2004ರ ಚುನಾವಣೆಯಲ್ಲಿ ಸೋಲುವ ಭಯ ವಾಜಪೇಯಿಯನ್ನು ಕಾಡಿತ್ತು: ಆಪ್ತ ಸಹಾಯಕ

Update: 2018-08-27 16:41 GMT

ಹೊಸದಿಲ್ಲಿ, ಆ.27: 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂಬುದನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಭಿಯಾನದ ಅಂತಿಮ ಹಂತದಲ್ಲಿ ಗ್ರಹಿಸಿದ್ದರು ಎಂದು ಅಟಲ್ ಅವರ ಆಪ್ತ ಸಹಾಯಕ ಶಿವಕುಮಾರ್ ಪಾರೀಕ್ ತಿಳಿಸಿದ್ದಾರೆ.

ವಾಜಪೇಯಿ ಕಾಲದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮಧ್ಯೆ ಇದ್ದಂಥ ಸಹಯೋಗ ಈಗ ಕಾಣೆಯಾಗಿದೆ ಎಂದು ಇದೇ ವೇಳೆ ಪಾರೀಕ್ ತಿಳಿಸಿದ್ದಾರೆ. 2004ರ ಸೋಲಿಗೆ ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಇಂಡಿಯಾ ಶೈನಿಂಗ್ ಎಂಬ ಘೋಷವಾಕ್ಯ ನಮ್ಮ ವಿರುದ್ಧ ಹೋಯಿತು. ಎರಡನೆಯದಾಗಿ, ಅವಧಿಗೂ ಮೊದಲೇ ಚುನಾವಣೆ ನಡೆಸಲು ತೆಗೆದುಕೊಂಡ ನಿರ್ಧಾರ. ವಾಜಪೇಯಿಯವರು ಅವಧಿಗೂ ಮುನ್ನ ಚುನಾವಣೆಯ ಪರವಾಗಿರಲಿಲ್ಲ. ಆದರೆ ಪಕ್ಷವು ಆ ತೀರ್ಮಾನ ತೆಗೆದುಕೊಂಡಿತ್ತು ಎಂದು ಅಟಲ್ ಅವರಿಗೆ ಐದು ದಶಕಗಳ ಕಾಲ ನೆರಳಾಗಿ ನಿಂತಿದ್ದ ಶಿವಕುಮಾರ್ ತಿಳಿಸಿದ್ದಾರೆ.

ಸರಕಾರ ಹೋಯಿತು, ನಾವು ಸೋಲುತ್ತಿದ್ದೇವೆ ಎಂದು ವಾಜಪೇಯಿ ಲಖ್ನೊದಲ್ಲಿ ನಡೆದ ಚುನಾವಣಾ ಅಭಿಯಾನದ ನಂತರ ಮರಳುವ ವೇಳೆ ತಿಳಿಸಿದ್ದರು ಎಂದು ಶಿವಕುಮಾರ್ ನೆನಪಿಸಿದ್ದಾರೆ. ಮೋದಿ ಸರಕಾರದ ನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾರೀಕ್, ಅದು ರಾಜಕೀಯ ಪ್ರಶ್ನೆ. ನಾನು ಯಾರನ್ನಾದರೂ ಹೊಗಳಿದರೆ ಮನಃಪೂರ್ವಕವಾಗಿ ಹೊಗಳುತ್ತೇನೆ ಮತ್ತು ಟೀಕಿಸಿದರೆ ಮನಸು ಬಿಚ್ಚಿ ಟೀಕಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ. ವಾಜಪೇಯಿ ಹಾಕಿಕೊಟ್ಟ ಅಡಿಪಾಯದ ಕಾರಣದಿಂದ ಬಿಜೆಪಿ 2014 ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಸರಳ ಬಹುಮತ ಜಯಿಸಿದ ಪ್ರಥಮ ಕಾಂಗ್ರೇಸೇತರ ಪಕ್ಷ ಎಂಬ ಹೆಗ್ಗಳಿಕೆ ಪಾತ್ರವಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News