ಫ್ಲೋರಿಡಾ ಮಾಲ್‌ನಲ್ಲಿ ಗುಂಡಿನ ದಾಳಿ: ಮೂರು ಬಲಿ

Update: 2018-08-27 04:01 GMT

ವಾಷಿಂಗ್ಟನ್, ಆ. 27: ವಿಶ್ವದ ಎಲ್ಲೆಡೆಯ ವೃತ್ತಿಪರ ಆಟಗಾರರನ್ನು ಆಕರ್ಷಿಸಿದ್ದ ವೀಡಿಯೊ ಗೇಮ್ ಟೂರ್ನಿಯ ವೇಳೆ ಫ್ಲೊರಿಡಾದಲ್ಲಿ ಆಗಂತುಕನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಇತರ 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ದಾಳಿಕೋರನೂ ಸೇರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಫ್ಲೋರಿಡಾದ ಜನಪ್ರಿಯ ವಾಟರ್‌ಫ್ರಂಟ್ ಶಾಪಿಂಗ್ ಆ್ಯಂಡ್ ಡೈನಿಂಗ್ ತಾಣವಾದ ಜಾಕ್ಸಲ್‌ವಿಲ್ಲೆ ಲ್ಯಾಂಡಿಂಗ್‌ನಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಎನ್‌ಎಫ್‌ಎಲ್ 19 ಸ್ಪರ್ಧೆಯ ವೇಳೆ ಈ ದಾಳಿ ನಡೆದಿದೆ.

ರವಿವಾರ ಮಧ್ಯಾಹ್ನ 1.34ರ ವೇಳೆಗೆ ಟೂರ್ನಿ ನಡೆಯುತ್ತಿದ್ದ ಚಿಕಾಗೋ ಫಿಜ್ಝಾ ಮಾಲ್‌ನಲ್ಲಿ ಶೂಟಿಂಗ್ ನಡೆದಿದೆ ಎಂದು ಪೊಲೀಸರಿಗೆ ದೂರವಾಣಿ ಕರೆ ಬಂದ ತಕ್ಷಣ ಸ್ಥಳಕ್ಕೆ ಪೊಲೀಸ್ ಪಡೆ ಧಾವಿಸಿತ್ತು. ಸ್ಥಳದಲ್ಲೇ ಮೂವರು ಮೃತಪಟ್ಟಿರುವುದು ಕಂಡುಬಂತು ಎಂದು ಜಾಕ್ಸನ್‌ವಿಲ್ಲೆ ಕೌಂಟಿ ಶ್ರಾಫ್ ಮೈಕ್ ವಿಲಿಯಂ ಹೇಳಿದ್ದಾರೆ.

ಅವರಲ್ಲಿ ದಾಳಿ ಮಾಡಿದ ವ್ಯಕ್ತಿ ಕೂಡಾ ಸೇರಿದ್ದಾನೆ. ಈತ ಬಾಲ್ಟಿಮೋರ್‌ನವನಾಗಿದ್ದು, ಸುಮಾರು 24 ವರ್ಷ ವಯಸ್ಸಿವ ಎಂದು ಪೊಲೀಸರು ಹೇಳಿದ್ದಾರೆ. 11 ಮಂದಿ ಗಾಯಾಳುಗಳನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಒಂಬತ್ತು ಮಂದಿಗೆ ಗುಂಡೇಟಿನ ಗಾಯಗಳಾಗಿದ್ದು, ಇತರ ಇಬ್ಬರು ಅಲ್ಲಿಂದ ಓಡುವ ಪ್ರಯತ್ನದಲ್ಲಿದ್ದಾಗ ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದವರ ಪೈಕಿಯೇ ಒಬ್ಬ ಈ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿಯಬೇಕಿದೆ. 177 ಮಂದಿ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News