ಕೇರಳ ನಿಧಿ ಸಂಗ್ರಹದಲ್ಲೂ ಸೃಜನಶೀಲತೆ !

Update: 2018-08-26 03:39 GMT

ಬೆಂಗಳೂರು, ಆ. 26: ಕಳೆದ ವಾರ 30 ಮಂದಿ ಛಾಯಾಗ್ರಾಹಕರು ಪ್ರವಾಹಪೀಡಿತ ಕೇರಳಕ್ಕೆ ನಿಧಿ ಸಂಗ್ರಹಿಸಲು "ಕ್ಲಿಕ್ ಫಾರ್ ಕೇರಳ" ಎಂಬ ವಿನೂತನ ಯೋಜನೆ ಪ್ರಕಟಿಸಿದ್ದರು. 5000 ರೂಪಾಯಿ ದೇಣಿಗೆ ನೀಡುವವರ ಫೋಟೊಗಳನ್ನು ಉಚಿತವಾಗಿ ಕ್ಲಿಕ್ಕಿಸುವುದಾಗಿ ಘೋಷಿಸಿದ್ದರು.

ಈ ಯೋಜನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿದ ಬಳಿಕ ಇದೀಗ ಪರಿಹಾರನಿಧಿ ಸಂಗ್ರಹಕ್ಕೆ ಇಂಥ ಮತ್ತಷ್ಟು ಸೃಜನಶೀಲ ವಿಧಾನಗಳನ್ನು ಇತರ ನಗರಗಳ ಕಲಾವಿದರು, ವಿನ್ಯಾಸಗಾರರು ಕಂಡುಕೊಂಡಿದ್ದಾರೆ.

ಬೆಂಗಳೂರು ಮೂಲದ ಪ್ರಿಯಾ ಕುರಿಯನ್ ತಮ್ಮ ಕಲಾಕೃತಿಗಳನ್ನು ಫೇಸ್‌ಬುಕ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಪ್ರತಿ ಕಲಾಕೃತಿಯ ಬೆಲೆ 2500 ರೂಪಾಯಿ. 35 ಮಂದಿ ಈಗಾಗಲೇ ಇದನ್ನು ಖರೀದಿಸಿದ್ದು, ಮತ್ತಷ್ಟು ಬೇಡಿಕೆ ಬರುತ್ತಿದೆ.

ಪರಿಹಾರ ನಿಧಿಗೆ 5000 ರೂಪಾಯಿ ದೇಣಿಗೆ ನೀಡುವವರಿಗೆ ಒಂದು ಚುಟುಕು ಉಡುಗೊರೆಯಾಗಿ ನೀಡುವುದಾಗಿ ಮುಂಬೈ ಮೂಲದ ಅಮಿತ್ ವರ್ಮಾ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. ಆಸಕ್ತರು ದೇಣಿಗೆ ನೀಡಿದ ರಸೀದಿಯ ಪ್ರತಿಯನ್ನು ಮತ್ತು ತಮ್ಮ ಆಸಕ್ತಿಯ ವಿಷಯವನ್ನು ಇವರಿಗೆ ಕಳುಹಿಸಿದರೆ, ವರ್ಮಾ ಅವರಿಗಾಗಿ ಚುಟುಕು ಬರೆದುಕೊಡುತ್ತಾರೆ. "ಪ್ರತಿಯೊಬ್ಬರಿಗೂ ದೇಣಿಗೆ ನೀಡುವಷ್ಟು ಹಣ ಇರಲಾರದು. ಆದರೆ ಧನವಂತರು ದೇಣಿಗೆ ನೀಡುವಂತೆ ಸ್ಫೂರ್ತಿ ನೀಡುವ ಕೌಶಲ ಇದೆ. ಇದನ್ನು ಏಕೆ ಬಳಸಿಕೊಳ್ಳಬಾರದು" ಎಂದು ವರ್ಮಾ ಪ್ರಶ್ನಿಸುತ್ತಾರೆ. ಇದುವರೆಗೆ 104 ಚುಟುಕುಗಳನ್ನು ಬರೆದ ಅವರು 10 ಲಕ್ಷ ರೂಪಾಯಿಗಿಂತಲೂ ಹೆಚ್ಚು ದೇಣಿಗೆ ಸಂಗ್ರಹಿಸಿದ್ದಾರೆ.

ಅಂಬಾ ಸಾಲೇಕರ್ ಎಂಬ ಚೆನ್ನೈ ವಕೀಲೆ ದಾನಿಗಳಿಗೆ ಉಚಿತ ಕಾನೂನು ನೆರವು ನೀಡಲು ಮುಂದಾಗಿದ್ದಾರೆ. 10 ಕಂಪನಿಗಳು ಈಗಾಗಲೇ ಬೇಡಿಕೆ ಮುಂದಿಟ್ಟಿವೆ.

ವಿನ್ಯಾಸ ಮತ್ತು ತಂತ್ರಜ್ಞಾನ ಕಂಪನಿ ನಡೆಸುತ್ತಿರುವ ಹಿಮಾಂಶು ಖನ್ನಾ ಎಂಬುವವರು ಉಚಿತ ಸಲಹಾ ಸೇವೆ ನೀಡುತ್ತಿದ್ದಾರೆ. ತಲಾ 10 ಸಾವಿರ ರೂಪಾಯಿ ದೇಣಿಗೆ ನೀಡಿದವರಿಗೆ ಉಚಿತ ಸೇವೆ ಲಭ್ಯ. ಈಗಾಗಲೇ 14 ಮನವಿಗಳನ್ನು ಅವರು ಸ್ವೀಕರಿಸಿದ್ದಾರೆ. 10 ಸಾವಿರ ದೇಣಿಗೆ ನೀಡುವವರ ಕೃತಿಗಳನ್ನು ಉಚಿತವಾಗಿ ಎಡಿಟ್ ಮಾಡಿಕೊಡಲು ಪತ್ರಕರ್ತ ಪ್ರೇಮ್ ಪಣಿಕ್ಕರ್ ಮುಂದಾಗಿದ್ದಾರೆ. ಇವರು ಈಗಾಗಲೇ 3.6 ಲಕ್ಷ ರೂಪಾಯಿಯ ರಸೀದಿ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News