ವಾಯುವ್ಯ ಇರಾನ್‌ನಲ್ಲಿ ಪ್ರಬಲ ಭೂಕಂಪ: ಇಬ್ಬರು ಬಲಿ, 241 ಮಂದಿಗೆ ಗಾಯ

Update: 2018-08-26 17:10 GMT

ಟೆಹ್ರಾನ್, ಆ.26: ರವಿವಾರ ಮುಂಜಾನೆ ವಾಯುವ್ಯ ಇರಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಬ್ಬರು ಬಲಿಯಾಗಿದ್ದು 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇರಾಕ್ ಮತ್ತು ಇರಾನ್ ಗಡಿಭಾಗದಲ್ಲಿರುವ ಕೆರ್ಮನ್‌ಶಾ ಪ್ರಾಂತದ ಜವನ್‌ರುದ್ ನಗರದಲ್ಲಿ ಭೂಮಿ ಕಂಪಿಸಿರುವುದಾಗಿ ಯುಎಸ್ ಭೂಗರ್ಭಶಾಸ್ತ್ರ ಇಲಾಕೆ ತಿಳಿಸಿದೆ. ಈ ಪ್ರದೇಶದ ಸಮೀಪವೇ ಕಳೆದ ವರ್ಷ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಓರ್ವ ಗರ್ಭಿಣಿ ಮಹಿಳೆ ಹಾಗೂ 70ರ ಹರೆಯದ ವೃದ್ಧರೊಬ್ಬರು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 6.0 ತೀವ್ರತೆಯ ಭೂಕಂಪದ ನಂತರ 21 ಪಾಶ್ಚಾತ್‌ಕಂಪನಗಳು ಸಂಭವಿಸಿದ್ದವು ಎಂದು ವರದಿ ತಿಳಿಸಿದೆ. ಪೀಡಿತ ಪ್ರದೇಶಗಳಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು. ಆದರೆ ಆಹಾರ ಮತ್ತು ಟೆಂಟ್‌ಗಳನ್ನು ವಿತರಿಸುವ ಅಗತ್ಯ ಈವರೆಗೆ ಕಂಡುಬಂದಿಲ್ಲ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News