‘ಬಹಳ ಚೆನ್ನಾಗಿದೆ’: ಕೇರಳದ ಆಲಪ್ಪುಳ ಪರಿಹಾರ ಕೇಂದ್ರಕ್ಕೆ ‘ಯುನಿಸೆಫ್’ ಶ್ಲಾಘನೆ

Update: 2018-08-27 10:35 GMT

ತಿರುವನಂತಪುರಂ, ಆ.27: ಯುನಿಸೆಫ್ ನ ತ್ರಿಸದಸ್ಯ ಸಮಿತಿಯೊಂದು ನ್ಯೂಯಾರ್ಕ್ ನಿಂದ ಆಗಮಿಸಿ ಕಳೆದ ಶುಕ್ರವಾರ  ಕೇರಳದ ಪ್ರವಾಹ ಪೀಡಿತ ಆಲಪ್ಪುಳ ಜಿಲ್ಲೆಯ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದೆ. ನಂತರ ಕೇರಳ ಸರಕಾರ ಹಾಗೂ ಜಿಲ್ಲಾಡಳಿತವು ನಡೆಸಿದ ಪರಿಹಾರ ಕಾರ್ಯಾಚರಣೆ ಹಾಗೂ ಶಿಬಿರದಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ.

ನೆರೆ ಪೀಡಿತ ಪರಿಹಾರ ಶಿಬಿರಗಳಲ್ಲಿ ಸ್ವಚ್ಛತೆ, ಸಂತ್ರಸ್ತರಿಗೆ ಒದಗಿಸಲಾಗುವ ಆಹಾರದ ಗುಣಮಟ್ಟ, ಸುರಕ್ಷತೆ ಮತ್ತು ತ್ಯಾಜ್ಯ ನಿರ್ವಹಣೆಯ ಅಂಶಗಳನ್ನು ತಂಡ ಪರಿಶೀಲಿಸಿತ್ತು. ತಂಡ ಭೇಟಿ ನೀಡಿದ ಒಂದು ಪರಿಹಾರ ಶಿಬಿರ ಆಲಪ್ಪುಳದ ಎಸ್ ಎನ್ ಕಾಲೇಜಿನಲ್ಲಿತ್ತು.

ಯುನಿಸೆಫ್ ನ ಎಮರ್ಜನ್ಸಿ ಅಧಿಕಾರಿ ಬಂಕು ಬಿಹಾರಿ ಸರ್ಕಾರ್  ಅವರು ಈ ತ್ರಿಸದಸ್ಯ ತಂಡದಲ್ಲಿ ಒಬ್ಬರಾಗಿದ್ದರಲ್ಲದೆ ಎಸ್ ಎನ್ ಕಾಲೇಜಿನ ಪರಿಹಾರ ಶಿಬಿರದಲ್ಲಿದ್ದ ಸಂದರ್ಶಕರ ಡೈರಿಯಲ್ಲಿ ‘ಇದು ತಾನು 20 ವರ್ಷಗಳ ವೃತ್ತಿ ಜೀವನದಲ್ಲಿ ಕಂಡ ಅತ್ಯುತ್ತಮ ಪರಿಹಾರ ಶಿಬಿರ’ ಎಂದು ವಿವರಿಸಿದ್ದಾರೆ.

``ಎಲ್ಲವೂ ಸ್ವಚ್ಛವಾಗಿದೆ, ಉತ್ತಮ ಆಹಾರ ನೀಡಲಾಗುತ್ತಿದೆ, ಆರೋಗ್ಯ ಸೇವೆ, ಸುರಕ್ಷತೆ ಮತ್ತು ಭದ್ರತೆಯೂ ಉತ್ತಮವಾಗಿದೆ. ಶಿಬಿರದಲ್ಲಿರುವವರಿಗೂ ಖುಷಿಯಾಗಿದೆ,'' ಎಂದು ಅವರು ಡೈರಿಯಲ್ಲಿ ಬರೆದಿದ್ದಾರೆ.

``ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇದನ್ನು ಎಲ್ಲರ ಬಳಿಯೂ ಶೇರ್ ಮಾಡಿದರೆ ಕೇರಳದಿಂದ ಇತರರೂ ಕಲಿಯಬಹುದು. ನನಗಂತೂ ಖುಷಿಯಾಗಿದೆ,'' ಎಂದೂ ಅವರು ಬರೆದಿದ್ದಾರೆ.

ಸರ್ಕಾರ್ ಅವರು ಸಂದರ್ಶಕರ ಡೈರಿಯಲ್ಲಿ ಬರೆದಿರುವ ಪುಟದ ಚಿತ್ರವನ್ನು ಆಲಪ್ಪುಳ ಜಿಲ್ಲಾ ಕಲೆಕ್ಟರ್ ಎಸ್ ಸುಹಾಸ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಅಲಪ್ಪುಳದಲ್ಲಿನ 668 ಪರಿಹಾರ ಶಿಬಿರಗಳಲ್ಲಿ  78,231 ಕುಟುಂಬಗಳ 2,85,904 ಜನರಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News