ಇದೂ ಮಧುಮೇಹದ ಸೂಚನೆಯಾಗಿರಬಹುದು...!

Update: 2018-08-28 18:31 GMT

ಯಾವುದೇ ವ್ಯಕ್ತಿ ಎಷ್ಟೇ ಆರೋಗ್ಯವಂತನಾಗಿರಲಿ.....ಒಮ್ಮಿಮ್ಮೆ ತೀರ ಬಳಲಿಕೆಯನ್ನು ಅನುಭವಿಸುತ್ತಾನೆ ಅಲ್ಲವೇ? ಆರೋಗ್ಯವಂತ ವ್ಯಕ್ತಿಯ ಶರೀರ ಅತಿಯಾಗಿ ಶ್ರಮಿಸಿದಾಗ ಅಥವಾ ಮಾನಸಿಕ ಒತ್ತಡದಲ್ಲಿದ್ದಾಗ ಅದು ದಣಿವಿಗೆ ಕಾರಣವಾಗುತ್ತದೆ. ಆದರೆ ಬಳಲಿಕೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರೆ ಅದು ಅನಾರೋಗ್ಯದ ಸಂಕೇತವಾಗಬಹುದು.

ವಾಸ್ತವದಲ್ಲಿ ಬಳಲಿಕೆ ಹೆಚ್ಚಿನ ಕಾಯಿಲೆಗಳ ಲಕ್ಷಣಗಳಲ್ಲೊಂದಾಗಿದೆ. ಆದರೆ ಆಗಾಗ್ಗೆ ದಣಿವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗದ ಹೊರತು ಅದು ಯಾವ ಕಾಯಿಲೆಯ ಲಕ್ಷಣ ಎನ್ನುವುದನ್ನು ನಿರ್ಧರಿಸುವುದು ಕಠಿಣವಾಗುತ್ತದೆ.
ಮಧುಮೇಹ ಸಾಮಾನ್ಯ ಚಯಾಪಚಯ ಕಾಯಿಲೆ ಎನ್ನುವುದು ನಮಗೆ ಗೊತ್ತು. ವ್ಯಕ್ತಿ ವಿಶೇಷವಾಗಿ ಈ ರೋಗದ ಇತರ ಲಕ್ಷಣಗಳನ್ನೂ ಗಮನಿಸಿದ್ದರೆ ಮತ್ತು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ದಣಿವನ್ನು ಅನುಭವಿಸುತ್ತಿದ್ದರೆ ಅದು ಮಧುಮೇಹದ ಸೂಚನೆಯಾಗಿರುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.
ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿದ್ದಾಗ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಅತಿಯಾಗಿರುತ್ತದೆ ಮತ್ತು ಈ ರೋಗಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ವ್ಯಕ್ತಿ ದಿನದ ಮಧ್ಯಾವಧಿಯಲ್ಲಿ, ಅಂದರೆ ಮಧ್ಯಾಹ್ನ ಒಂದರಿಂದ ನಾಲ್ಕು ಗಂಟೆಯ ನಡುವೆ, ವಿಶೇಷವಾಗಿ ಊಟದ ಬಳಿಕ ದಣಿವನ್ನು ಅನುಭವಿಸುತ್ತಿದ್ದರೆ ಅದು ಆತ ಮಧುಮೇಹ ಹೊಂದಿದ್ದಾನೆ ಎನ್ನುವುದನ್ನು ಸೂಚಿಸಬಹುದು. ಏಕೆಂದರೆ ದಿನದ ಈ ಅವಧಿಯಲ್ಲಿ, ವಿಶೇಷವಾಗಿ ವ್ಯಕ್ತಿ ಆಗಷ್ಟೇ ಊಟವನ್ನು ಸೇವಿಸಿದ್ದರೆ ರಕ್ತದಲ್ಲಿ ಮೊದಲೇ ಹೆಚ್ಚಿನ ಮಟ್ಟದಲ್ಲಿರುವ ಸಕ್ಕರೆಯ ಪ್ರಮಾಣ ಇನ್ನಷ್ಟು ಏರಿಕೆಯಾಗುತ್ತದೆ. ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟ ಕಡಿಮೆಯಿರುವುದರಿಂದ ಈ ಹೆಚ್ಚುವರಿ ಸಕ್ಕರೆಯನ್ನು ಸಂಸ್ಕರಿಸಲು ಶರೀರವು ಕಠಿಣವಾಗಿ ಶ್ರಮಿಸಬೇಕಾಗುತ್ತದೆ. ಇದು ವ್ಯಕ್ತಿಯು ಯಾವುದೇ ಶ್ರಮದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರದಿದ್ದರೂ ಆತನಲ್ಲಿ ದಿಢೀರ್ ದಣಿವಿಗೆ ಕಾರಣವಾಗುತ್ತದೆ.


ದಿನದ ಯಾವುದೇ ಹೊತ್ತಿನ ಊಟದ ನಂತರ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಇನ್ನಷ್ಟು ಹೆಚ್ಚುವುದರಿಂದ ಮಧುಮೇಹ ದಣಿವನ್ನುಂಟು ಮಾಡುತ್ತದೆ ನಿಜ. ಆದರೆ ದಿನದ ಮಧ್ಯಾವಧಿಯಲ್ಲಿ ದಣಿವಾಗುವುದು ಮಧುಮೇಹದ ಪ್ರಬಲ ಲಕ್ಷಣವಾಗುತ್ತದೆ. ಏಕೆಂದರೆ ಮಧುಮೇಹ ಇಲ್ಲದವರಲ್ಲಿ ಈ ಅವಧಿಯಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ತುಲನಾತ್ಮಕವಾಗಿ ಕಡಿಮೆಯಾಗಿರುತ್ತದೆ ಮತ್ತು ಊಟದ ಬಳಿಕ ಅವರಲ್ಲಿ ದಣಿವು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಈ ಅವಧಿಯಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆಯು ವ್ಯಕ್ತಿಯು ಮಧುಮೇಹದಿಂದ ಪೀಡಿತನಾಗಿರಬಹುದು ಎನ್ನುವುದಕ್ಕೆ ಒತ್ತು ನೀಡುತ್ತದೆ.
ಆದರೆ ದಿನದ ಮಧ್ಯಾವಧಿಯಲ್ಲಿ ದಣಿವು ಕಾಣಿಸಿಕೊಳ್ಳುವ ಇದೊಂದೇ ಲಕ್ಷಣವು ವ್ಯಕ್ತಿಗೆ ಮಧುಮೇಹವಿದೆ ಎನ್ನುವುದನ್ನು ಕರಾರುವಾಕ್ಕಾಗಿ ನಿರ್ಧರಿಸಲು ಸಾಲುವುದಿಲ್ಲ. ಇದರೊಂದಿಗೆ ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರವಿಸರ್ಜನೆ, ದಿಢೀರ್ ಆಗಿ ದೇಹದ ತೂಕ ಇಳಿಕೆ, ಮಸುಕಾದ ದೃಷ್ಟಿ, ಹಸಿವಿನಲ್ಲಿ ಏರಿಳಿತಗಳು, ಕುಂದಿದ ನಿರೋಧಕ ಶಕ್ತಿ, ಗಾಯಗಳು ಮಾಯಲು ವಿಳಂಬ, ಕಾಯಿಲೆಗಳು ನಿಧಾನವಾಗಿ ವಾಸಿಯಾಗುವುದು, ಕುಂದಿದ ಚಯಾಪಚಯ, ಚರ್ಮದಲ್ಲಿ ತುರಿಕೆ, ಕೈಕಾಲುಗಳು ಮರಗಟ್ಟಿದ ಮತ್ತು ಜುಮುಗುಡುವ ಅನುಭವ ಇತ್ಯಾದಿಗಳಂತಹ ಒಂದೆರಡು ಲಕ್ಷಣಗಳೂ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ.
 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News