ಉಡೋತ್ ಮೊಟ್ಟೆಯಲ್ಲಿ ಮುಗಿಯದ ಆತಂಕ: ಸೂರು ಕಳೆದುಕೊಳ್ಳುವ ಭೀತಿಯ ನಡುವೆ ಊಟಕ್ಕೂ ಕೊರತೆ

Update: 2018-08-28 14:32 GMT

ಮಡಿಕೇರಿ, ಆ.28: ಕೊಡಗು ಜಿಲ್ಲೆಯನ್ನೇ ತಲ್ಲಣಗೊಳಿಸಿದ ಪ್ರಕೃತಿ ವಿಕೋಪದಿಂದಾಗಿ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದ್ದು, ಒಂದು ಹೊತ್ತಿನ ಊಟಕ್ಕು ಕೈ ಚಾಚುವ ದುರ್ಗತಿ ಬಂದೊದಗಿದೆ.

ಜಿಲ್ಲೆಯ ಸುಮಾರು 32 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಸ್ಥರ ಬದುಕು ಕುರುಡಾಗಿದೆ. ಮಹಾಮಳೆಯ ದಾಳಿಗೆ ಸಿಲುಕಿದ ಗ್ರಾಮಗಳಲ್ಲಿ ಮಡಿಕೇರಿ ನಗರದ ಸಮೀಪದಲ್ಲಿರುವ ಉಡೋತ್ ಮೊಟ್ಟೆ ಗ್ರಾಮ ಕೂಡ ಒಂದು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರ್ಮಿಕ ವರ್ಗ ತಮ್ಮ ಬದುಕಿಗಾಗಿ ತೋಟದ ಕೆಲಸವನ್ನೇ ಅವಲಂಬಿಸಿದ್ದಾರೆ. ಮಹಾಮಳೆ ತಂದೊಡ್ಡಿರುವ ದುರಂತ ಅಧ್ಯಾಯದಿಂದ ಈ ಭಾಗದ ಜನರಿಗೆ ದಾರಿ ಕಾಣದಾಗಿದೆ. ಕಾಫಿ ತೋಟಗಳೆಲ್ಲವೂ ಮಳೆ ನೀರುಪಾಲಾಗಿರುವುದರಿಂದ ತೋಟದ ಕೆಲಸವಿಲ್ಲದೆ ಬದುಕು ಬಡವಾಗಿದೆ. ದಿನನಿತ್ಯದ ಸಾಮಾಗ್ರಿಗಳನ್ನು ಖರೀದಿಸಲು ನಗರಕ್ಕೂ ತೆರಳಲಾಗದೆ ಬಡ ವರ್ಗ ಪರಿತಪಿಸುತ್ತಿದೆ.

ಉಡೋತ್ ಮೊಟ್ಟೆಯಿಂದ ಮಡಿಕೇರಿ ನಗರಕ್ಕೆ ತೆರಳುವ ಮಡಿಕೇರಿ - ಭಾಗಮಂಡಲ ರಸ್ತೆ ಸಂಪೂರ್ಣ ಹಾನಿಗೊಳಗಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ನಿರಾಶ್ರಿತರಿಗೆ ಮತ್ತು ಸಂತ್ರಸ್ಥರಿಗಾಗಿ ಬರುತ್ತಿರುವ ಪರಿಹಾರ ಸಾಮಾಗ್ರಿಗಳು ಪರಿಹಾರ ಕೇಂದ್ರಗಳ ಪಾಲಾಗುತ್ತಿದೆ. ಅಲ್ಪ ಪ್ರಮಾಣದ ಪದಾರ್ಥವನ್ನು ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಗ್ರಾಮಸ್ಥರಿಗೆ ಹಂಚಲು ಸಾಧ್ಯವಾಗುತ್ತಿಲ್ಲ.

ಗ್ರಾಮದಲ್ಲಿ ಸುಮಾರು 500 ರಿಂದ 600 ಗ್ರಾಮಸ್ಥರಿದ್ದು, ಕೂಲಿ ಕೆಲಸವನ್ನೆ ನಂಬಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಪ್ರಕೃತಿ ವಿಕೋಪದ ನಂತರ ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ತೋಟದ ಮಾಲಿಕರು ಆತಂಕಗೊಂಡಿದ್ದು, ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾರ್ಮಿಕ ವರ್ಗ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಪರಿಸ್ಥಿತಿ ನಿಧಾನಗತಿಯಲ್ಲಿ ಹತೋಟಿಗೆ ಬರುತ್ತಿದ್ದರೂ ಮತ್ತೆ, ಮತ್ತೆ ಗಾಳಿ ಮಳೆಯಾಗುತ್ತಿರುವುದರಿಂದ ಪ್ರಕೃತಿಯ ಸಹಕಾರದ ಬಗ್ಗೆ ಯಾರಿಗೂ ಈಗ ವಿಶ್ವಾಸ ಉಳಿದಿಲ್ಲ. ಇದೇ ಕಾರಣಕ್ಕೆ ಭಯದಿಂದ ಮನೆ ತೊರೆದವರು ಅಪಾಯದ ಸ್ಥಿತಿಯಲ್ಲಿರುವ ಮನೆಗಳಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮದಲ್ಲಿರುವ ಬಹುತೇಕ ಮನೆಗಳು ಗುಡ್ಡದ ಮೇಲಿರುವುದರಿಂದ ಇನ್ನು ಮುಂದೆ ನೆಮ್ಮದಿಯ ಜೀವನ ಸಾಗಿಸುವುದು ಅಸಾಧ್ಯವೆನಿಸಿದೆ.

ಉಡೋತ್ ಮೊಟ್ಟೆಯ ಜನಾರ್ಧನ ಆಚಾರಿ, ಜಯಾ ಆಚಾರಿ, ಬಿ.ಸಿ. ಗಿರಿಜಾ ಹಾಗೂ ಬಿ.ಆರ್.ರವಿ, ಗಿರಿಜಾ ಅವರ ಮನೆಯ ಪಕ್ಕದಲ್ಲಿರುವ ಗುಡ್ಡಗಳು ಮಹಾಮಳೆಯಿಂದಾಗಿ ಕುಸಿದಿದ್ದು, ಮನೆಯ ಪಕ್ಕದಲ್ಲಿರುವ ಬಾವಿ ಈಗಲೋ, ಆಗಲೋ ಕುಸಿಯುವ ಭವಿಷ್ಯವನ್ನು ನುಡಿಯುತ್ತಿದೆ. ಅಲ್ಲದೆ ಇನ್ನೂ ಕೆಲವು ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ನಿವಾಸಿಗಳು ಪರಿಹಾರಕ್ಕಾಗಿ ಜಿಲ್ಲಾಡಳಿತವನ್ನು ಅಂಗಲಾಚುತ್ತಿದ್ದಾರೆ.

ಗ್ರಾ.ಪಂ. ನಿರ್ಲಕ್ಷ್ಯ
ಹಲವು ವರ್ಷಗಳಿಂದ ಗ್ರಾಮದ ಕಾಲು ದಾರಿಗಳು ಸಮರ್ಪಕವಾಗಿರದೆ ದಾರಿಯುದ್ದಕ್ಕೂ ಗುಡ್ಡ ಕುಸಿಯುವ ಪರಿಸ್ಥಿತಿ ಉಂಟಾಗಿದೆ. ಈ ಕುರಿತು ರಸ್ತೆ ನಿರ್ಮಿಸಿಕೊಡುವಂತೆ ಊರಿನ ಕುಟುಂಬಗಳು ಕಳೆದ ಅನೇಕ ತಿಂಗಳುಗಳಿಂದ ಗ್ರಾ.ಪಂ.ಗೆ ಮನವಿ ನೀಡುತ್ತಾ ಬಂದಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಆರೋಗ್ಯ ಕೂಡ ಹದಗೆಡುತ್ತಿದ್ದು, ಜಿಲ್ಲಾಡಳಿತವೇ ಮಧ್ಯ ಪ್ರವೇಶಿಸಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ಆತಂಕ ಸೃಷ್ಟಿಸುತ್ತಿರುವ ಸಾಮಾಜಿಕ ಜಾಲತಾಣ
ಮಹಾಮಳೆಯಿಂದ ಅಧೈರ್ಯ ಸ್ಥಿತಿಗೆ ಜಾರಿರುವ ಕೊಡಗಿನ ಜನರನ್ನು ಸಾಮಾಜಿಕ ಜಾಲತಾಣಗಳ ವದಂತಿಗಳು ಕಾಡುತ್ತಲೇ ಇವೆ. ಸಾವು, ನೋವುಗಳಿಂದ ನಲುಗಿ ಹೋಗಿರುವ ಜಿಲ್ಲೆಗೆ ವದಂತಿಗಳೇ ಈಗ ಶಾಪವಾಗಿ ಪರಿಣಮಿಸಿದೆ. ವದಂತಿಗಳು ನೊಂದ ಮನಸ್ಸುಗಳನ್ನು ಮತ್ತೆ ಕುಗ್ಗಿ ಹೋಗುವಂತೆ ಮಾಡುತ್ತಿವೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಷ್ಟೇ ಆತ್ಮವಿಶ್ವಾಸವನ್ನು ತುಂಬುತ್ತಿದ್ದರೂ ಬದುಕು ಕಳೆಗುಂದಿದ ಸ್ಥಿತಿಯಲ್ಲೇ ಇದೆ. ಉಡೋತ್ ಮೊಟ್ಟೆ ನಿವಾಸಿಗಳು ಎದುರಾಗಬಹುದಾದ ವಿಕೋಪದ ಬಗ್ಗೆ ಇನ್ನೂ ಆತಂಕದಲ್ಲೇ ಇದ್ದಾರೆ. ತೋಟದ ಕೆಲಸವೂ ಸಿಗದೆ ಅತಂತ್ರ ಬದುಕನ್ನು ಸಾಗಿಸುತ್ತಿರುವ ಗ್ರಾಮಸ್ಥರಿಗೆ ಕನಿಷ್ಠ ಆಹಾರ ಸಾಮಾಗ್ರಿಗಳು ಸಮರ್ಪಕವಾಗಿ ದೊರೆಯುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News