ಭೂಕುಸಿತದಿಂದ ​ಮನೆ ಮಠಗಳು, ಕಾಫಿ ತೋಟಗಳು ಕಣ್ಮರೆ

Update: 2018-08-27 12:24 GMT

ಮಡಿಕೇರಿ, ಆ.27: ಕಳೆದ ವಾರ ಮಹಾಮಳೆ ಸೃಷ್ಟಿಸಿದ ಕೆಸರಿನಾರ್ಭಟಕ್ಕೆ ಮಡಿಕೇರಿಯಂಚಿನ ಕಾಲೂರು ಗ್ರಾಮ ಅಕ್ಷರಶಃ ಸ್ಮಶಾನದಂತಾಗಿದ್ದು, ಮನೆ ಮಠಗಳು, ಕಾಫಿ ತೋಟಗಳು ಕಣ್ಮರೆಯಾಗಿವೆ.

ದಟ್ಟ ಅರಣ್ಯದೊಂದಿಗೆ ಏಲಕ್ಕಿ, ಕಾಫಿ ಕೃಷಿಯನ್ನು ನಡೆಸುತ್ತಲೆ, ಭತ್ತದ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ತೊರೆಯದೆ ನೂರಾರು ವರ್ಷಗಳಿಂದ ಕಾಲೂರು ಗ್ರಾಮಗಳಲ್ಲಿ ನೆಲೆ ನಿಂತ ಮಂದಿ, ಕೊಡಗಿನ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದರು. ಆದರೆ ಸಂಸ್ಕೃತಿಗೆ ನೆಲೆ ಕಲ್ಪಿಸಿದವರಿಗೆ ಇಂದು ನೆಲೆಯೇ ಇಲ್ಲದಾಗಿದೆ.

ಸರಿ ಸುಮಾರು 250 ಒಕ್ಕಲು ಕುಟುಂಬದ ಅಂದಾಜು 700 ಮಂದಿ ಬದುಕು ಕಟ್ಟಿಕೊಂಡಿರುವ ಕಾಲೂರು ಗ್ರಾಮದಲ್ಲಿ, ಕೊಡವ ಸಮುದಾಯದ ಕೊಳುಮಾಡಂಡ, ಅಯ್ಯಲಪಂಡ, ನಂದಲಪಂಡ, ಕಾರೇರ, ತಂಬುಕುತ್ತೀರ, ನಂದೀರ, ಕಾಕೇರ, ಚಂಡೀರ, ಚನ್ನಪಂಡ, ಸಿದ್ದಂಡ, ಜಡ್ಡಮಂದಂಡ, ತುಳುನಾಡಂಡ ಸೇರಿದಂತೆ ಹಲವು ಕುಟುಂಬಗಳು, ಕೊಂಬಾರನ, ಯಾಲದಾಳು ಸೇರಿದಂತೆ ಕೆಲ ಗೌಡ ಕುಟುಂಬಗಳು ನೆಲೆ ಕಂಡು ಕೊಂಡಿವೆ ಮತ್ತು ತಮ್ಮತನವನ್ನು ಹೊರ ಜಗತ್ತಿನ ಪ್ರಭಾವಗಳ ನಡುವೆಯೂ ಉಳಿಸಿಕೊಂಡು ಬಂದಿವೆ. ಸ್ವಾತಂತ್ರ್ಯೋತ್ಸವದಂದು ಆರಂಭಗೊಂಡ ಮಹಾಮಳೆ ತನ್ನ ಪ್ರತಾಪವನ್ನು ಮುಂದುವರಿಸಿ, ಗುಡ್ಡಗಳನ್ನೆ ತನ್ನ ತೆಕ್ಕೆಗೆಳೆದುಕೊಂಡು ಮುನ್ನುಗ್ಗಿದ್ದರಿಂದ ಕಾಲೂರಿನ ಬಹುತೇಕ ಕುಟುಂಬಗಳ ತೋಟಗಳು ನೆಲ ಸಮವಾಗಿದ್ದರೆ, ಹಲವು ಮನೆಗಳು ಮಣ್ಣಿನಲ್ಲಿ ಮಣ್ಣಾಗಿ ಹೋಗಿವೆ. ಪ್ರಕೃತಿಯ ರೌದ್ರ ನರ್ತನಕ್ಕೆ ಬೆಚ್ಚಿದ ಗ್ರಾಮೀಣರು ದಿಕ್ಕಾಪಾಲಾಗಿ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆಗಳಿಗೆ ತೆರಳಿದ್ದಾರೆ. ಮತ್ತೆ ಹಿಂದಿನ ಬದುಕು ಇವರಿಗೆ ಸಾಧ್ಯವೇ ಎನ್ನುವುದನ್ನು ಭವಿಷ್ಯ ನಿರ್ಧರಿಸಬೇಕಷ್ಟೆ.

ಹತ್ತು ದಿನಗಳಿಂದ ಸುರಿದ ಭಾರೀ ಮಳೆಯ ಪ್ರಮಾಣ ಇಳಿಮುಖಗೊಂಡಂತೆಯೇ, ತಮ್ಮ ಮನೆ, ತೋಟದ ಚಿಂತೆಯಿಂದ ಕಂಗೆಟ್ಟಿದ್ದ ಹಲವು ಮಂದಿ ಕುಸಿದ ಬೆಟ್ಟ, ಮಣ್ಣಿನ ರಾಶಿ, ಕೆಸರುಮಯ ಹಾದಿಯನ್ನು ಕಿಲೋಮೀಟರ್ ಗಟ್ಟಲೆ ನಡೆದು ತಮ್ಮ ವಾಸ ಸ್ಥಾನದ ಸ್ಥಿತಿಗತಿಗಳನ್ನು ವೀಕ್ಷಿಸಿ ದಿಗ್ಭ್ರಾಂತರಾಗಿದ್ದಾರೆ. ಕೊಳುಮಾಡಂಡ ಉತ್ತಪ್ಪ(ಸಾಬು) ಎಂಬವರ ಮನೆ ಹೆಚ್ಚಿನ ಹಾನಿಗೊಳಗಾಗಿಲ್ಲವಾದರೆ, ಮನೆ ಪಕ್ಕದ ತೋಟದ ಅಂದಾಜು ಮೂರು ಏಕರೆ ಪ್ರದೇಶ ನಾಲ್ಕು ಅಡಿಗೂ ಹೆಚ್ಚಿನ ದಟ್ಟ ಕೆಸರಿನಿಂದ ಮುಚ್ಚಿ ಹೋಗಿದೆ. ಬೆವರು ಸುರಿಸಿ ಮಾಡಿದ ತೋಟದ ಕಾಫಿ ಗಿಡಗಳ ತುದಿಗಳಷ್ಟೆ ಇಂದು ಗೋಚರಿಸುತ್ತಿದೆ, ಈ ತೋಟ ಮತ್ತೆ ಸುಸ್ಥಿತಿಗೆ ಬರುವ ಸಾಧ್ಯತೆಯೇ ಇಲ್ಲದಂತಾಗಿ ಹೋಗಿದೆ.

ಅಯ್ಯಲಪಂಡ ಕುಟುಂಬದ ಮನೆ ಸೇರಿದಂತೆ ತೋಟ ಪ್ರಸ್ತುತ ಕಣ್ಮರೆಯಾಗಿದ್ದು, ಇಡೀ ಗುಡ್ಡದೊಂದಿಗೆ ಮನೆಮಠ, ತೋಟ ಮಣ್ಣಿನಡಿ ಸಿಲುಕಿ ಕುಟುಂಬವೊಂದರ ಬದುಕನ್ನು ನುಂಗಿ ಹಾಕಿದೆ.

ಪ್ರಾಕೃತಿಕ ವಿಕೋಪದಿಂದ ಗ್ರಾಮದ ಸಣ್ಣ ನೀರಿನ ಹರಿವೂ ದೊಡ್ಡ ನದಿಯಾಗಿ ಹರಿದಿದ್ದು, ಇದೀಗ ನೀರಿನ ಹರಿವುಗಳೇ ಬದಲಾಗಿ ಹೋಗಿದ್ದರೆ, ರಸ್ತೆ, ವಿದ್ಯುಚ್ಛಕ್ತಿ ಎನ್ನುವುದು ಮರು ಸ್ಥಾಪನೆಯಾಗಬೇಕಾದರೆ ವರ್ಷಗಳೇ ಬೇಕು. ಇಡೀ ಗ್ರಾಮವೇ ಪ್ರಕೃತಿಯ ಕೋಪಕ್ಕೆ ತುತ್ತಾಗಿ ಅಂದಾಜು ಏಳು ದಶಕಗಳಷ್ಟು ಹಿಂದಕ್ಕೆ ಹೋಗಿದೆ ಎನ್ನುವ ಮಾತು ಗ್ರಾಮಸ್ಥರದ್ದು. ಮಳೆಯಾರ್ಭಟದಿಂದ ಉಂಟಾದ ಪ್ರಾಕೃತಿಕ ವಿಕೋಪಗಳಿಂದ ಕಾಲೂರಿನ ಗ್ರಾಮಸ್ಥರು ರಕ್ಷಣೆಗಾಗಿ ಕಂಡ ಕಂಡ ಕಡೆಗೆ ಧಾವಿಸಿದ ಪರಿಣಾಮ ಊರ ದೇವರ ಮುಡಿಗೆ ಹೂವನಿರಿಸುವವರೇ ಇಲ್ಲದಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ.

ಪೂಜೆ ಇಲ್ಲ
ಕಾಲೂರಿನ ಭದ್ರಕಾಳಿ, ಭಗವತಿ, ಅಯ್ಯಪ್ಪ ದೇಗುಲಗಳಿಗೆ ಕಳೆದ ಒಂದು ತಿಂಗಳಿನಿಂದ ಹೂವನ್ನಿರಿಸಿ ಪೂಜೆ ಸಲ್ಲಿಸುವವರೆ ಇಲ್ಲದಂತಾಗಿದ್ದಾರೆ. ಭಾರೀ ಮಳೆಯಿಂದ ದೇಗುಲಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೂಜೆ ಸ್ಥಗಿತಗೊಂಡಿದೆ. ಕೆಸರಿನಾರ್ಭಟದಿಂದ ದೇವಸ್ಥಾನದ ಬಳಿಗೆ ತೆರಳುವುದೇ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದು:ಖಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News