ನೋಟು ಅಮಾನ್ಯೀಕರಣವನ್ನು ಟೀಕಿಸುವ ಸಂಸದೀಯ ಸಮಿತಿ ವರದಿ ತಿರಸ್ಕರಿಸಿದ ಬಿಜೆಪಿ ಸದಸ್ಯರು

Update: 2018-08-28 07:35 GMT

ಹೊಸದಿಲ್ಲಿ, ಆ.28: ನೋಟು ಅಮಾನ್ಯೀಕರಣ ಒಂದು ಯೋಜನಾರಹಿತ ಕ್ರಮವಾಗಿತ್ತು ಎಂದು ಟೀಕಿಸುವ ವರದಿ ಹೊರಬೀಳದಂತೆ ಯಾ ಅಮಾನ್ಯೀಕರಣದ ಬಗ್ಗೆ ವ್ಯತಿರಿಕ್ತ ಚರ್ಚೆಗೆ ಆಸ್ಪದವಾಗದಂತೆ ಸಂಸದೀಯ ವಿತ್ತ ಸ್ಥಾಯಿ ಸಮಿತಿಯಲ್ಲಿ ತನಗಿರುವ ಬಹುಮತವನ್ನು ಬಿಜೆಪಿ ಚೆನ್ನಾಗಿ ಉಪಯೋಗಿಸಿಕೊಂಡಿದೆ. ಸಮಿತಿಯಲ್ಲಿನ ಬಿಜೆಪಿ ಸದಸ್ಯರ ಈ ಕ್ರಮಗಳು ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮುಜುಗರ ಉಂಟಾಗುವುದನ್ನು ತಪ್ಪಿಸಿದೆ.

ವಿತ್ತ ಸ್ಥಾಯಿ ಸಮಿತಿಯ ನೇತೃತ್ವವನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ವಹಿಸಿದ್ದರೆ ಸಮಿತಿಯಲ್ಲಿ ಖ್ಯಾತ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಇದ್ದಾರೆ. ಮಾರ್ಚ್ ತಿಂಗಳಲ್ಲಿಯೇ ಸಮಿತಿ ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ತನ್ನ ವರದಿ ಸಿದ್ಧಪಡಿಸಿ ಇದೊಂದು ಯೋಜನಾರಹಿತ ಕ್ರಮವಾಗಿತ್ತು ಎಂಬ ತೀರ್ಮಾನಕ್ಕೆ ಬಂದಿದ್ದರೂ ಅದು ಬಿಜೆಪಿ ಸದಸ್ಯರ ಟೀಕೆಗೆ ಗುರಿಯಾಗಿತ್ತು. ಮಾರ್ಚ್ 19ರಂದು ಅವರೆಲ್ಲರೂ ಜತೆಯಾಗಿ ವರದಿಯನ್ನು ವಿರೋಧಿಸಿದ್ದರು. ಬಿಜೆಪಿಯ ನಿಶಿಕಾಂತ್ ದುಬೆ ತಮ್ಮ ಆಕ್ಷೇಪವನ್ನೂ ಸಲ್ಲಿಸಿದ್ದರು.

ಸಮಿತಿಯ ವರದಿಯನ್ನು ಒಪ್ಪಿಕೊಳ್ಳುವಂತೆ ಮೊಯ್ಲಿ ಮಾಡಿದ ಸತತ ಯತ್ನಗಳೂ ಕೈಗೂಡಲಿಲ್ಲ. ಈ 31 ಸದಸ್ಯರ ಸಮಿತಿಯಲ್ಲಿ ಬಿಜೆಪಿಯ 17 ಸಂಸದರಿರುವುದರಿಂದ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆಯಿಲ್ಲದಂತಾಗಿದೆ. ಈ ಸಮಿತಿಯ ಅವಧಿ ಆಗಸ್ಟ್ 31ರಂದು ಅಂತ್ಯಗೊಳ್ಳಲಿದ್ದು, ಅದು ಸಿದ್ಧಪಡಿಸಿದ ವರದಿ ಈಗ ಉಪಯೋಗಕ್ಕಿಲ್ಲದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News