ಸೆರೆನಾ ವಿಲಿಯಮ್ಸ್ ರ ಕಪ್ಪು ಬಣ್ಣದ ಬಾಡಿ ಸೂಟ್ ಗೆ ನಿಷೇಧ ಹೇರಿದ ಫ್ರೆಂಚ್ ಟೆನಿಸ್ ಫೆಡರೇಶನ್

Update: 2018-08-27 10:10 GMT

ಹೊಸದಿಲ್ಲಿ, ಆ. 27: ಖ್ಯಾತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಪಂದ್ಯಾವಳಿ ವೇಳೆ ತಮ್ಮ ಶಕ್ತಿಶಾಲಿ ಕಪ್ಪು ಬಣ್ಣದ ಕ್ಯಾಟ್ ಸೂಟ್ ಧರಿಸುವ ಹಾಗಿಲ್ಲ.

ಫ್ರೆಂಚ್ ಟೆನಿಸ್ ಫೆಡರೇಶನ್ ಜಾರಿಗೊಳಿಸಲಿರುವ ಹೊಸ ವಸ್ತ್ರ ಸಂಹಿತೆ ಅವರನ್ನು ಈ ಬಾಡಿ ಸೂಟ್ ಧರಿಸುವುದನ್ನು ತಡೆಯುತ್ತದೆ. ಸೆರೆನಾ ಅವರು ಈ ವರ್ಷದ ಮೇ ತಿಂಗಳಲ್ಲಿ ರಾಲೆಂಡ್ ಗ್ಯಾರೋಸ್ ನಲ್ಲಿ ಧರಿಸಿದ್ದ ಈ ಬಾಡಿ ಸೂಟ್ ಬಗ್ಗೆ ಪ್ರತಿಕ್ರಿಯಿಸಿದ ಫೆಡರೇಶನ್ ಅಧ್ಯಕ್ಷ ಬರ್ನಾರ್ಡ್ ಗಿಯುಡಿಸಿಲ್ಲಿ ‘‘ಅದು ಇನ್ನು ಮುಂದೆ ಸ್ವೀಕಾರಾರ್ಹವಾಗದು’’ ಎಂದಿದ್ದಾರೆ. ‘‘ಕೆಲವೊಮ್ಮೆ ನಾವು ತುಂಬಾ ದೂರ ಹೋಗಿದ್ದೇವೆ ಎಂದು ನನಗನಿಸುತ್ತದೆ. ನಾವು ಆಟವನ್ನು ಹಾಗೂ ಜಾಗವನ್ನು ಗೌರವಿಸಬೇಕಿದೆ,’’ ಎಂದೂ ಅವರು ಹೇಳಿದ್ದಾರೆ.

ಈ ಬಾಡಿ ಸೂಟ್ ತಮಗೆ ‘ಸೂಪರ್ ಹೀರೋ’ ತರಹದ ಭಾವನೆಯನ್ನು ನೀಡುತ್ತಿದೆ ಎಂದು 23 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಸೆರೆನಾ ಹೇಳಿದ್ದಾರೆ. ಈ ಕ್ಯಾಟ್ ಸೂಟ್ ಆನ್ನು ಖ್ಯಾತ ಕಂಪೆನಿ ನೈಕ್ ತಯಾರಿಸಿದ್ದು ಸೆರೆನಾ ಎದುರಿಸುತ್ತಿರುವ ರಕ್ತ ಹೆಪ್ಪುಗಟ್ಟುವಿಕೆ (ಪಲ್ಮನರಿ ಎಂಬಾಲಿಸಂ) ಸಮಸ್ಯೆಯನ್ನು ನಿಭಾಯಿಸಲು ಇದನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ಆಕೆಗೆ ಮಗು ಜನಿಸಿದ ನಂತರ ಈ ಸಮಸ್ಯೆ ಒಮ್ಮೆ ಆಕೆಗೆ ಬಹಳ ಅಪಾಯವೊಡ್ಡಿತ್ತು.

ಫ್ರೆಂಚ್ ಟೆನ್ನಿಸ್ ಫೆಡರೇಶನ್ನಿನ ನಿರ್ಣಯ ಜಗತ್ತಿನಾದ್ಯಂತ ಟೆನಿಸ್ ಪ್ರೇಮಿಗಳಲ್ಲಿ ಆಕ್ರೋಶ ಮೂಡಿಸಿದ್ದು ಸಾಮಾಜಿಕ ಜಾಲತಾಣ ಪೋಸ್ಟ್ ಗಳ ಮೂಲಕ ಜನರು ತಮ್ಮ ಅಸಮಾಧಾನವನ್ನು ಹೊರಗೆಡಹುತ್ತಿದ್ದಾರೆ.

ಸೆರೆನಾರ ಬಾಡಿ ಸೂಟ್ ತಯಾರಿಸಿದ್ದ ನೈಕ್ ಸಂಸ್ಥೆ ಕೂಡ ಆಕೆಯ ಬೆಂಬಲಕ್ಕೆ ನಿಂತು ಫೆಡರೇಶನ್ ನ ವಸ್ತ್ರ ಸಂಹಿತೆಯನ್ನು ಟೀಕಿಸಿದೆ. 

‘‘ನೀವು ಆಕೆಯ ಕಾಸ್ಟ್ಯೂಂನಲ್ಲಿನ ಸೂಪರ್ ಹೀರೋವನ್ನು ತೆಗೆದು ಹಾಕಬಹುದು ಆದರೆ ಆಕೆಯಲ್ಲಿರುವ ಸೂಪರ್ ಪವರ್ ತೆಗೆಯಲು ಸಾಧ್ಯವಿಲ್ಲ,’’ ಎಂದು ನೈಕ್ ಖಾರವಾಗಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News