ಆ್ಯಂಬುಲೆನ್ಸ್ ನಲ್ಲಿ ಆಮ್ಲಜನಕ ಸಿಲಿಂಡರ್ ಖಾಲಿ: ಬಾಲಕಿ ಮೃತ್ಯು

Update: 2018-08-28 08:41 GMT

ರಾಯಪುರ, ಆ.28: ಐದು ವರ್ಷದ ಬಾಲಕಿಯ ಕೃತಕ ಉಸಿರಾಟಕ್ಕೆ ಅಳವಡಿಸಿದ್ದ ವೆಂಟಿಲೇಟರ್‍ಗೆ ಸಂಪರ್ಕ ಕಲ್ಪಿಸಿದ್ದ ಆಮ್ಲಜನಕ ಸಿಲಿಂಡರ್‍ನಲ್ಲಿ ಆಮ್ಲಜನಕ ಮುಗಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಛತ್ತೀಸ್‍ಗಢದ ಬಸ್ತರ್‍ನಲ್ಲಿ ನಡೆದಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಬಾಲಕಿಯನ್ನು ಆ್ಯಂಬುಲೆನ್ಸ್‍ನಲ್ಲಿ 160 ಕಿಲೋಮೀಟರ್ ದೂರದ ಮತ್ತೊಂದು ಆಸ್ಪತ್ರೆಗೆ ಸಾಗಿಸುವ ವೇಳೆ ಆಮ್ಲಜನಕ ಸಿಲಿಂಡರ್ ಖಾಲಿಯಾಗಿ ಬಾಲಕಿ ಮೃತಪಟ್ಟಿದ್ದಾಳೆ. ಬುಲ್‍ಬುಲ್ ಕುದಿಯಮ್ ಎಂಬ ಈ ಬಾಲಕಿ ನ್ಯುಮೋನಿಯಾದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬಿಜಾಪುರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಜಗದಾಳಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಬಿ.ಆರ್.ಪೂಜಾರಿ ಹೇಳಿದ್ದಾರೆ.

ತೊಯ್ನಾರ್ ಗ್ರಾಮದ ಈ ಬಾಲಕಿ ಮಟ್ವಾಡಾ ಗ್ರಾಮದ ಆಶ್ರಮ ಶಾಲೆಯಲ್ಲಿದ್ದಾಗ ನ್ಯುಮೋನಿಯಾಗೆ ತುತ್ತಾದದ್ದರಿಂದ ಆಗಸ್ಟ್ 22ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಆಕೆಯನ್ನು ಜಗದಾಳಪುರ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಟೋಕಪಾಲ್ ಗ್ರಾಮಕ್ಕೆ ತಲುಪುವ ವೇಳೆಗೆ ಆಂಬುಲೆನ್ಸ್‍ನಲ್ಲಿದ್ದ ಆಮ್ಲಜನಕ ಸಿಲಿಂಡರ್ ಖಾಲಿಯಾಗಿದೆ. ಜಗದಾಳಪುರ ಆಸ್ಪತ್ರೆಗೆ ತಲುಪುವ ವೇಳೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಈ ಅಂತರಕ್ಕೆ ಒಂದು ಆಮ್ಲಜನಕ ಸಿಲಿಂಡರ್ ಸಾಕಾಗುತ್ತದೆ. ಆದರೆ ಅರ್ಧದಲ್ಲೇ ಹೇಗೆ ಮುಗಿಯಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News