ನಿಮ್ಮ ಕೈಬೆರಳುಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯದ ಭವಿಷ್ಯವನ್ನು ಹೇಳುತ್ತವೆ

Update: 2018-08-27 11:40 GMT

ನಿರ್ದಿಷ್ಟ ಕಾರಣಗಳನ್ನು ಹೇಳಲು ಅಸಾಧ್ಯವಾಗಿರುವ ರೋಗಗಳಲ್ಲಿ ಕ್ಯಾನ್ಸರ್ ಪ್ರಮುಖವಾಗಿದೆ. ಈ ರೋಗಕ್ಕೆ ಹಲವಾರು ಕಾರಣಗಳಿರಬಹುದು ಮತ್ತು ವ್ಯಕ್ತಿಯ ಲಿಂಗ,ವಯಸ್ಸು,ಕ್ಯಾನ್ಸರ್‌ನ ವಿಧ,ಜೀವನಶೈಲಿ,ಆರೋಗ್ಯದ ಇತಿಹಾಸದಂತಹ ಹಲವಾರು ಅಂಶಗಳನ್ನು ಈ ರೋಗವು ಅವಲಂಬಿಸಿರುತ್ತದೆ.

ಕ್ಯಾನ್ಸರ್ ಕರುಳು,ಶ್ವಾಸಕೋಶ,ಮಿದುಳು,ಮೂತ್ರಪಿಂಡ,ಮೂಳೆ,ರಕ್ತ ಸೇರಿದಂತೆ ಶರೀರದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಒಂದು ವಿಧವಾಗಿದ್ದು,ಇದು ಪುರುಷರನ್ನು ಕಾಡುತ್ತದೆ. ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಪ್ರಾಸ್ಟೇಟ್ ಗ್ರಂಥಿಯು ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರಾಸ್ಟೇಟ್ ಗ್ರಂಥಿಯ ಗಾತ್ರ ದೊಡ್ಡದಾದಾಗ ಮತ್ತು ಕ್ಯಾನ್ಸರ್ ಕೋಶಗಳು ಹೆಚ್ಚುತ್ತಿದ್ದರೆ ಅದು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಆರಂಭದ ಹಂತಗಳಲ್ಲಿ ಪತ್ತೆಯಾದರೆ ಪ್ರಾಸ್ಟೇಟ್ ಕ್ಯಾನ್ಸರ್‌ನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು. ಆದರೆ ಕೊನೆಯ ಹಂತಗಳಲ್ಲಿ ರೋಗ ಪತ್ತೆಯಾದರೆ ಚಿಕಿತ್ಸೆ ಕಷ್ಟವಾಗುತ್ತದೆ ಮತ್ತು ರೋಗಿಯು ಸಾಯಬಹುದು.

ಪದೇಪದೇ ಮೂತ್ರವಿಸರ್ಜನೆಯ ತುಡಿತ,ಮೂತ್ರವಿಸರ್ಜನೆಯನ್ನು ಆರಂಭಿಸುವುದಕ್ಕೆ ಮತ್ತು ನಿಲ್ಲಿಸುವುದಕ್ಕೆ ಕಷ್ಟ,ಮೂತ್ರವಿಸರ್ಜನೆ ಮಾಡುವಾಗ ನೋವು,ಮೂತ್ರದಲ್ಲಿ ರಕ್ತ ಇತ್ಯಾದಿಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣಗಳಾಗಿವೆ.

ಬೆರಳುಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೇಗೆ ಸೂಚಿಸುತ್ತವೆ?

  ತಮ್ಮ ಉಂಗುರ ಬೆರಳಿಗಿಂತ ತೋರುಬೆರಳು ಉದ್ದವಾಗಿರುವವರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ. ಇದಕ್ಕಾಗಿ 1,500ಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಸಂಶೋಧನೆಯು ಬಹಿರಂಗಗೊಳಿಸಿರುವ ಅಂಶವು ವಿಲಕ್ಷಣವೆನ್ನಿಸಬಹುದು,ಆದರೆ ಉಂಗುರ ಬೆರಳಿಗಿಂತ ಉದ್ದ ತೋರುಬೆರಳನ್ನು ಹೊಂದಿರುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆ ಶೇ.33ರಷ್ಟು ಹೆಚ್ಚು ಎನ್ನುವುದು ಮಾತ್ರ ನಿಜ.

ಇದಕ್ಕೆ ಹಾಕ್ಸ್ ಜೀನ್ ಅಥವಾ ವಂಶವಾಹಿಗಳು ಕಾರಣವಾಗಿರಬಹುದು ಎನ್ನುತ್ತಾರೆ ಸಂಶೋಧಕರು. ಈ ಜೀನ್‌ಗಳು ಅಂಗಾಂಗಗಳು ಮತ್ತು ಬೆರಳುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಲ್ಲಿ ಹಾಕ್ಸ್ ವಂಶವಾಹಿಗಳು ಅಸಮ ಪ್ರಮಾಣದಲ್ಲಿರುತ್ತವೆ ಎನ್ನುವದನ್ನು 2015ರಲ್ಲಿ ನಡೆಸಲಾದ ಅಧ್ಯಯನವೊಂದು ಬೆಟ್ಟು ಮಾಡಿದೆ.

 ಹೀಗಾಗಿ ತೋರು ಬೆರಳು ಮತ್ತು ಉಂಗುರ ಬೆರಳುಗಳ ಅನುಪಾತವನ್ನು ಹಾಕ್ಸ್ ವಂಶವಾಹಿಗಳ ಅಸಮ ಪ್ರಮಾಣಕ್ಕೆ ತಳುಕು ಹಾಕಬಹುದು ಮತ್ತು ಇದು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯದ ಅಂಶವಾಗಬಹುದು. ಹಾಕ್ಸ್ ವಂಶವಾಹಿಗಳು ಪ್ರಾಸ್ಟೇಟ್ ಕ್ಯಾನ್ಸರ್‌ನಲ್ಲಿ ಹೇಗೆ ಮತ್ತು ಏಕೆ ಪಾತ್ರವನ್ನು ಹೊಂದಿವೆ ಎನ್ನುವುದಕ್ಕೆ ನಿಖರ ಕಾರಣವನ್ನು ತಜ್ಞರು ಇನ್ನೂ ಕಂಡುಕೊಳ್ಳಬೇಕಿದೆ. ಆದರೆ ಉಂಗುರ ಬೆರಳಿಗೆ ತೋರು ಬೆರಳಿನ ಅನುಪಾತಕ್ಕೂ ಹಾಕ್ಸ್ ವಂಶವಾಹಿಗಳಿಗೂ ಪರಸ್ಪರ ಸಂಬಂಧವಿದೆ ಮತ್ತು ಇದು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗಬಲ್ಲುದು ಎನ್ನುವುದು ತಜ್ಞರ ಖಚಿತ ಅಭಿಪ್ರಾಯವಾಗಿದೆ.

ಅಲ್ಲದೆ,ಉಂಗುರ ಬೆರಳಿಗಿಂತ ಉದ್ದವಾದ ತೋರುಬೆರಳನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೊಂದಿರುವುದಿಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ. ಅದು ಇತ್ತೀಚಿಗಷ್ಟೇ ಕಂಡು ಹಿಡಿಯಲಾಗಿರುವ ಅಪಾಯದ ಅಂಶಗಳಲ್ಲೊಂದಾಗಿದೆ ಅಷ್ಟೇ.

 ಬೆರಳುಗಳ ಉದ್ದ ಏನೇ ಇರಲಿ,ಪ್ರತಿಯೊಬ್ಬ ಪುರುಷರೂ ...ವಿಶೇಷವಾಗಿ 55 ವರ್ಷ ಮೇಲ್ಪಟ್ಟವರು ಅಥವಾ ಈ ರೋಗದ ಲಕ್ಷಣಗಳನ್ನು ಗಮನಿಸಿದವರು ನಿಯಮಿತವಾಗಿ ಪ್ರಾಸ್ಟೇಟ್ ಗ್ರಂಥಿಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News