ಕೇರಳದ ಜನತೆಗೆ ದೇಶದ ಎಲ್ಲರ ನೆರವು : ಪ್ರಧಾನಿ ಮೋದಿ

Update: 2018-08-26 07:08 GMT

 ಹೊಸದಿಲ್ಲಿ, ಆ.26: ಭಾರೀ ಮಳೆ ಹಾಗೂ ಜಲಪ್ರಳಯದಿಂದ  ತತ್ತರಿಸಿರುವ ಕೇರಳದ   ಜನತೆಗೆ ದೇಶದ ಎಲ್ಲರೂ ನೆರವು ನೀಡುತ್ತಿದ್ದಾರೆ. ಇಡೀ ದೇಶ ಕೇರಳ ರಾಜ್ಯದ ಜನರ ದು:ಖವನ್ನು ನಿವಾರಿಸಲು ಸಜ್ಜಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.. 
47ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ  ಕೇರಳದಲ್ಲಿ ಪರಿಹಾರ ಕಾರ್ಯಾಚರಣೆ ಸುಗಮವಾಗಿ ನಡೆಯುತ್ತಿದೆ ಎಂದ ಅವರು ಮಳೆ, ಜಳಪ್ರಳಯದಿಂದ ಬಲಿಯಾದವರಿಗೆ  ಸಂತಾಪ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ  ಇದೇ ಸಂದರ್ಭದಲ್ಲಿ ದೇಶದ ಜನತೆಗೆ ರಕ್ಷಾಬಂಧನ , ಸಂಕ್ರಾತಿ ದಿನದ ಶುಭ ಹಾರೈಸಿದರು.

ಮಾಜಿ ಪ್ರಧಾನಿ ದಿವಂಗತ  ಅಟಲ್ ಬಿಹಾರಿ ವಾಜಪೇಯಿ  ಭಾರತದ ರಾಜಕೀಯ ಸಂಸ್ಕೃತಿಯಲ್ಲಿ ಬಹಳ ವಿಭಿನ್ನ ಮತ್ತು ಧನಾತ್ಮಕ ಬದಲಾವಣೆ ತಂದರು. ಅವರು ಸಮಾಜದ ಎಲ್ಲ ವಿಭಾಗಗಳಿಂದ ಗೌರವ ಪಡೆದಿದ್ದಾರೆ "ಎಂದರು.

ಸಂಸತ್ತಿನ ಮಳೆಗಾಲದ ಅಧಿವೇಶನ ಯಶಸ್ವಿಯಾಗಿದೆ. "ಇದು ಸಾಮಾಜಿಕ ನ್ಯಾಯ ಮತ್ತು ಯುವ ಕಲ್ಯಾಣಕ್ಕೆ ಮೀಸಲಾದ ಅಧಿವೇಶನವಾಗಿತ್ತು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳ ಹಕ್ಕುಗಳನ್ನು ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ. " ಎಂದು ಅಭಿಪ್ರಾಯಪಟ್ಟರು.

ತ್ರಿವಳಿ ತಲಾಖ್ ವಿಚಾರದಲ್ಲಿ  ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ .ತ್ರಿವಳಿ ತಲಾಖ್ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು ಆದರೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಲಿಲ್ಲ. ಮುಸ್ಲಿಮ್ ಮಹಿಳೆಯರು  ನ್ಯಾಯ ಪಡೆಯುತ್ತಾರೆ  ಎಂಬ ವಿಶ್ವಾಸ ತಮಗಿದೆ ಎಂದರು.

ಮಹಿಳೆಯರ ಮೇಲಿನ ದೌರ್ಜನ್ಯವನ್ನು  ಭಾರತ ತಡೆದುಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಸಂಸತ್ತು ಅತ್ಯಾಚಾರಕ್ಕೆ ಸಂಬಂಧಿಸಿ  ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ.   ಮಕ್ಕಳ ಮೇಲೆ  ಅತ್ಯಾಚಾರ  ದೌರ್ಜನ್ಯವೆಸಗುವವರಿಗೆ ಮರಣದಂಡನೆ ವಿಧಿಸುವ  ಕಠಿಣ ಶಿಕ್ಷೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸೂಕ್ತ  ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಇಂಡೋನೇಶ್ಯಾದಲ್ಲಿ ನಡೆಯುತ್ತಿರುವ  ಏಶ್ಯನ್  ಗೇಮ್ಸ್ ನಲ್ಲಿ  ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ  ಮೋದಿ ಅಭಿನಂದಿಸಿದ್ದಾರೆ. ಭಾರತದ ಕ್ರೀಡಾಪಟುಗಳು  ಕಳೆದ 7 ದಿನಗಳಲ್ಲಿ  7 ಚಿನ್ನ, 5 ಬೆಳ್ಳಿ ಮತ್ತು 17 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News