ಶತಮಾನದಲ್ಲೇ ಅತ್ಯಧಿಕ ತಾಪಮಾನಕ್ಕೆ ಯೂರೋಪ್ ರೈತರು ಕಂಗಾಲು; ಜಾನುವಾರುಗಳಿಗೆ ತಿನ್ನಲು ಮೇವೂ ಇಲ್ಲ

Update: 2018-08-26 17:07 GMT

ಫ್ರಾನ್ಸ್, ಆ.26: ಉತ್ತರ ಯೂರೋಪ್‌ನಲ್ಲಿ ಶತಮಾನದಲ್ಲೇ ಅತ್ಯಧಿಕ ತಾಪಮಾನದಿಂದ ರೈತರು ಕಂಗಾಲಾಗಿದ್ದು ಜಾನುವಾರುಗಳಿಗೆ ಮೇವಿಲ್ಲದೆ ಸಾವನ್ನಪ್ಪುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಲೇ ಜಾನುವಾರುಗಳಿಗೆ ತಿನ್ನಲು ಆಹಾರ ಸಿಗದಿದ್ದರೆ ಇನ್ನು ಚಳಿಗಾಲದ ಪರಿಸ್ಥಿತಿ ಹೇಗಿರಬಹುದು ಎಂದು ರೈತರು ಚಿಂತೆಗೊಳಗಾಗಿದ್ದಾರೆ.

ಬೇಸಿಗೆಯಲ್ಲಿ ಅತ್ಯಧಿಕ ಉಷ್ಣಾಂಶದ ಕಾರಣ ಸ್ವೀಡನ್‌ನಲ್ಲಿ ಕಾಡ್ಗಿಚ್ಚು ಉಂಟಾಗಿ ಹುಲ್ಲುಗಾವಲುಗಳು ಮತ್ತು ಬೆಳೆಗಳನ್ನು ಆಹುತಿ ಪಡೆದುಕೊಂಡಿದೆ. ಇದರಿಂದ ಈ ಬಾರಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಶೇ.30 ಕುಸಿತ ಉಂಟಾಗುವ ನಿರೀಕ್ಷೆಯಿದೆ. ಬಹಳಷ್ಟು ರೈತರು ಚಳಿಗಾಲಕ್ಕಾಗಿ ಸಂಗ್ರಹಿಸಿಟ್ಟಿದ್ದ ಮೇವನ್ನು ಈಗಾಗಲೇ ಬಳಸಿರುವುದರಿಂದ ಮುಂದಿನ ಚಳಿಗಾಲದಲ್ಲಿ ಮೇವಿನ ತೀವ್ರ ಕೊರತೆ ಕಾಡಲಿದೆ ಎಂದು ಸ್ವೀಡನ್‌ನ ಕೃಷಿ ಮಂಡಳಿಯ ಮುಖ್ಯ ಅರ್ಥಶಾಸ್ತ್ರಜ್ಞ ಹೆರಾಲ್ಡ್ ವೆನ್ಸನ್ ತಿಳಿಸಿದ್ದಾರೆ. ಜರ್ಮನಿಯಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು ಜಾನುವಾರುಗಳನ್ನು ರೈತರು ಅನಿವಾರ್ಯವಾಗಿ ಕಸಾಯಿಖಾನೆಗೆ ಮಾರಬೇಕಾದ ಸ್ಥಿತಿ ಉದ್ಭವವಾಗಿದೆ. ಮೇವು ಬೆಳೆಯುವ ಪ್ರಮುಖ ಪ್ರದೇಶವಾದ ಸ್ಯಾಕ್ಸೊನಿಯಲ್ಲಿ ಪ್ರತಿವರ್ಷಕ್ಕಿಂತ ಈ ವರ್ಷ ಮೇವು ಉತ್ಪಾದನೆಯಲ್ಲಿ ಶೇ.40 ಕೊರತೆಯಾಗುವ ನಿರೀಕ್ಷೆಯಿದೆ. ನೆದರ್ಲ್ಯಾಂಡ್‌ನಲ್ಲೂ ಮೇವಿನ ಕೊರತೆ ಉಂಟಾಗಿದ್ದು ಪ್ರಸಕ್ತ ವರ್ಷ ಹುಲ್ಲು ಉತ್ಪಾದನೆಯಲ್ಲಿ ಶೇ.40ರಿಂದ ಶೇ.60 ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News