. 1924ರಲ್ಲಿ ಪಿ. ಸಾಂಬಮೂರ್ತಿ ಅಲ್ಲಿ ಅಧ್ಯಾಪಕರಾಗಿದ್ದರು. ಒಂದು ವರ್ಷದ ನಂತರ ಅವರು ಅದರ ಉಪಪ್ರಾಂಶುಪಾಲರಾದರು, ಕೊನೆಗೆ ಅದರ ಪ್ರಾಂಶುಪಾಲರಾದರು. ಒಬ್ಬ ಸಂಪ್ರದಾಯಸ್ಥ, ಕಚ್ಚೆಪಂಚೆ ಉಟ್ಟುಕೊಂಡ ಪಂಡಿತ ಕ್ರೈಸ್ತರಿಗೆ ಸಂಗೀತ ಕಲಿಸುವುದು ಯಾರಿಗೂ ಅಪರಾಧವೆನಿಸಲಿಲ್ಲ. ಅಲ್ಲಿ ಸಂಗೀತ ಕಲಿತು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಡಿ. ಕೆ. ಪಟ್ಟಮ್ಮಾಳ್ ಆ ಶಾಲೆ ಸೇರಿಕೊಂಡಿದ್ದು ತಪ್ಪೆಂದು ಯಾರೂ ಭಾವಿಸಲಿಲ್ಲ. ಕರ್ನಾಟಕ ಸಂಗೀತದ ಸಾಮ್ರಾಜ್ಞಿ ಎನಿಸಿಕೊಂಡಿದ್ದ ವೀಣೆ ಧನಮ್ಮಾಳ್ ಕಲ್ಕತ್ತೆಯ ಗೌಹರ್ ಜಾನ್ ಹಾಗೂ ಅಬ್ದುಲ್ ಕರೀಂ ಖಾನ್ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು, ಅಷ್ಟೇ ಅಲ್ಲ ಅವರಿಗೆ ಕೆಲವು ತ್ಯಾಗರಾಜರ ಕೆಲವು ಕೃತಿಗಳನ್ನು ಕಲಿಸಿಯೂ ಇದ್ದರು. ಅವುಗಳ ಗ್ರಾಮೋಪೋನ್ ತಟ್ಟೆಗಳೂ ಇವೆ.
 
ಮತ್ತಷ್ಟು ಉದಾಹರಣೆಗಳು
ಹಲವರಿಗೆ ತಮಿಳು ಇಸೈ ಸಂಘಂವು ಚೆನ್ನೈನ ಸಂತ ಮೇರಿಯವರ ಕೋ-ಕೆಥೆಡ್ರಲ್‌ನಲ್ಲಿ ಪ್ರಾರಂಭವಾಯಿತು ಎನ್ನುವ ವಿಷಯ ಗೊತ್ತಿರಲಿಕ್ಕಿಲ್ಲ. ಪಟ್ನಂ ಸುಬ್ರಮಣ್ಯ ಅಯ್ಯರ್ ಮೊಮ್ಮಗ ಕೆ. ನಾರಾಯಣಸ್ವಾಮಿ ಅಯ್ಯರ್ 1950ರಲ್ಲಿ ಸಂಗೀತ ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು. ‘ಹೊಸಜಗತ್ತಿನ ಹಾಡುಗಳು’ ಎಂಬ ಶೀರ್ಷಿಕೆಯಲ್ಲಿ ಅವರ ರಚನೆಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಕ್ರಿಸ್ತನನು್ನ ಸ್ತುತಿಸಿರುವ ಹಲವು ಕೃತಿಗಳಿವೆ.
ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಹಲವು ಸಿನೆಮಾಗಳೂ ಬಿಡುಗಡೆಯಾಗಿವೆ. ಪಾಪನಾಶಂ ಶಿವನ್ ಅವರು ‘ಸಿಟಡೆಲ್ ಪಿಕ್ಚರ್ಸ್’ ಸಂಸ್ಥೆಯ ಜ್ಞಾನಸೌಂದರಿ ಚಿತ್ರದ ಒಂದು ಹಾಡಿಗೆ ರಾಗಸಂಯೋಜನೆ ಮಾಡಿದ್ದಾರೆ. ನಾರಾಯಣೀಯಂ ಖ್ಯಾತಿಯ ಪಿ. ಲೀಲಾ ‘ಮಿಸ್ಸಿಯಮ್ಮಾ’ ಸಿನೆಮಾದಲ್ಲಿ ‘‘ಎನೈ ಆಲುಂ ಮೇರಿ ಮಾತಾ’’ ಹಾಡಿದ್ದಾರೆ. ಎಂ. ಎಲ್. ವಸಂತಕುಮಾರಿ ಅಂಥದೇ ಹಾಡನ್ನು ‘ಪುಣ್ಯವತಿ ಸಿನೆಮಾಕ್ಕಾಗಿ ಶುದ್ಧ ಕರ್ನಾಟಕ ಶೈಲಿಯಲ್ಲಿ ಹಾಡಿದ್ದಾರೆ. ಕರ್ನಾಟಕ ಕಛೇರಿಯಲ್ಲಿ ಕ್ರೈಸ್ತ ಹಾಡುಗಳನ್ನು ಹಾಡುವುದರಿಂದ ಆಗುವುದಕ್ಕಿಂತ ಹೆಚ್ಚಿನ ಪರಿಣಾಮ ಸಿನೆಮಾ ಹಾಡುಗಳ ಮೂಲಕ ಹೆಚ್ಚು ವ್ಯಾಪಕವಾಗಿ ಆಗುತ್ತದೆ. ಹತ್ತು ವರ್ಷಗಳ ಹಿಂದೆ ಸಿಸ್ಟರ್ ಮಾರ್ಗರೇಟ್ ಬಾಸ್ಟಿನ್ ಅವರು ಮ್ಯೂಸಿಕ್ ಅಕಾಡಮಿಯಲ್ಲಿ ಕಾರೈಕ್ಕಲ್ ಅಮ್ಮಯ್ಯರ್ ಅವರ ಬದುಕನ್ನು ಕುರಿತು ಒಂದು ಅದ್ಭುವಾದ ಪ್ರಸ್ತುತಿಯನ್ನು ಮಾಡಿದರು.
ಆಗ ಕಾಲ ಭಿನ್ನವಾಗಿತ್ತು. ಆ ಬಗ್ಗೆ ಗದ್ದಲ ಮಾಡ ಬೇಕಾದ ಅವಶ್ಯಕತೆ ಯಾರಿಗೂ ಕಾಣಲಿಲ್ಲ. ಆದ್ದರಿಂದ ಇಂದಿನ ಕೂಗಾಟಕ್ಕೆ ಅರ್ಥವಿಲ್ಲ. ಯಾರೋ ಕೆಲವರಿಂದ ಪ್ರಾರಂಭವಾದ ಇದರ ಲಾಭವನ್ನು ಹಲವು ಪ್ರಚಾರಪ್ರಿಯರು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂದಿನ ವಿವಾದದಲ್ಲಿ ಸತ್ಯಾಂಶಗಳು ಮರೆಯಾಗಿವೆ. ಈ ಹಾಡುಗಳಿಂದ ಹಿಂದೂ ಧರ್ಮಕ್ಕೆ ಕೆಡುಕಾಗುತ್ತಿದೆ ಎಂದು ಭಾವಿಸುತ್ತಿರುವವರು ಸತ್ಯವನ್ನು ಅರಿತುಕೊಂಡು ತಿದ್ದಿಕೊಳ್ಳಬೇಕು. ಅವರು ಕರ್ನಾಟಕ ಸಂಗೀತದಿಂದ ಇತರ ಧರ್ಮೀಯರು ಹಿಂದೂಗಳನ್ನು ಆಕರ್ಷಿಸಬಹುದು ಅಂದುಕೊಂಡಿದ್ದರೆ ಈ ಕಲೆಗೆ ಜನರನ್ನು ತಲುಪಲು ಇರುವ ಸಾಮರ್ಥ್ಯದ ಬಗ್ಗೆ ಅವರ ಲೆಕ್ಕಾಚಾರ ಅತಿಯಾಯಿತು.

(ವಿ. ಶ್ರೀರಾಂ ಅವರು ಕರ್ನಾಟಕ ಸಂಗೀತ ಹಾಗೂ ಮದ್ರಾಸಿನ ಕುರಿತ ಒಬ್ಬ ಇತಿಹಾಸಕಾರ. ಚೆನ್ನೈನ ಮ್ಯೂಸಿಕ್ ಅಕಾಡಮಿಯ ಕಾರ್ಯದರ್ಶಿ. ಬೆಂಗಳೂರು ನಾಗರತ್ನಮ್ಮ ಅವರನ್ನು ಕುರಿತ ಮೌಲಿಕವಾದ ಗ್ರಂಥವನ್ನು ಬರೆದಿದ್ದಾರೆ.)

Writer - ವಿ. ಶ್ರೀರಾಂ

contributor

Editor - ವಿ. ಶ್ರೀರಾಂ

contributor

Similar News

ಜಗದಗಲ
ಜಗ ದಗಲ