500 ರೈತ ಕುಟುಂಬಗಳು ತಯಾರಿಸಿದ ಇಂಧನದಲ್ಲಿ ಹಾರಿದ ವಿಮಾನ

Update: 2018-08-27 16:25 GMT

ಹೊಸದಿಲ್ಲಿ, ಆ.27: ಕ್ರಾಂತಿಕಾರಿ ಬೆಳವಣಿಗೆಯೊಂದರಲ್ಲಿ ಸ್ಪೈಸ್‌ಜೆಟ್ ವೈಮಾನಿಕ ಸಂಸ್ಥೆಯು ಸೋಮವಾರ ಭಾರತದ ಪ್ರಥಮ ಜೈವಿಕ ಇಂಧನ ಆಧಾರಿತ ವಿಮಾನದ ಹಾರಾಟ ನಡೆಸಿತು. ಮೂಲಗಳ ಪ್ರಕಾರ, ಸ್ಪೈಸ್‌ಜೆಟ್‌ನ 78 ಆಸನಗಳುಳ್ಳ ವಿಮಾನದಲ್ಲಿ ಶೇ. 75 ಜೈವಿಕ ಇಂಧನ ಮತ್ತು ಶೇ.25 ಮಾಮೂಲಿ ಇಂಧನ ಬಳಸಲಾಗಿತ್ತು. ಈ ವಿಮಾನವು ಸೋಮವಾರ ಮುಂಜಾನೆ ಉತ್ತರಾಖಂಡ ರಾಜ್ಯದ ದೆಹರಾದೂನ್‌ನಿಂದ ದಿಲ್ಲಿಗೆ ಪ್ರಯಾಣ ಬೆಳೆಸಿತು.

ಜತ್ರೋಪಾ ಮರದಿಂದ ತಯಾರಿಸಲಾಗಿರುವ ಜೈವಿಕ ಇಂಧನವನ್ನು ದೆಹ್ರಾಡೂನ್‌ನಲ್ಲಿರುವ ಭಾರತೀಯ ಪೆಟ್ರೋಲಿಯಂ ಸಂಸ್ಥೆ ಅಭಿವೃದ್ಧಿಪಡಿಸಿದೆ. ಜೈವಿಕ ಇಂಧನವು ವಿಮಾನ ಪ್ರಯಾಣವನ್ನು ಪರಿಸರಸ್ನೇಹಿಯನ್ನಾಗಿಸುತ್ತದೆ ಮತ್ತು ಇಂಗಾಲ ಉಗುಳುವಿಕೆ ಕಡಿಮೆ ಮಾಡುವುದರಿಂದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದರಿಂದ ವೈಮಾನಿಕ ಸೇವೆಯ ವೆಚ್ಚದಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ 20 ಜನರನ್ನು ಹೊತ್ತು ಸಾಗಿದ ವಿಮಾನಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ದೆಹರಾದೂನ್‌ನ ಜೋಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಧರ್ಮೇಂದ್ರ ಪ್ರಧಾನ್, ಡಾ. ಹರ್ಷವರ್ಧನ್ ಮತ್ತು ಜಯಂತ್ ಸಿನ್ಹಾ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು ವಿಮಾನದ ಹಾರಾಟವನ್ನು ವೀಕ್ಷಿಸಿದರು. ಜೈವಿಕ ಇಂಧನವು ಅಮೆರಿಕನ್ ಸ್ಟಾಂಡರ್ಡ್ ಪರೀಕ್ಷಾ ವಿಧಾನ (ಎಎಸ್‌ಟಿಎಂ) ದಿಂದ ಪರಿಗಣಿಸಲ್ಪಟ್ಟಿದೆ ಮತ್ತು ಪ್ರಾಟ್ ಆ್ಯಂಡ್ ವಿಟ್ನಿ ಮತ್ತು ಬೊಂಬಾರ್ಡಿಯರ್ ಇಂಜಿನ್‌ಗಳ ಮಾನದಂಡಕ್ಕೆ ಸರಿಯಾಗಿದೆ.

2018-19ರ ವಿತ್ತೀಯ ವರ್ಷದಲ್ಲಿ ಭಾರತೀಯ ವೈಮಾನಿಕ ಸಂಸ್ಥೆಗಳು ಜಾಗತಿಕವಾಗಿ ಏರುತ್ತಿರುವ ವೈಮಾನಿಕ ಇಂಧನ ದರದಿಂದಾಗಿ ತೀವ್ರ ನಷ್ಟಕ್ಕೆ ಸಿಲುಕಿವೆ. ಸದ್ಯ ಜೈವಿಕ ಇಂಧನದ ಅನ್ವೇಷಣೆ ಮತ್ತು ಅದನ್ನು ಯಶಸ್ವಿಯಾಗಿ ವಿಮಾನ ಹಾರಾಟದಲ್ಲಿ ಬಳಸಿರುವುದು ಭಾರತೀಯ ವೈಮಾನಿಕ ಸಂಸ್ಥೆಗಳಿಗೆ ಹೊಸ ಭರವಸೆಯನ್ನು ನೀಡಿದೆ ಎಂದು ಸ್ಪೈಸ್‌ಜೆಟ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ.

ಜೈವಿನ ಇಂಧನವನ್ನು ಜತ್ರೋಪಾ ಮರದ ಬೀಜದಿಂದ ತೆಗೆಯಲಾದ ಎಣ್ಣೆಯಿಂದ ತಯಾರಿಸಲಾಗಿದೆ. ಸೋಮವಾರ ಸ್ಪೈಸ್‌ಜೆಟ್ ವಿಮಾನದಲ್ಲಿ ಬಳಸಲಾದ ಜೈವಿಕ ಇಂಧನವನ್ನು ಚತ್ತೀಸ್‌ಗಡದ ಐನೂರು ರೈತ ಕುಟುಂಬಗಳು ಸತತವಾಗಿ ಶ್ರಮಿಸಿ ತಯಾರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News