ಸೂಕ್ತ ಮಾಹಿತಿ ಪಡೆದು ತಿಳಿಸಲು ಸರಕಾರಿ ವಕೀಲರಿಗೆ ಹೈಕೋರ್ಟ್ ಸೂಚನೆ

Update: 2018-08-28 16:45 GMT

ಬೆಂಗಳೂರು, ಆ.28: ಕ್ರಿಮಿನಲ್ ಪ್ರಕರಣಗಳಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯಗಳ ಆದೇಶದ ಅಧ್ಯಯನಕ್ಕೆ ರಚಿಸಿರುವ ರಾಜ್ಯ ಕ್ರಿಮಿನಲ್ ಖುಲಾಸೆ ಪರಿಶೀಲನಾ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ವಿಚಾರ ಸಂಬಂಧ ಸರಕಾರದಿಂದ ಸೂಕ್ತ ಮಾಹಿತಿ ಪಡೆದು ತಿಳಿಸುವಂತೆ ಸರಕಾರಿ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.

ಈ ಕುರಿತು ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಈ ಸೂಚನೆ ನೀಡಿ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು.

ಕ್ರಿಮಿನಲ್ ಪ್ರಕರಣಗಳಿಂದ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯಗಳ ಆದೇಶದ ಅಧ್ಯಯನಕ್ಕೆ ಪ್ರತಿಯೊಂದು ರಾಜ್ಯವು ಕ್ರಿಮಿನಲ್ ಖುಲಾಸೆ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ 2014ರ ಜ.7ರಂದು ಆದೇಶಿಸಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಆರೋಪಿಗಳನ್ನು ಖುಲಾಸೆಗೊಳಿಸಿದ ರಾಜ್ಯದ ಎಲ್ಲ ಕೋರ್ಟ್ ಆದೇಶ ಪಡೆದು, ಖುಲಾಸೆಗೆ ನೀಡಲಾಗಿರುವ ಕಾರಣ ಪರಿಶೀಲಿಸಬೇಕು. ಆರೋಪಿಗಳು ಖುಲಾಸೆಯಾಗಲು ಪ್ರಾಸಿಕ್ಯೂಷನ್ ಇಲಾಖೆ ಅಥವಾ ತನಿಖಾಧಿಕಾರಿಯ ಅಸಮರ್ಪಕ ಕಾರ್ಯನಿರ್ವಹಣೆಯೋ? ಎಂಬುದನ್ನು ಪತ್ತೆ ಹಚ್ಚಿ, ಆ ಕುರಿತು ಗೃಹ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ಕರ್ತವ್ಯಲೋಪ ಎಸಗಿದವರ ವಿರುದ್ಧ ಸರಕಾರ ಕ್ರಮ ಜರುಗಿಸಬೇಕು ಎಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವುದಾಗಿ ಅರ್ಜಿಯಲ್ಲಿ ವಿವರಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ 2014ರ ಅ.20ರಂದು ರಾಜ್ಯ ಸರಕಾರವು ಕ್ರಿಮಿನಲ್ ಖುಲಾಸೆ ಪರಿಶೀಲನಾ ಸಮಿತಿ ರಚಿಸಿದೆ. ವಿಪರ್ಯಾಸೆವೆಂದರೆ ಸಮಿತಿಯು ಸುಪ್ರಿಂ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಈವರೆಗೂ ಒಂದೆರಡು ಸಭೆ ಮಾತ್ರ ನಡೆಸಿದ್ದು, ಯಾವುದೇ ವರದಿ ಸಲ್ಲಿಸಿಲ್ಲ. ಪರಿಣಾಮಕಾರಿಯಾದ ತನಿಖೆ ಹಾಗೂ ಪ್ರಾಸಿಕ್ಯೂಷನ್ ನಡೆಸದಿದ್ದರೆ, ಅಪರಾಧಿಗಳು ಶಿಕ್ಷೆಯಿಂದ ಪಾರಾಗುತ್ತಾರೆ. ಅದರಿಂದ ಅಪರಾಧ ಪ್ರಕರಣಗಳಿಗೆ ಸಿಲುಕಿದ ಅಮಾಯಕ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಡಿಜಿಪಿ ಮತ್ತು ಪ್ರಾಸಿಕ್ಯೂಷನ್ ಇಲಾಖೆ ನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News