1981 ವಿಮಾನ ಅಪಹರಣ ಪ್ರಕರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Update: 2018-08-27 16:29 GMT

ಹೊಸದಿಲ್ಲಿ, ಆ.27: 1981ರಲ್ಲಿ ಹೊಸದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಿ ಅದನ್ನು ಪಾಕಿಸ್ತಾನದಲ್ಲಿ ಇಳಿಯುವಂತೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇಬ್ಬರನ್ನು ಸೋಮವಾರ ದಿಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳಾದ ತೇಜಿಂದರ್ ಪಾಲ್ ಸಿಂಗ್ ಮತ್ತು ಸತ್ನಾಮ್ ಸಿಂಗ್‌ರನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಪಾಂಡೆ ಖುಲಾಸೆಗೊಳಿಸಿದ್ದಾರೆ. ಸರಕಾರಿ ಅಭಿಯೋಜಕರ ಪ್ರಕಾರ, 1981ರ ಸೆಪ್ಟಂಬರ್ 29ರಂದು ಇಬ್ಬರು ಆರೋಪಿಗಳು, ಹೊಸದಿಲ್ಲಿಯಿಂದ ಅಮೃತಸರ ಮಾರ್ಗವಾಗಿ ಶ್ರೀನಗರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಪಾಕಿಸ್ತಾನದ ಲಾಹೋರ್‌ನಲ್ಲಿ ಇಳಿಯುವಂತೆ ಮಾಡಿದ್ದರು. ನಂತರ ಈ ಇಬ್ಬರು ಆರೋಪಿಗಳನ್ನು ಲಾಹೋರ್‌ನಲ್ಲಿ ಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಶಿಕ್ಷೆಯ ಅವಧಿ ಮುಗಿದ ನಂತರ 2000 ಇಸವಿಯಲ್ಲಿ ಇಬ್ಬರನ್ನು ಗಡಿಪಾರುಗೊಳಿಸಲಾಗಿತ್ತು. ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳು ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಯನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ತಳ್ಳಿಹಾಕಿತ್ತು. 2011ರಲ್ಲಿ ದಿಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ಜುಲೈಯಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News