ಸರಕಾರಿ ಅಧಿಕಾರಿಗಳು ಸಭೆಗಳಲ್ಲಿ ಜೀನ್ಸ್ ಪ್ಯಾಂಟ್ ಧರಿಸುವಂತಿಲ್ಲ: ಬಿಪ್ಲಬ್ ದೇಬ್ ಸರಕಾರದ ಆದೇಶ

Update: 2018-08-28 06:26 GMT

ಅಗರ್ತಲ, ಆ.28: ಅಧಿಕೃತ ಸಭೆ ಸಮಾರಂಭಗಳಿಗೆ ಆಗಮಿಸುವಾಗ ಕ್ಯಾಶುವಲ್ ಧಿರಿಸುಗಳಾದ ಜೀನ್ಸ್ ಮತ್ತು ಕಾರ್ಗೋ ಪ್ಯಾಂಟ್  ಧರಿಸದಂತೆ  ತ್ರಿಪುರಾದ ಅಧಿಕಾರಿಗಳಿಗೆ  ಸರಕಾರ ತಿಳಿಸಿದೆ.

ರಾಜ್ಯದ ಕಂದಾಯ, ಶಿಕ್ಷಣ ಮತ್ತು  ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಸುಶೀಲ್ ಕುಮಾರ್ ಅವರು ಆಗಸ್ಟ್ 20ರಂದು ಕಳುಹಿಸಿರುವ ಸುತ್ತೋಲೆಯಂತೆ  ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಮುಖ್ಯ ಕಾರ್ಯದರ್ಶಿ ಮುಂತಾದವರು ಅಧ್ಯಕ್ಷತೆ ವಹಿಸಿ ನಡೆಸುವ ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸುವ ಅಧಿಕಾರಿಗಳು ವಸ್ತ್ರ ಸಂಹಿತೆ ಪಾಲಿಸುವಂತೆ ಹಾಗೂ ಜೀನ್ಸ್, ಕಾರ್ಗೋ ಪ್ಯಾಂಟ್ ಧರಿಸದಂತೆ ಆಯಾಯ ಜಿಲ್ಲಾ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ನೋಡಿಕೊಳ್ಳಬೇಕು ಎಂದು ಹೇಳಿದೆ.

ಕೆಲ ಅಧಿಕಾರಿಗಳು  ಸಭೆಗಳಲ್ಲಿ ತಮ್ಮ ಮೊಬೈಲ್ ಫೋನುಗಳಲ್ಲಿ ಮೆಸೇಜ್ ಓದುತ್ತಾ ಮೆಸೇಜ್ ಕಳುಹಿಸುತ್ತಾ ಇರುವುದೂ ಕಂಡು ಬಂದಿದ್ದು, ಇದು ಅಗೌರವ ತೋರಿದಂತೆ ಎಂದೂ ಸರಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಮಧ್ಯ ಪ್ರದೇಶ ಸರಕಾರ ಕೂಡ ಅಕ್ಟೋಬರ್ 2015ರಲ್ಲಿ ಇಂತಹುದೇ ಸುತ್ತೋಲೆ ಹೊರಡಿಸಿ ಅಧಿಕಾರಿಗಳು ಅಧಿಕೃತ ಸಮಾರಂಭಗಳಿಗೆ ಜೀನ್ಸ್, ಸನ್ ಗ್ಲಾಸ್ ಧರಿಸಿ ಬರಬಾರದೆಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News