ಇತಿಹಾಸದ ಬೆಳಕು ಮಹಾತ್ಮಾ ಗಾಂಧೀಜಿ ಹಾಗೂ ಶ್ರೀನಾರಾಯಣ ಗುರು ಸಂವಾದ

Update: 2018-08-26 18:31 GMT

ಮಹಾತ್ಮಾಗಾಂಧಿಯವರು ಐದು ಬಾರಿ ಕೇರಳಕ್ಕೆ ಭೇಟಿ ನೀಡಿದ್ದರು. ಬ್ರಿಟಿಷರ ವಿರುದ್ಧದ ಅಸಹಕಾರ ಚಳವಳಿಗೆ ಬೆಂಬಲವನ್ನು ಕ್ರೋಡೀಕರಿಸಲು ಅವರು 1920ರ ಆಗಸ್ಟ್ 18ರಂದು ಕೋಝಿಕ್ಕೋಡ್‌ಗೆ ಭೇಟಿ ನೀಡಿದ್ದರು. ಇದು ಅವರು ಚೊಚ್ಚಲ ಕೇರಳ ಭೇಟಿಯಾಗಿತ್ತು. ಆನಂತರ ಅವರು 1925ರಲ್ಲಿ (ಮಾರ್ಚ್ 8-19) ವೈಕಂ ಸತ್ಯಾಗ್ರಹಕ್ಕೆ ಬೆಂಬಲವನ್ನು ನೀಡುವುದಕ್ಕಾಗಿ ಕೇರಳಕ್ಕೆ ಆಗಮಿಸಿದ್ದರು. 1927 (ಅಕ್ಟೋಬರ್ 9-15)ರಲ್ಲಿ ಅವರು ಕೇರಳಕ್ಕೆ ಮೂರನೇ ಬಾರಿ ಭೇಟಿಯಿತ್ತಿದ್ದರು. ಆಗ ಅವರು ಶ್ರೀಲಂಕಾಗೆ ತೆರಳುವ ಮುನ್ನ ಅಲ್ಲಿ ಕೆಲವು ಸಮಯ ತಂಗಿದ್ದರು. 1937(ಜ.12-21) ಅವರು ಕೇರಳಕ್ಕೆ ನಾಲ್ಕನೇ ಬಾರಿ ಆಗಮಿಸಿದ್ದಾಗ, ಮಾತೃಭೂಮಿ ದಿನಪತ್ರಿಕೆಯ ಕಚೇರಿಗೆ ಭೇಟಿ ನೀಡಿದ್ದರು. ಅವರ ಐದನೇ ಹಾಗೂ ಅಂತಿಮ ಕೇರಳ ಭೇಟಿಯು 1937(ಜನವರಿ 12-21)ರಲ್ಲಾಗಿತ್ತು. ತಿರುವಾಂಕೂರಿನ ಮಹಾರಾಜ ನವೆಂಬರ್ 12,1936ರಂದು ದಲಿತರಿಗೆ ದೇಗುಲ ಪ್ರವೇಶ ಘೋಷಣೆಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದೇ ಅವರ ಭೇಟಿಯ ಮುಖ್ಯ ಉದ್ದೇಶವಾಗಿತ್ತು. ಮಹಾತ್ಮಾ ಗಾಂಧೀಜಿಯವರು ಕೇರಳವನ್ನು ಎರಡನೇ ಬಾರಿ (1925) ಸಂದರ್ಶಿಸಿದ ಸಂದರ್ಭದಲ್ಲಿ ಶ್ರೀನಾರಾಯಣ ಗುರುಗಳನ್ನು ಅವರ ಆಶ್ರಮ (ಶಿವಗಿರಿ ಮಠ)ದಲ್ಲಿ ಭೇಟಿಯಾಗಿದ್ದರು. ಅವರ ಭೇಟಿಯ ವಿವರಗಳ ಸಂಕ್ಷಿಪ್ತ ನೋಟ ಇಲ್ಲಿದೆ.

ಗಾಂಧೀಜಿಯವರ ಭೇಟಿಯ ಮುಖ್ಯ ಉದ್ದೇಶವು ವೈಕಂ ಸತ್ಯಾಗ್ರಹಕ್ಕೆ ಶ್ರೀನಾರಾಯಣ ಗುರುಗಳ ಬೆಂಬಲವನ್ನು ಕೋರುವುದು ಹಾಗೂ ಅದರಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಭಾಷಣ ಮಾಡುವುದಾಗಿತ್ತು. ವೈಕಂ ದೇವಾಲಯದ ಸುತ್ತ ಮುತ್ತಲಿನ ಸಾರ್ವಜನಿಕ ರಸ್ತೆಗಳಿಗೆ ಹಿಂದುಳಿದ ವರ್ಗದ ಜನರ ಪ್ರವೇಶವನ್ನು ತಡೆಯುವ ಬ್ರಿಟಿಷ್ ಸರಕಾರದ ಆದೇಶವನ್ನು ವಿರೋಧಿಸಿ ಈ ಸತ್ಯಾಗ್ರಹವನ್ನು ನಡೆಸಲಾಗಿತ್ತು. ಗಾಂಧೀಜಿಯವರು ಸತ್ಯಾಗ್ರಹ ಆಶ್ರಮದಲ್ಲಿ (1925ರ ಮಾರ್ಚ್ 9, 10) ಎರಡು ದಿನಗಳನ್ನು ಕಳೆದಿದ್ದರು. ಸತ್ಯಾಗ್ರಹಕ್ಕೆ ಕಾರಣವಾದ ಸನ್ನಿವೇಶಗಳ ಬಗ್ಗೆ ಅರಿತುಕೊಂಡ ಅವರು, ಕಟ್ಟಾ ಸಂಪ್ರದಾಯವಾದಿ ಹಿಂದೂ ನಾಯಕ ಇಂದನ್‌ತುರುತ್ತು ನಂಬೂದಿರಿಯವರನ್ನು ಅವರ ನಿವಾಸದಲ್ಲಿ ಭೇಟಿ ಯಾಗಿದ್ದರು. ಮಹಾದೇವ ದೇಸಾಯಿ, ಸಿ.ರಾಜಗೋಪಾಲಾಚಾರಿ,ಮನ್ನತ್ತು ಪದ್ಮ ನಾಭನ್ ಮತ್ತಿತರರು ಗಾಂಧೀಜಿ ಜೊತೆಗಿದ್ದರು. ಮಾನವರು ಜನಿಸಿದ ಜಾತಿಗಳನ್ನು ಆಧರಿಸಿ, ಅವರನ್ನು ಮೂಲಭೂತ ಹಕ್ಕುಗಳಿಂದ ವಂಚಿತರಾಗಿಸುವುದು ಅನ್ಯಾಯ ವಾದುದೆಂದು ಗಾಂಧೀಜಿ ಅವರು ಇಂದನ್‌ತುರುತ್ತು ನಂಬೂದಿರಿ ಯವರಿಗೆ ತಿಳಿಸಿದ್ದರು. ಆದರೆ ಹಿಂದುಳಿದವರ್ಗಗಳಿಗೆ ಸ್ವಾತಂತ್ರ ನೀಡಕೂಡದೆಂಬ ತನ್ನ ನಿಲುವಿನಲ್ಲಿ ನಂಬೂದಿರಿ ಅಚಲರಾಗಿದ್ದರು.

ಇದಾದ ಬಳಿಕ ಸಭೆಯೊಂದರಲ್ಲಿ ಭಾಷಣ ಮಾಡಿದ ಗಾಂಧೀಜಿ, ‘‘ ಈ ಪುಂಡರ (ದಮನಕಾರರನ್ನು) ವಿರುದ್ಧ ನಾವು ಪ್ರತಿರೋಧವನ್ನು ತೋರಬೇಕಾಗಿದೆ’’ ಎಂದು ಅಭಿಪ್ರಾಯಿಸಿ ದರು. ಆ ಸಂಜೆ ಅವರು ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಆನಂತರ ತಿರುವನಂತಪುರಕ್ಕೆ ನಿರ್ಗಮಿಸಿದ ಅವರು,1925ರ ಮಾರ್ಚ್ 11ರಂದು ತಿರುವಾಂಕೂರಿನ ರಾಜಮಾತೆ ಸೇತುಲಕ್ಷ್ಮೀ ಬಾಯಿ ಅವರನ್ನು ಭೇಟಿ ಮಾಡಿದರು.

1925ರ ಮಾರ್ಚ್ 12ರಂದು ಶಿವಗಿರಿ ಮಠಕ್ಕೆ ಮಹಾತ್ಮಾ ಗಾಂಧೀಜಿಯವರ ಬಹುನಿರೀಕ್ಷಿತ ಭೇಟಿಯ ಸುದ್ದಿಯು ಕಾಡ್ಗಿಚ್ಚಿನಂತೆ ವ್ಯಾಪಕವಾಗಿ ಹರಡಿತ್ತು. ಇಬ್ಬರು ಮಹಾತ್ಮರ ಮಹಾನ್ ಭೇಟಿಗೆ ಸಾಕ್ಷಿಯಾಗಲು ಜನತೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಶ್ರೀ ನಾರಾಯಣಗುರುಗಳಿಗೆ ಅವರ ಅನುಯಾಯಿಯಾದ ಎಂ.ಕೆ.ಗೋವಿಂದದಾಸ್ ದಾನ ಮಾಡಿದ್ದ ಕಟ್ಟಡವನ್ನು, ಗುರುದೇವ ಹಾಗೂ ಗಾಂಧೀಜಿಯವರ ಭೇಟಿಯ ಸ್ಥಳವಾಗಿ ಆಯ್ಕೆ ಮಾಡಲಾಗಿತ್ತು. ಈ ಕಟ್ಟಡಕ್ಕೆ ಗಾಂಧಿ ಆಶ್ರಮವೆಂದು ಹೆಸರಿಡಲಾಗಿತ್ತು. ಗಾಂಧಿ ಆಶ್ರಮಕ್ಕೆ ಸಾಗುವ ದಾರಿಗೆ ಬಿಳಿ ಮರಳನ್ನು ಹಾಕಲಾಗಿತ್ತು. ಕಟ್ಟಡದೊಳಗೆ ಮೆತ್ತನೆಯ ಹಾಸಿಗೆಯನ್ನು ಹಾಸಲಾಗಿತ್ತು ಹಾಗೂ ಅತಿಥಿಗಳಿಗಾಗಿ ಖಾದಿಯಿಂದ ಅಲಂಕರಿಸಲಾದ ವಿಶೇಷ ಆಸನಗಳ ಏರ್ಪಾಡು ಮಾಡಲಾಗಿತ್ತು. ಗಾಂಧೀಜಿಯವರು ಅಲ್ಲಿಗೆ ಮಧ್ಯಾಹ್ನ 3:00 ಗಂಟೆಗೆ ತಲುಪಬೇಕಾಗಿತ್ತು. ಅವರನ್ನು ಸ್ವಾಗತಿಸಲು ಗುರುದೇವ ಅವರು ಮುಂಚಿತವಾಗಿಯೇ ಆಗಮಿಸಿದ್ದರು. ಸ್ವಲ್ಪ ಸಮಯದಲ್ಲೇ ಗಾಂಧೀಜಿಯವರು ಕಾರಿನಲ್ಲಿ ಅಲ್ಲಿಗೆ ಆಗಮಿಸಿದ್ದರು. ಸಿ.ರಾಜಗೋಪಾಲಾಚಾರಿ, ಇ.ವಿ. ರಾಮಸ್ವಾಮಿ ನಾಯ್ಕರ್, ರಾಮದಾಸ್ ಗಾಂಧಿ, ಮಹಾದೇವ ದೇಸಾಯಿ ಮತ್ತಿತರರು ಅವರೊಂದಿಗಿದ್ದರು. ಇಬ್ಬರ ನಡುವೆ ಉಭಯಕುಶಲೋಪರಿ ನಡೆದ ಬಳಿಕ ಗುರುದೇವ ಅವರ ಅನುಯಾಯಿಯೊಬ್ಬರು ಗಾಂಧೀಜಿಯವರಿಗೆ ‘ಅತಿಥಿಪೂಜೆ’ಯನ್ನು ನಿರ್ವಹಿಸಿದರು ಹಾಗೂ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಆನಂತರ ಗಾಂಧಿ ಹಾಗೂ ಗುರುದೇವ ಮಾತುಕತೆ ನಡೆಸಿದರು.

ಇಂಗ್ಲಿಷ್‌ನಲ್ಲಿ ಸಂಭಾಷಿಸಬಲ್ಲರೇ ಎಂದು ಗಾಂಧೀಜಿ ಗುರು ದೇವ ಅವರಲ್ಲಿ ವಿಚಾರಿಸಿದ್ದರು. ಆಗ ಇಲ್ಲವೆಂದು ಗುರುದೇವ ತಿಳಿಸಿದರು. ಆನಂತರ ಗುರುದೇವ ಅವರು ಸಂಸ್ಕೃತ ಬರುವುದೇ ಎಂದು ಗಾಂಧೀಜಿಯವರನ್ನು ಕೇಳಿದ್ದರು ಹಾಗೂ ಗಾಂಧೀಜಿ ಇಲ್ಲವೆಂದು ತಿಳಿಸಿದರು. ಆಗ ನ್ಯಾಯವಾದಿ ಕುಮಾರನ್ ಎಂಬವರು ದ್ವಿಭಾಷಿಯಾಗಿ ಕಾರ್ಯನಿರ್ವಹಿಸಿದರು. ಗಾಂಧೀಜಿ ಹಾಗೂ ಶ್ರೀನಾರಾಯಣ ಗುರು ಅವರ ಸಂಭಾಷಣೆಯ ವಿವರಗಳು ಹೀಗಿವೆ.

ಗಾಂಧಿ: ಹಿಂದೂ ಧರ್ಮಗ್ರಂಥಗಳಲ್ಲಿ ಅಸ್ಪಶ್ಯತೆಯ ಬಗ್ಗೆ ಯಾವುದೇ ಉಲ್ಲೇಖವಿರುವ ಬಗ್ಗೆ ಪರಮಪೂಜ್ಯರಿಗೆ ತಿಳಿದಿದೆಯೇ?.

ಗುರು: ಇಲ್ಲ.
ಗಾಂಧಿ: ಅಸ್ಪಶ್ಯತೆಯ ನಿರ್ಮೂಲನೆಗಾಗಿ ವೈಕಂನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಬಗ್ಗೆ ಪರಮಪೂಜ್ಯರಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿದೆಯೇ?.
ಗುರು: ಇಲ್ಲ.
ಗಾಂಧಿ: ಚಳವಳಿಯಲ್ಲಿ ಏನಾದರೂ ಇನ್ನೂ ಹೆಚ್ಚಿನ ಸೇರ್ಪಡೆ ಅಥವಾ ಬದಲಾವಣೆಯ ಅಗತ್ಯವಿದೆಯೆಂದು ಪರಮಪೂಜ್ಯರು ಭಾವಿಸುತ್ತಿದ್ದಾರೆಯೇ?.
ಗುರು: ಅದು ಚೆನ್ನಾಗಿಯೇ ಸಾಗುತ್ತಿದೆಯೆಂಬುದಾಗಿ ನನಗೆ ತಿಳಿದುಬಂದಿದೆ. ಯಾವುದೇ ಬದಲಾವಣೆಯ ಅಗತ್ಯವಿದೆಯೆಂದು ನನಗನಿಸುವುದಿಲ್ಲ.
ಗಾಂಧಿ: ಅಸ್ಪಶ್ಯತೆಯ ನಿರ್ಮೂಲನೆ ಹೊರತುಪಡಿಸಿ, ಹಿಂದುಳಿದ ವರ್ಗಗಳನ್ನು ಸಂಕಷ್ಟಗಳಿಂದ ವಿಮುಕ್ತಗೊಳಿಸಲು, ಇನ್ನೂ ಹೆಚ್ಚಿನ ಯಾವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆಯೆಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿದುಕೊಳ್ಳಲು ನಾನು ಬಯಸುತ್ತೇನೆ.
ಗುರು: ಅವರಿಗೆ ಶಿಕ್ಷಣ ಹಾಗೂ ಸಂಪತ್ತಿನ ಅಗತ್ಯವಿದೆ. ಅಂತರ್‌ಜಾತಿ ಸಹಭೋಜನ ಹಾಗೂ ಅಂತರ್‌ಜಾತಿ ವಿವಾಹಗಳ ತುರ್ತು ಅಗತ್ಯವಿದೆಯೆಂದು ನಾನು ಹೇಳಲಾರೆ. ಅವರಿಗೂ ಇತರರಂತೆ ಅಭಿವೃದ್ಧಿಹೊಂದಲು ಅವಕಾಶಗಳು ದೊರೆಯಬೇಕಾಗಿದೆ.
ಗಾಂಧಿ: ಅಹಿಂಸಾತ್ಮಕ ಸತ್ಯಾಗ್ರಹ ನಿಷ್ಪ್ರಯೋಜಕ ಹಾಗೂ ನಮ್ಮ ಹಕ್ಕುಗಳನ್ನು ಸ್ಥಾಪಿಸಲು ಬಲಪ್ರಯೋಗದ ಅಗತ್ಯವಿದೆಯೆಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?.
ಗುರು: ಬಲಪ್ರಯೋಗ ಉತ್ತಮವೆಂದು ನಾನು ಭಾವಿಸಲಾರೆ.
ಗಾಂಧಿ: ಹಿಂದೂ ಧರ್ಮಗ್ರಂಥಗಳು ಬಲಪ್ರಯೋಗದ ಬಳಕೆಯನ್ನು ಪ್ರತಿಪಾದಿಸುತ್ತವೆಯೇ?
ಗುರು: ರಾಜರಿಗೆ ಅದು ಅಗತ್ಯವೆಂದು ಪುರಾಣಗಳು ಬಿಂಬಿಸಿವೆ ಹಾಗೂ ಅವರು ಹಾಗೆ ಅದನ್ನು ಬಳಸಿಕೊಂಡಿದ್ದಾರೆ. ಆದಾಗ್ಯೂ, ಜನಸಾಮಾನ್ಯರ ವಿಷಯದಲ್ಲಿ ಅದು ಸಮರ್ಥನೀಯವಲ್ಲ.
ಗಾಂಧಿ: ನಾವು ಮತಾಂತರಗೊಳ್ಳಬೇಕು ಹಾಗೂ ಸ್ವಾತಂತ್ರವನ್ನು ಪಡೆಯಲು ಅದು ಸರಿಯಾದ ಮಾರ್ಗವೆಂದು ಕೆಲವರು ಹೇಳುತ್ತಾರೆ. ಅದಕ್ಕೆ ಸ್ವಾಮೀಜಿ ಅನುಮತಿ ನೀಡುತ್ತಾರೆಯೇ?
ಗುರು: ಮತಾಂತರಗೊಂಡವರು ಸ್ವಾತಂತ್ರವನ್ನು ಪಡೆದುಕೊಂಡಿದ್ದಾರೆಂಬ ಹಾಗೆ ಕಾಣಲಾಗುತ್ತದೆ. ಇದನ್ನು ನೋಡಿದರೆ, ಮತಾಂತರ ಒಳ್ಳೆಯದೆಂದು ಯೋಚಿಸುವುದಕ್ಕಾಗಿ ಜನರನ್ನು ದೂರಲು ಸಾಧ್ಯವಿಲ್ಲ.
ಗಾಂಧಿ: ಆಧ್ಯಾತ್ಮಿಕ ವಿಮೋಚನೆಗಾಗಿ ಹಿಂದೂ ಧರ್ಮ ಸಾಕೆಂದು ಸ್ವಾಮೀಜಿಯವರು ಭಾವಿಸಿದ್ದಾರೆಯೇ?
ಗುರು: ಇತರ ಧರ್ಮಗಳಲ್ಲಿಯೂ ವಿಮೋಚನೆಯ ಮಾರ್ಗಗಳಿವೆ.

ಗಾಂಧಿ: ಇತರ ಧರ್ಮಗಳ ವಿಷಯ ಹಾಗಿರಲಿ. ಆಧ್ಯಾತ್ಮಿಕ ವಿಮೋಚನೆಗೆ ಹಿಂದೂಧರ್ಮ ಧಾರಾಳ ಸಾಕೆಂಬ ಅಭಿಪ್ರಾಯವನ್ನು ಸ್ವಾಮೀಜಿ ಹೊಂದಿದ್ದಾರೆಯೇ?.
ಗುರು: ಆಧ್ಯಾತ್ಮಿಕ ವಿಮೋಚನೆಗೆ ಹಿಂದೂ ಧರ್ಮ ಸಾಕು. ಆದರೆ ಜನರು ಹೆಚ್ಚಿನ ಭೌತಿಕ ಸ್ವಾತಂತ್ರಕ್ಕಾಗಿಯೂ ಹಂಬಲಿಸುತ್ತಿದ್ದಾರೆ.
ಗಾಂಧಿ: ಆಧ್ಯಾತ್ಮಿಕ ವಿಮೋಚನೆಗಾಗಿ ಮತಾಂತರವು ಅಗತ್ಯವೆಂಬ ಬಗ್ಗೆ ಸ್ವಾಮೀಜಿಯವರ ಅಭಿಪ್ರಾಯವೇನು?.
ಗುರು: ಇಲ್ಲ. ಆಧ್ಯಾತ್ಮಿಕ ವಿಮೋಚನೆಗೆ ಮತಾಂತರದ ಅಗತ್ಯವಿಲ್ಲ.
ಗಾಂಧಿ: ನಾವು (ಅಸ್ಪಶತೆಯಿಂದ) ಭೌತಿಕ ಸ್ವಾತಂತ್ರಕ್ಕೆ ಯತ್ನಿಸುತ್ತಿಲ್ಲವೇ? ಅದು ವ್ಯರ್ಥವಾಗುತ್ತಿದೆಯೇ?.

ಗುರು: ಅದು ವ್ಯರ್ಥವಲ್ಲ. ಅದು(ಅಸ್ಪಶ್ಯತೆ) ಅಳವಾಗಿ ಬೇರೂರಿರುವ ಬಗ್ಗೆ ಯೋಚಿಸುವಾಗ, ಅದು ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಗಾಂಧೀಜಿ ಮತ್ತೊಮ್ಮೆ ಪುನರ್‌ಜನ್ಮತಾಳಬೇಕಾಗಬಹುದು.


ಗಾಂಧಿ: (ನಗುತ್ತಾ) ನನ್ನ ಜೀವಿತಾವಧಿಯಲ್ಲೇ ಅದು ಯಶಸ್ವಿಯಾಗಲಿದೆ. ಹಿಂದುಳಿದ ವರ್ಗಗಳಲ್ಲಿ ಕೂಡಾ ಅಸ್ಪಶ್ಯತೆಯಿಲ್ಲವೇ?. ಸ್ವಾಮೀಜಿಯವರ ದೇವಾಲಯಗಳನ್ನು ಪ್ರವೇಶಿಸಲು ಎಲ್ಲರಿಗೂ ಅನುಮತಿಯಿದೆಯೇ?.
ಗುರು: ಎಲ್ಲರಿಗೂ ಅನುಮತಿಯಿದೆ. ಪುಲಯ ಹಾಗೂ ಪರವ ಸಮುದಾಯಗಳಿಗೆ ಸೇರಿದ ಮಕ್ಕಳು ಕೂಡಾ ಇತರರೊಂದಿಗೆ ಶಿವಗಿರಿಯಲ್ಲಿ ವಾಸವಾಗಿದ್ದಾರೆ ಹಾಗೂ ಕಲಿಯುತ್ತಿದ್ದಾರೆ. ಇತರರೊಂದಿಗೆ ಅವರು ಪ್ರಾರ್ಥನೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.
ಗಾಂಧಿ: ಇದು ಅತ್ಯಂತ ಸಂತಸಕರ.
ಗಾಂಧೀಜಿಯವರು ಅಸ್ಪಶ್ಯತೆಗೆ ವಿರುದ್ಧವಾಗಿದ್ದರೂ, ವರ್ಣಾಶ್ರಮ ವ್ಯವಸ್ಥೆಯಲ್ಲಿ ಅವರು ನಂಬಿಕೆಯಿರಿಸಿದ್ದರು. ಒಂದೇ ಮರದಲ್ಲಿರುವ ಎಲೆಗಳ ಗಾತ್ರದಲ್ಲಿ ವಿಭಿನ್ನತೆಯಿರುವ ಉದಾಹರಣೆ ನೀಡುವ ಗಾಂಧೀಜಿ, ವಿವಿಧ ವರ್ಣಗಳು (ಜನರ ವರ್ಗಗಳು) ಸಹಜವಾಗಿ ಅಸ್ತಿತ್ವದಲ್ಲಿವೆ ಎಂದವರು ಪ್ರತಿಪಾದಿಸಿದ್ದರು. ಇದೇ ಉದಾಹರಣೆಯೊಂದಿಗೆ ಉತ್ತರಿಸಿದ ಗುರುದೇವ ಅವರು, ಎಲೆಗಳ ಗಾತ್ರ ವಿಭಿನ್ನವಾಗಿದ್ದರೂ, ಅವುಗಳ ರುಚಿ ಒಂದೇ ಆಗಿದೆಯೆಂದು ಹೇಳಿದರು. ವಿಭಿನ್ನ ಗಾತ್ರದ ಎಲೆಗಳ ಮೂಲಕ ಒಂದೇ ರೀತಿಯ ರಸ ಹರಿದುಹೋಗುವಂತೆ, ವಿಭಿನ್ನ ಜಾತಿಗಳಿಗೆ ಸೇರಿದ ಜನರು ಒಂದೇ ಸತ್ಯದ ಅಭಿವ್ಯಕ್ತಿಗಳಾಗಿದ್ದಾರೆ. ಗುರುದೇವ ಅವರ ಈ ಸರಳವಾದ ವಿವರಣೆಯು, ವರ್ಣ ವ್ಯವಸ್ಥೆಯ ಕುರಿತು ಗಾಂಧೀಜಿಯವರ ಮನಸ್ಥಿತಿಯನ್ನು ಬದಲಾಯಿಸಿತು.
ಆ ದಿನ ಗಾಂಧೀಜಿಯವರು ಶಿವಗಿರಿ ಮಠದಲ್ಲಿ ವಿಶ್ರಮಿಸಿದ್ದರು. ವೈದಿಕ ಮಠಮ್ ಅವರ ವಾಸ್ತವ್ಯಕ್ಕೆ ಏರ್ಪಾಡು ಮಾಡಿತ್ತು. ಶಾರದಾ ಮಠಂನಲ್ಲಿ ನಡೆದ ಸಂಜೆಯ ಪ್ರಾರ್ಥನೆ ಯಲ್ಲಿ ಅವರು ಭಾಗವಹಿಸಿದ್ದರು. ಆನಂತರ ಅವರು ವೈದಿಕ ಮಠದಲ್ಲಿ ನಡೆದ ಪ್ರಾರ್ಥನೆಯಲ್ಲಿಯೂ ಭಾಗವಹಿಸಿದರು. ಅಲ್ಲಿ ಅವರು ಪರಯ ಸಮುದಾಯದ ವಿದ್ಯಾರ್ಥಿಗಳು ‘ದೈವದಶಕಂ’ ಎಂಬ ಸಾರ್ವತ್ರಿಕ ಪ್ರಾರ್ಥನೆಯನ್ನು ಹಾಡುವುದನ್ನು ಕಂಡರು. ಆ ಪ್ರಾರ್ಥನೆಯ ಅರ್ಥವನ್ನು ಅವರು ಕೇಳಿ ತಿಳಿದುಕೊಂಡರು ಹಾಗೂ ಅದನ್ನು ಗುರುದೇವ ಅವರು ಸಂಯೋಜಿಸಿದ್ದರೆಂಬುದನ್ನು ತಿಳಿದು ಅವರಿಗೆ ತುಂಬಾ ಸಂತಸವಾಯಿತು. ಪ್ರಾರ್ಥನೆಯ ಬಳಿಕ ಗಾಂಧೀಜಿ ಪರಯ ಸಮುದಾಯದ ವಿದ್ಯಾರ್ಥಿಗಳ ಜೊತೆ ಮಾತನಾಡಿದರು. ಅವರು ಉಪನಿಷದ್‌ನ ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕಂಡು ಬೆರಗುಗೊಂಡರು. ಮರುದಿನ ಬೆಳಗ್ಗೆ (13 ಮಾರ್ಚ್ 1925) ಗುರುದೇವನ್ ಅವರು ಗಾಂಧೀಜಿಯವರನ್ನು ವೈದಿಕ ಮಠದಲ್ಲಿ ಭೇಟಿಯಾದರು. ಆನಂತರ ಗಾಂಧೀಜಿಯವರು ಮತ್ತೊಮ್ಮೆ ಶಾರದಾ ಮಠಮ್‌ನ್ನು ಸಂದರ್ಶಿಸಿದರು. ಶಿವಗಿರಿ ಮಠದ ಸೌಂದರ್ಯ ಹಾಗೂ ಸ್ವಚ್ಛತೆಯನ್ನು ಅವರು ಶ್ಲಾಘಿಸಿದರು. ಆ ದಿನವೂ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಗುರುದೇವ ಜೊತೆಗೆ ವೇದಿಕೆಯಲ್ಲಿ ಅಸೀನರಾದ ಗಾಂಧೀಜಿಯ ವರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ನೂಲು ತಯಾರಿಸುವಂತೆ ಹಾಗೂ ಖಾದಿ ನೇಯುವಂತೆ ಅವರು ಜನರಿಗೆ ಸಲಹೆ ನೀಡಿದರು. ಸತ್ಯಾಗ್ರಹದ ಬಗ್ಗೆಯೂ ಅವರು ಮಾತನಾಡಿದರು. ಗಾಂಧೀಜಿ ಭಾಷಣದ ಬಳಿಕ ಗುರುದೇವ ಮಾತನಾಡಿ ಗಾಂಧೀಜಿ ನೀಡಿದ ಸಲಹೆಯನ್ನು ಅನುಸರಿಸುವಂತೆ ಜನತೆಗೆ ಕರೆ ನೀಡಿದರು.
ಗಾಂಧೀಜಿಯವರ ಐತಿಹಾಸಿಕ ಭಾಷಣದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.
 ನನಗೆ ಭಾಷಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಅಪಾರ ಕೃತಜ್ಞನಾಗಿದ್ದೇನೆ. ಈ ಭೇಟಿಗಾಗಿ ನಾನು ಬಹಳಸಮಯದಿಂದ ಎದುರು ನೋಡುತ್ತಿದ್ದೇನೆಂಬುದಾಗಿ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವೈಕಂನಲ್ಲಿ ಸಾರ್ವಜನಿಕ ಅಥವಾ ಅರೆಸಾರ್ವಜನಿಕ ರಸ್ತೆಗಳಲ್ಲಿ ಪ್ರವೇಶ ನಿಷೇಧಿಸಲ್ಪಟ್ಟ ವಿಭಿನ್ನ ಸಮುದಾಯಗಳು ಯಾರೆಂಬುದನ್ನು ನಾನು ತಿಳಿಯಬಯಸಿದ್ದೆ. ಹೀಗಾಗಿ, ಈ ಬಗ್ಗೆ ಅಧ್ಯಯನ ನಡೆಸಲು ನಾನಿಲ್ಲಿಗೆ ಬಂದಿದ್ದೇನೆ ಹಾಗೂ ನಿಮ್ಮನ್ನು ವೈಯಕ್ತಿಕವಾಗಿ ಪರಿಚಯ ಮಾಡಿಕೊಂಡಿದ್ದೇನೆ. ಒಂದು ವೇಳೆ ಮಾನ್ಯ ಶ್ರೀಗಳು ವೈಕಂಗೆ ತೆರಳಿದ್ದಲ್ಲಿ ಹಾಗೂ ತಡೆಬೇಲಿಯನ್ನು ದಾಟಲು ಯತ್ನಿಸಿದಲ್ಲಿ ಅವರಿಗೆ ಏನು ಕಾದಿತ್ತೆಂಬ ಪ್ರಾತ್ಯಕ್ಷಿಕೆಯ ಪ್ರದರ್ಶನ ನನಗಾಗಿದೆ.
ನಿಮಗೆ ತಿಳಿದಿರುವಂತೆ, ನಾನು ರಾಜಮಾತೆಯವರನ್ನು ಹಾಗೂ ಮಾನ್ಯ ಶ್ರೀಗಳ( ಸ್ವಾಮಿ ನಾರಾಯಣ ಗುರು) ಭೇಟಿಗಾಗಿ ಕಾದಿದ್ದೆ. ನಿನ್ನೆ ನಾನು ಅವೆರಡನ್ನೂ ಈಡೇರಿಸಿದ್ದೇನೆ. ಈ ಉನ್ನತ ವ್ಯಕ್ತಿತ್ವಗಳನ್ನು ಭೇಟಿಯಾಗಲು ಸಾಧ್ಯವಾಗಿರುವುದಕ್ಕಾಗಿ ನನಗೆ ತುಂಬಾ ಹೆಮ್ಮೆಯಾಗಿದೆ. ಸನ್ಮಾನ್ಯ ರಾಜಮಾತೆಯವರು ಸ್ವತಃ ಈ ಬಗ್ಗೆ ಆತಂಕಗೊಂಡಿದ್ದು, ಅವರು ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿರುವವರ ಪರವಾಗಿದ್ದಾರೆಂದು ನನಗೆ ನಿಮ್ಮಲ್ಲಿ ಹೇಳಲು ಸಾಧ್ಯವಾಗಿದೆ. ವೈಕಂನ ರಸ್ತೆಗಳು ಹಾಗೂ ಎಲ್ಲೆಡೆಯೂ ಇರುವ ಅಂತಹದೇ ರಸ್ತೆಗಳು ಎಲ್ಲ ವರ್ಗಗಳಿಗೂ ಮುಕ್ತವಾಗಿರಬೇಕು. ರಾಜ್ಯದ ಮುಖ್ಯಸ್ಥೆಯಾಗಿ ತಾನು ಅಧಿಕಾರರಹಿತೆಯೆಂಬ ಭಾವನೆ ಅವರಿಗೆ ಉಂಟಾಗಿದೆ. ಜನಾಭಿಪ್ರಾಯವು ಆಕೆಯ ಬೆನ್ನಿಗಿರದೆ ಇದ್ದಲ್ಲಿ ಮತ್ತು ತಿರುವಾಂಕೂರಿನಲ್ಲಿ ಜನಾಭಿಪ್ರಾಯವು ಎಷ್ಟೇ ಸ್ಪಷ್ಟವಾಗಿದ್ದರೂ, ಅದು ಅತ್ಯಂತ ಕಾನೂನುಬದ್ಧವಾಗಿ, ಶಾಂತಿಯುತವಾಗಿ ಹಾಗೂ ಸಾಂವಿಧಾನಿಕ ರೀತಿಯಲ್ಲಿ ಸಂಘಟಿಸಲ್ಪಡದೆ ಇದ್ದಲ್ಲಿ, ತಾನು ಇಚ್ಛಿಸಿದ ಪರಿಹಾರವನ್ನು ಒದಗಿಸಲು ತನಗೆ ಸಾಧ್ಯವಾಗದೆಂಬ ಭಾವನೆ ಅವರಿಗಾಗಿದೆ. ನನ್ನ ಕಡೆಯಿಂದ ಅವರ ನಿಲುವನ್ನು ನಾನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ. ಇದಕ್ಕಿರುವ ಕುರುಡು ಸಂಪ್ರದಾಯವಾದದ ವಿರೋಧವನ್ನು ಮುರಿಯುವಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸದೆ ಇದ್ದಲ್ಲಿ ಸ್ವಾತಂತ್ರ ಹಾಗೂ ವಿಮೋಚನೆಯ ಪ್ರಕಾಶದ ಅನುಭವವನ್ನು ನೀವು ಪಡೆಯಲಾರಿರಿ.


 ಇದೊಂದು ದೀರ್ಘಕಾಲದ ಸಮರವೆಂಬುದಾಗಿ ಭಯಪಡದಿರಿ. ನಮ್ಮ ಜೀವಿತಾವಧಿಯಲ್ಲಿ, ಈ ತಲೆಮಾರಿನಲ್ಲಿ ಈ ಯಾತನೆ (ಜಾತಿಭೇದ) ಕೊನೆಗೊಳ್ಳುವುದನ್ನು ನಾವು ಕಾಣಲಾರೆವು ಮತ್ತು ಈ ಯಾತನೆ ಕೊನೆಗೊಳ್ಳುವುದನ್ನು ನೋಡುವ ಆನಂದವನ್ನು ಪಡೆಯಲು ನಾನು ಇನ್ನೊಂದು ಜನ್ಮಕ್ಕಾಗಿ ಕಾಯಬೇಕೆಂದು ಪರಮಪೂಜ್ಯರು ನಿನ್ನೆ ನನ್ನಲ್ಲಿ ಹೇಳಿದ್ದರು. ನಾನು ಗೌರವಯುತವಾಗಿ ಆ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದೇನೆ. ಇದನ್ನು ನನ್ನ ಜೀವಿತಾವಧಿಯಲ್ಲೇ, ಅತ್ಯಂತ ಬೇಗದಲ್ಲೇ ಕಾಣುವೆನೆಂಬ ಆಶಾವಾದವನ್ನು ಹೊಂದಿದ್ದೇನೆ. ಆದರೆ ನಿಮ್ಮ ಸಹಕಾರವಿಲ್ಲದೆ ಅದು ಅದು ಸಾಧ್ಯವಾಗುವುದೆಂಬ ಭರವಸೆಯನ್ನು ನಾನು ಹೊಂದಿಲ್ಲ. ಈ ಪ್ರಮಾದವು ಭೂತಕಾಲದ ವಿಷಯವಾಗುವುದನ್ನು ತೋರಿಸಲು, ನಿಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ನನಗೆ ನೆರವಾಗಿ. ನಿಮ್ಮ ಕರ್ತವ್ಯವನ್ನು ಪುರುಷಾ ರ್ಥದೊಂದಿಗೆ ನಿರ್ವಹಿಸಿ ಹಾಗೂ ಹಿಂದೂಧರ್ಮದಿಂದ ಪಂಚಮವರ್ಣವನ್ನು ಸಂಪೂರ್ಣವಾಗಿ ತೊಡೆದುಹಾಕುವುದನ್ನು ತೋರಿಸುವ ಹೊಣೆಯನ್ನು ನಾನು ವಹಿಸಿಕೊಳ್ಳುತ್ತೇನೆ (ಹರ್ಷೋದ್ಘಾರ). ನಿಮಗೆ ಸಮರ್ಪಕವಾದ ಅರಿವನ್ನು ನೀಡುವ ದೃಢನಿರ್ಧಾರ ಹಾಗೂ ಶಕ್ತಿಯನ್ನು ಭಗವಂತನು ಪರಮಪೂಜ್ಯರಿಗೆ ನೀಡಲಿ ಹಾಗೂ ಈ ಪವಿತ್ರವಾದ ಕಾರ್ಯವನ್ನು ಮುನ್ನಡೆಸಲು ದೇವರು ನಿಮಗೆ ವಿವೇಕ ಹಾಗೂ ಬಲವನ್ನು ನೀಡಲಿ.
ನನಗೆ ತೋರಿಸಿದ ಸಹೃದಯತೆ ಹಾಗೂ ಆತಿಥ್ಯಕ್ಕಾಗಿ ನನ್ನ ಕೃತಜ್ಞತೆಗಳನ್ನು ಪರಮಪೂಜ್ಯರಿಗೆ ಬಹಿರಂಗವಾಗಿ ಅರ್ಪಿಸುತ್ತೇನೆ. ನನಗೆ ಭಾಷಣ ಮಾಡಲು ಅವಕಾಶ ನೀಡಿದ್ದಕ್ಕಾಗಿ ಹಾಗೂ ನನ್ನ ಭಾಷಣವನ್ನು ತಾಳ್ಮೆಯಿಂದ ಆಲಿಸಿದ್ದಕ್ಕಾಗಿ ನಾನು ಮಗದೊಮ್ಮೆ ನಿಮಗೆ ಕೃತಜ್ಞತೆಗಳನ್ನು ಅರ್ಪಿಸಲು ಬಯಸುತ್ತೇನೆ. ಆದರೆ ನೀವು ಏನನ್ನು ಆಲಿಸಿದ್ದೀರೋ ಅದನ್ನು ಕಾರ್ಯರೂಪಕ್ಕಿಳಿಸುವುದು ನೀವು ನನಗೆ ನೀಡುವ ಶ್ರೇಷ್ಠ ಬಹುಮಾನವಾಗಿದೆ.
(ಪ್ರೇಕ್ಷಕರಿಂದ ಜೋರಾಗಿ ಹರ್ಷೋದ್ಘಾರ)
ಕೆಲಹೊತ್ತಿನ ಬಳಿಕ ಗಾಂಧೀಜಿಯವರು ಆಶ್ರಮದಿಂದ ನಿರ್ಗಮಿಸಲು ಸಿದ್ಧರಾದರು. ಗುರುದೇವ ಅವರು ಗಾಂಧೀಜಿಯವರೊಂದಿಗೆ ಅವರ ಕಾರಿನವರೆಗೂ ನಡೆದುಬಂದರು. ಮತ್ತೊಮ್ಮೆ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡ ಬಳಿಕ ಗಾಂಧಿ ನಿರ್ಗಮಿಸಿದರು. ಆನಂತರ ತಿರುವನಂತಪುರದಲ್ಲಿ ಮಾತನಾಡಿದ ಗಾಂಧೀಜಿ ಯವರು ಆಶ್ರಮಕ್ಕೆ ಭೇಟಿ ನೀಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಸುಂದರವಾದ ತಿರುವಾಂಕೂರು ರಾಜ್ಯಕ್ಕೆ ಭೇಟಿ ನೀಡಿರುವುದು ಹಾಗೂ ಶ್ರೀನಾರಾಯಣ ಗುರುಗಳಂತಹ ಪೂಜನೀಯ ಋಷಿಗಳ ದರ್ಶನ ಪಡೆದಿರುವುದು ನನ್ನ ಜೀವನದ ಅತಿ ದೊಡ್ಡ ಸೌಭಾಗ್ಯವಾಗಿದೆ. ಅವರ ಆಶ್ರಮದಲ್ಲಿ ಒಂದು ದಿನ ತಂಗುವ ಅದೃಷ್ಟ ನನ್ನದಾಯಿತು. ಗುರುಸ್ವಾಮಿಯವರ ದೊಡ್ಡತನದ ಕುರಿತು ರಾಜಮಾತೆ ಕೂಡಾ ನನ್ನಲ್ಲಿ ಮಾತನಾಡಿದ್ದರು. ಅವರ ಉದಾತ್ತ ಆದರ್ಶಗಳನ್ನು ನೀವು ಅನುಷ್ಠಾನಗೊಳಿಸುವಿರೆಂದು ನಾನು ಅಪಾರವಾಗಿ ಆಶಿಸುತ್ತೇನೆ.

ಕೃಪೆ: krishnayanam.wordpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ